ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಆದೇಶ ಧಿಕ್ಕಾರ
ಕ.ಪ್ರ.ವಾರ್ತೆ ರಾಮನಗರ ಡಿ.24
ಮಹನೀಯರು ಮಡಿದಾಗ ಸರ್ಕಾರವು ಶೋಕಾಚರಣೆ ಘೋಷಿಸಿ, ಮೃತರ ಗೌರವಾರ್ಥ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವುದು ವಾಡಿಕೆ. ಆದರೆ, ಇಲ್ಲಿನ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ನೀಡದೆ ಒಂದೆಡೆ ಸರ್ಕಾರಿ ಆದೇಶವನ್ನೂ ಧಿಕ್ಕರಿಸಿ, ಮತ್ತೊಂದೆಡೆ ಮೃತ ಗಣ್ಯರಿಗೂ ಅಗೌರವ ಸೂಚಿಸುವ ಕೆಲಸದಲ್ಲಿ ತೊಡಗಿದೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನ ಹಿನ್ನೆಲೆಯಲ್ಲಿ ಸರ್ಕಾರ ಎರಡು ದಿನ ಶೋಕಾರಣೆ ಘೋಷಿಸಿ, ಮಂಗಳವಾರ (ಡಿ.24) ಸರ್ಕಾರಿ ರಜೆಯನ್ನೂ ಘೋಷಿಸಿತ್ತು. ಇಷ್ಟಾಗಿಯೂ ರಾಮನಗರದಲ್ಲಿ ಎರಡು ಶಾಲೆಗಳಲ್ಲಿ ತರಗತಿ ಪ್ರಾರಂಭವಾಗಿದ್ದರೆ, ಮತ್ತೊಂದು ಶಾಲೆಯಲ್ಲಿ ಶೋಕಾಚರಣೆ ನಡುವೆಯೂ ಅದ್ಧೂರಿ ಶಾಲಾ ವಾರ್ಷಿಕೋತ್ಸವ ಜರುಗಿದೆ. ನಗರದ ಎಂ.ಎಚ್. ಶಿಕ್ಷಣ ಸಂಸ್ಥೆ ಹಾಗೂ ಶಾಂತಿನಿಕೇತನ ಶಾಲೆಯಲ್ಲಿ ಎಂದಿನಂತೆ ಮಂಗಳವಾರ ಬೆಳಗ್ಗೆ ತರಗತಿ ಪ್ರಾರಂಭವಾಗಿತ್ತು. ವಿಷಯ ತಿಳಿದು ವರದಿ ಮಾಡಲು ಕೆಲ ಸುದ್ದಿಗಾರರು ಸ್ಥಳಕ್ಕೆ ತೆರಳಿದರು. ಆಗ ಎಂ.ಎಚ್. ಶಾಲೆ ಮುಖ್ಯಸ್ಥರು ಇದು ವಿಶೇಷ ತರಗತಿಯಷ್ಟೇ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಕಡೆಗೆ ರಜೆ ಜಾರಿಗೊಳಿಸಿ ಮಕ್ಕಳನ್ನು ಮನೆಗೆ ಕಳುಹಿಸಿದರು.
ಆದರೆ, ಶಾಂತಿನಿಕೇತನ ಶಾಲೆಯ ಆಡಳಿತ ವರ್ಗದ ವಾದವೇ ಬೇರೆಯಾಗಿತ್ತು. ರಜೆ ಕೊಟ್ಟರೆ ಮಕ್ಕಳು ಹೊರಗೆಲ್ಲೋ ಹೋಗಿ ಕುಣಿದು, ಕುಪ್ಪಳಿಸುತ್ತಾರೆ. ಅದರ ಬದಲು ತರಗತಿ ನಡೆಸಿ, ಮೃತ ಜಿ.ಎಸ್. ಶಿವರುದ್ರಪ್ಪ ಬಗ್ಗೆ ಒಂದಿಷ್ಟು ಹೇಳುವುದು ಸೂಕ್ತ ಎಂದರು.
ದೃಶ್ಯ ಮಾಧ್ಯಮ ಪ್ರತಿನಿಧಿಗಳು ವೀಡಿಯೋ ಮಾಡುತ್ತಿದ್ದನ್ನು ಕಂಡು ಅಲ್ಲೂ ಮಕ್ಕಳನ್ನು ತರಗತಿಯಿಂದ ಹೊರಕ್ಕೆ ಕಳುಹಿಸಿ ಕದ ಮುಚ್ಚಲಾಯಿತು. ಇದೆಲ್ಲಾ ಒಂದೆಡೆಯಾದರೆ, ಪಟೇಲ್ ಶಾಲೆಯ ವರಸೆಯೇ ಬೇರೆ. ಶೋಕಾಚರಣೆ ನಡುವೆಯೂ ಅಲ್ಲಿ ಮನರಂಜನಾ ಕಾರ್ಯಕ್ರಮದೊಟ್ಟಿಗೆ ಶಾಲಾ ವಾರ್ಷಿಕೋತ್ಸವ ಜರುಗಿತು. ಪೂರ್ವ ನಿಗದಿತ ಕಾರ್ಯಕ್ರಮ, ಪೋಷಕರು ಮತ್ತು ಗಣ್ಯರನ್ನೆಲ್ಲಾ ಆಹ್ವಾನಿಸಿದ್ದೇವೆ. ಯಾರೋ ತೀರಿಕೊಂಡರೆಂದು ಕಾರ್ಯಕ್ರಮ ಮುಂದೂಡುವುದು ಏಕೆ ಎನ್ನುವ ಧೋರಣೆ ಆ ಶಾಲೆಯ ಆಡಳಿತ ವರ್ಗ ಮತ್ತು ಶಿಕ್ಷಕ ಸಮುದಾಯದ್ದಾಗಿತ್ತು. ನಾಡಿಗೆ ನಾಡೇ ಶೋಕಾಚರಣೆಯಲ್ಲಿ ಮುಳುಗಿರುವಾಗ ಕೆಲ ಗಣ್ಯರು ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗಿಯಾದದ್ದು ವಿಪರ್ಯಾಸದ ಸಂಗತಿಯೇ ಸರಿ.
ವಿವಾದಕ್ಕೀಡಾಗಬಹುದು ಎಂದು ಕೆಲ ರಾಜಕಾರಣಿಗಳು ಕಾರ್ಯಕ್ರಮದಿಂದ ದೂರ ಉಳಿದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಸಹಿತ ಹಲವರು ಶಾಲಾ ವಾರ್ಷಿಕೋತ್ಸವದ ವೈಭವದಲ್ಲಿ ಭಾಗಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

