ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಸಾಧನೆ ಗಣನೀಯ
ದೊಡ್ಡಬಳ್ಳಾಪುರ: ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಬೇಕು. ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನೆಗಳು ಮತ್ತು ಸೃಜನಶೀಲ ಚಿಂತನೆಗಳನ್ನು ಪ್ರಚೋದಿಸಬೇಕು ಎಂದು ಕೇಂದ್ರ ಜವಳಿ ಸಚಿವ ಕಾವೂರಿ ಸಾಂಬಶಿವರಾವ್ ಅಭಿಪ್ರಾಯಪಟ್ಟರು.
ಇಲ್ಲಿನ ನಾಗದೇನಹಳ್ಳಿ ಬಳಿಯ ಗೀತಂ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಸಂಜೆ ನಡೆದ ನೂತನ ವಿದ್ಯಾರ್ಥಿ ನಿಲಯ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕೋಕಿಲ ಸದನ ಮತ್ತು ವಿನಯ ಸದನ ಕಟ್ಟಡಗಳನ್ನು ಉದ್ಘಾಟಿಸಿದರು.
ಭಾರತ ಇಂದು ಜ್ಞಾನ ಕ್ಷೇತ್ರದಲ್ಲಿ ಇತರ ದೇಶಗಳಿಗೆ ಮಾದರಿ ಎನಿಸಿದೆ. ಹೊರದೇಶಗಳಿಂದ ಭಾರತಕ್ಕೆ ಶಿಕ್ಷಣ ಪಡೆಯಲು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಂತದಲ್ಲಿ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಭಾರತೀಯರ ಆಲೋಚನೆಗಳು ಅತ್ಯಂತ ಮಹತ್ವದ್ದಾಗಿವೆ.
ಮಾಜಿ ಕೇಂದ್ರ ಸಚಿವ ಡಾ.ಬಿ.ಬಿ.ರಾಮಯ್ಯ ಮಾತನಾಡಿ ಜಾಗತೀಕರಣಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ಇಂದಿನ ಅನಿವಾರ್ಯ. ವಿಶ್ವಮಟ್ಟದ ಶಿಕ್ಷಣ ನೀಡಬೇಕಾದ ಹೊಣೆಗಾರಿಕೆ ಎಲ್ಲ ವಿವಿಗಳ ಮೇಲಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ ಮಹತ್ವದ ಕೆಲಸ ಇಂದು ಉನ್ನತ ಶಿಕ್ಷಣದಿಂದ ಆಗಬೇಕು. ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದ್ದು, ವಾಣಿಜ್ಯೀಕರಣ ತಡೆಗಟ್ಟುವತ್ತ ಗಮನ ಹರಿಸಬೇಕು ಎಂದರು.
ಗೀತಂ ವಿವಿ ಅಧ್ಯಕ್ಷ ಡಾ.ಎಂ.ವಿ.ವಿ.ಎಸ್.ಮೂರ್ತಿ ಮಾತನಾಡಿ, ದೊಡ್ಡಬಳ್ಳಾಪುರ ಬಳಿ ಸ್ಥಾಪಿತವಾಗಿರುವ ಗೀತಂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಂತರರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟವನ್ನು ನಿರೀಕ್ಷಿಸಲಾಗಿದೆ. ವಿಶಾಖಪಟ್ಟಣ, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೀತಂ ಶಿಕ್ಷಣ ಸಂಸ್ಥೆ ನ್ಯಾಕ್ ಮತ್ತು ಎಂಎಚ್ಆರ್ಡಿಯಿಂದ ಎ ಮಾನ್ಯತೆಯನ್ನು ಪಡೆದಿದೆ.
ಯುಜಿಸಿ 12(ಬಿ) ಸ್ಥಾನವನ್ನು ಪಡೆದಿರುವ ಕೆಲವೇ ಖಾಸಗಿ ವಿವಿಗಳಲ್ಲಿ ಗೀತಂ ಕೂಡ ಒಂದು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ಮತ್ತಷ್ಟು ರಚನಾತ್ಮಕವಾಗಿ ಬೆಳೆಸುವ ಉದ್ದೇಶ ಹೊಂದಲಾಗಿದೆ. ಗೀತಂ ಪ್ರವೇಶ ಪರೀಕ್ಷೆಗಳ ಪ್ರಕ್ರಿಯೆ ಈ ಬಾರಿ ದೇಶದ 36 ನಗರ ಕೇಂದ್ರಗಳಲ್ಲಿ ಸಂಪೂರ್ಣ ಆನ್ಲೈನ್ ಮುಖಾಂತರ ನಡೆಯಲಿದೆ ಎಂದು ವಿವರಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಗೀತಂ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಜಿ.ಸುಬ್ರಹ್ಮಣ್ಯಂ, ಬೆಂಗಳೂರು ಸ್ಕೂಲ್ ಆಫ್ ಟೆಕ್ನಾಲಜಿ ನಿರ್ದೇಶಕ ಪ್ರೊ.ವಿಜಯಭಾಸ್ಕರರಾಜು, ಯುಜಿಸಿ ವ್ಯವಹಾರಗಳ ನಿರ್ದೇಶಕ ಪ್ರೊ.ರಾಮಕೃಷ್ಣ, ವ್ಯವಹಾರ ನಿರ್ವಹಣಾ ಶಾಖೆಯ ನಿರ್ದೇಶಕ ಪ್ರೊ.ಎಂ.ವಿ.ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

