ಉಸ್ತುವಾರಿ ಸಚಿವರಿಂದ ಜಿ.ಪಂ. ಸದಸ್ಯರ ಹಕ್ಕು ಮೊಟಕು
ರಾಮನಗರ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮ (ಎನ್.ಆರ್.ಡಿ.ಡಬ್ಲ್ಯು.ಪಿ.) ಅನುಷ್ಠಾನದ ಹೊಣೆಯನ್ನು ಶಾಸಕರಿಗೆ ವಹಿಸುವಂತೆ ಫರ್ಮಾನು ಹೊರಡಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿ.ಪಂ. ಸದಸ್ಯರ ಹಕ್ಕು ಮೊಟಕು ಗೊಳಿಸಿದ್ದಾರೆ.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದರಿ ಕಾರ್ಯಕ್ರಮದಡಿ ಕಾಮಗಾರಿ ಪರಿಶೀಲನೆಯಷ್ಟೇ ಜಿ.ಪಂ. ಸದಸ್ಯ ಹೊಣೆ. ಅದರ ಕ್ರಿಯಾ ಯೋಜನೆ ಸಹಿತ ಬಹುತೇಕ ಜವಬ್ದಾರಿ ಶಾಸಕರದ್ದು ಎಂದರು.
ಎನ್ಆರ್ಡಿಡಬ್ಲ್ಯುಪಿ ಯೋಜನೆಯಡಿ ತಮ್ಮಿಂದ ನಿರ್ದೇಶಿಸಲ್ಪಟ್ಟ ಕಾಮಗಾರಿ ಕೈಗೆತ್ತಿಕೊಳ್ಳಲು, ತಾವು ಸೂಚಿಸಿದ ವ್ಯಕ್ತಿಗಳಿಗೆ ಕಾಮಗಾರಿ ಗುತ್ತಿಗೆ ನೀಡಲು ಅಧಿಕಾರಿಗಳು ಸುತಾರಾಂ ಒಪ್ಪುತ್ತಿಲ್ಲ. ಈ ವಿಷಯವಾಗಿ ಸ್ಪಷ್ಟ ತೀರ್ಮಾನ ಆಗಬೇಕು ಎಂದು ಯೋಗೇಶ್ವರ್ ಪಟ್ಟು ಹಿಡಿದರು.
ದಳಪತಿಗಳ ವಿರೋಧ: ಈ ವಿಷಯವಾಗಿ ಚರ್ಚೆ ಪ್ರಾರಂಭವಾದಾಗ ಸ್ವತಃ ಜಾರ್ಜ್ ಶಾಸಕರ ಪರ ನಿಂತಾಗ ಸಂಸದ ಡಿ.ಕೆ.ಸುರೇಶ್ ಕೂಡ ಧ್ವನಿಗೂಡಿಸಿದರು. ಆದರೆ, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಘುಕುಮಾರ್, ವಿಜಯಕುಮಾರ್, ಸದಸ್ಯ ಧನಂಜಯ ಆಕ್ಷೇಪಿಸಿದರು.
ತಮ್ಮದೇ ಕ್ಷೇತ್ರವಾದ ಮಾಗಡಿಯಲ್ಲೂ ಜಿ.ಪಂ. ಸದಸ್ಯರು ಎನ್ಆರ್ಡಿಡಬ್ಲ್ಯುಪಿ ಅನುಷ್ಠಾನದ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯದ ಇತರೆಡೆಯೂ ಇಂಥದ್ದೇ ವ್ಯವಸ್ಥೆಯಿದೆ. ಈ ಜಿಲ್ಲೆಯಲ್ಲೇಕೆ ಹೊಸ ವ್ಯವಸ್ಥೆ ಜಾರಿಗೆ ತರಲು ಹೊರಟಿದ್ದೀರಿ ಎಂದು ಬಾಲಕೃಷ್ಣ ಸಹಿತ ಇತರರು ವಿರೋಧಿಸಿದರು.
ಮೂಡದ ಒಮ್ಮತ: ಕಡೆಗೆ, ಕಾರ್ಯಕ್ರಮದ ಅನುಷ್ಠಾನ ವಿಷಯವಾಗಿ ಇರುವ ನಿಯಮ ಏನೆನ್ನುವ ಕುರಿತು ಉಸ್ತುವಾರಿ ಸಚಿವ ಜಾರ್ಜ್ ಅವರು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಅವರಿಂದ ವಿವರಣೆ ಕೇಳಿದರು. ಈ ವಿಷಯದಲ್ಲಿ ಇಬ್ಬರೂ ಅಧಿಕಾರಿಗಳ ಅಭಿಪ್ರಾಯ ಭಿನ್ನವಾಗಿತ್ತು.
ಕಪ್ಪುಪಟ್ಟಿಗೆ ಸೇರಿಸಿ: ಚನ್ನಪಟ್ಟಣ ತಾಲೂಕಿನಲ್ಲಿ 35 ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರು ಕೆಲಸ ಮಾಡದೆ ಹಿಂದೆ ಸರಿದಿದ್ದಾರೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲವೇ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಾರ್ಜ್ ಎಚ್ಚರಿಸಿದರು.
ಕಾಡಿದ ಕರೆಂಟ್ ಕಾಟ: ರಾಮನಗರ ಜಿಲ್ಲೆಯಲ್ಲಿ ವಿದ್ಯುತ್ ಬವಣೆ ಹೆಚ್ಚಿರುವ ಕುರಿತು ತಮ್ಮ ಗಮನಕ್ಕೆ ತಾರದ ಬೆಸ್ಕಾಂ ಅಧಿಕಾರಿಗಳನ್ನು ಬೆವರಿಳಿಸಿದ ಸಚಿವ ಜಾರ್ಜ್, ಕೊರತೆ ಇರುವ ವಿದ್ಯುತ್ ಪ್ರಮಾಣ ಎಷ್ಟೆನ್ನುವುದನ್ನು ನಿಖರವಾಗಿ ಬಹಿರಂಗಪಡಿಸಲು ಸೂಚಿಸಿದರು. ಸಭೆಯಲ್ಲೂ ಆಗಾಗ್ಗೆ ಕರೆಂಟ್ ಕಟ್ ಆಗುತ್ತಲೇ ಇತ್ತು. ಇದು ಸಚಿವರನ್ನು ಸಹಜವಾಗಿಯೇ ಮತ್ತಷ್ಟು ಕೆರಳಿಸಿತು. ಕುಡಿಯುವ ನೀರು, ಕೈಗಾರಿಕೆ, ಕೃಷಿ ಸಹಿತ ಸಾಕಷ್ಟು ಕ್ಷೇತ್ರಗಳ ಮೇಲೆ ವಿದ್ಯುತ್ ಬವಣೆಯಿಂದ ಆಗುತ್ತಿರುವ ಬವಣೆ ತಪ್ಪಿಸಲು ಹೆಚ್ಚುವರಿ ವಿದ್ಯುತ್ ಕೊಡಿಸುವ ಭರವಸೆ ನೀಡಿದರು.
ಕುಮಾರಸ್ವಾಮಿ ಆಗ್ರಹ: ರಾಮನಗರದಲ್ಲಿ ಜಿಲ್ಲಾಸ್ಪತ್ರೆ ಸ್ಥಾಪನೆಗೆ ರು.30 ಕೋಟಿ ಬಿಡುಗಡೆಗೊಂಡು 4 ವರ್ಷವಾಗಿದೆ. ಅದರ ಮೇಲೆ ರು.9 ಕೋಟಿಯಷ್ಟು ಬಡ್ಡಿಯೂ ಬೆಳೆದಿದೆ. ತಕ್ಷಣವೇ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಜರುಗಿಸಬೇಕು ಎಂದು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಬಡವರಿಗೆ ಮನೆ ಹಂಚಿ: ರಾಮನಗರದಲ್ಲಿ ಸೂರು ಕಲ್ಪಿಸಿಕೊಳ್ಳಲು ಸಾವಿರಾರು ಬಡ ಜನರು ಸಾಲ ಸೋಲ ಮಾಡಿ ತಲಾ ರು.5 ಸಾವಿರವನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಿ 6 ವರ್ಷವಾಗಿದೆ. ಅವರೆಲ್ಲರಿಗೂ ಮಾರ್ಚ್ ಅಂತ್ಯದೊಳಗೆ ಮನೆ ನಿರ್ಮಿಸಿಕೊಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ಸ್ದಸ್ಯ ಇ. ಕೃಷ್ಣಪ್ಪ, ಜಿ.ಪಂ. ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿ.ಪಂ. ಉಪ ಕಾರ್ಯದರ್ಶಿ ಲತಾ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

