ಮೂಲ ಸೌಕರ್ಯ ಒದಗಿಸುವುದು ಆದ್ಯ ಕರ್ತವ್ಯ: ಶ್ರೀನಿವಾಸ ಮೂರ್ತಿ
ನೆಲಮಂಗಲ: ಗ್ರಾಮಗಳಿಗೆ ಅವಶ್ಯಕ ಮೂಲಭೂತ ಸೌಕರ್ಯ ಹಾಗೂ ಜನತೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಅದನ್ನು ಅರಿತು ಪ್ರತಿಯೊಬ್ಬ ಸದಸ್ಯರು ಪಕ್ಷಾತೀತವಾಗಿ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ಅವರು ಶನಿವಾರ ತಾಲ್ಲೂಕಿನ ಸೋಂಪುರ ಗ್ರಾಮ ಪಂಚಾಯ್ತಿ ವತಿಯಿಂದ ನಡೆದ ಎರಡನೆ ಗ್ರಾಮ ಸಭೆಯನ್ನು ಉದ್ಘಾಟಿಸಿ ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಗ್ರಾಮದ ಸ್ವಚ್ಛತೆಗಾಗಿ ಹಾಗೂ ಜನರ ಉಪಯೋಗಕ್ಕಾಗಿ ಟ್ರ್ಯಾಕ್ಟರ್ ಖರೀದಿಸಿದೆ. ಇದರಿಂದ ಗ್ರಾಮದಲ್ಲಿ ಉಂಟಾಗುವ ಕಸವನ್ನು ಸಾಗಿಸಲು ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆಯಾದರೆ ನೀರು ಸರಬರಾಜು ಮಾಡಲು ಟ್ಯಾಂಕರ್ ಬಳಕೆ ಮತ್ತು ವಾಹನಗಳ ನಿಲ್ದಾಣ ನಿರ್ಮಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುತ್ತಾ ಮಾದರಿಯಾಗಿದೆ ಎಂದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸರ್ಕಾರದ ಗೋಮಾಳದ ಜಮೀನನ್ನು ಗುರುತಿಸಿ ಮೊದಲು ಸ್ಮಶಾನಕ್ಕಾಗಿ
ಸ್ಥಳವನ್ನು ಮೀಸಲಿಟ್ಟು ಬಡವರಿಗೆ ಆಶ್ರಯ ಯೋಜನೆ ಮೂಲಕ ಬಡವರಿಗಾಗಿ ಬಡಾವಣೆಯನ್ನು ನಿರ್ಮಿಸಿ ನಿವೇಶನ ನೀಡಲು ಮುಂದಾಗಬೇಕು. ಸ್ಥಳವನ್ನು ಗುರುತಿಸುವ ಕಾರ್ಯ ಮಾಡಿದರೆ ಮುಂದೆ ನಿಂತು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಶೀಘ್ರದಲ್ಲಿಯೇ ಸಭೆ: ಸೋಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೈಗಾರಿಕೆಗಳು ಇದ್ದು ವಾರ್ಷಿಕ ಆದಾಯದ ಎರಡರಷ್ಟು ಹಣವನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯ ಅಭಿವೃದ್ಧಿಗೆ ಮೀಸಲಿಡುವಂತೆ ಕೈಗಾರಿಕೆ ಮುಖ್ಯಸ್ಥರಿಗೆ ಮನವರಿಕೆ ಮಾಡಲು ಶೀಘ್ರದಲ್ಲಿಯೇ ಸಭೆ ಕರೆದು ಸರ್ಕಾರದ ಯೋಜನೆಯನ್ನು ಫಲಪ್ರದಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಅಪಾಯಕಾರಿ ರಾಸಾಯನಿಕ ವಿಷತ್ಯಾಜ್ಯ ವಿಲೇವಾರಿ ಘಟಕದಿಂದ ಸಹಿಸಲಾಗದಷ್ಟು ವಾಸನೆ ಬರುತ್ತಿದ್ದು ಈ ಘಟಕವನ್ನು ಸ್ಥಳಾಂತರಿಸುವಂತೆ ಜನ ಶಾಸಕರಿಗೆ ಒತ್ತಾಯಿಸಿದರು. ಈ ಸಮಸ್ಯೆಗೆ ಸ್ಪಂದಿಸಿದ ಶಾಸಕರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಜನರ ಮೂಲಕವೇ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ತೀರ್ಥಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾನೂನು ಬದ್ಧವಾಗಿ ಯಾವುದೇ ಬಡಾವಣೆಗಳು ನಿರ್ಮಾಣಗೊಂಡಿದ್ದರೆ ಅಲ್ಲಿಗೆ ಸಂಪೂರ್ಣ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಕ್ರಮ ಬಡಾವಣೆಗಳಿಗೆ ಸೌಲಭ್ಯ ಒದಗಿಸಲು ಕಾನೂನು ರೀತಿಯ ತೊಂದರೆಯಾಗುತ್ತದೆ ಎಂದರು.
ಪಂಚಾಯ್ತಿ ಸದಸ್ಯರ ಸಹಕಾರದಿಂದ ಪಂಚಾಯ್ತಿಗೆ ಬರುವ ಆದಾಯವನ್ನು ಸಂಗ್ರಹಿಸಲು ಸೂಕ್ತ ಕ್ರಮ ತೆಗೆದುಕೊಂಡು ಕೈಗಾರಿಕೆಗಳ ಮಾಲೀಕರು ಮತ್ತು ವಾಣಿಜ್ಯಗಾರರು ನೀಡುವ ತೆರಿಗೆಯನ್ನು ಸಂಗ್ರಹಿಸಿ ಪಂಚಾಯ್ತಿ ಅಭಿವೃದ್ಧಿಗೆ ವ್ಯಯಿಸಲಾಗುವುದು ಎಂದರು.
ನೋಡಲ್ ಅಧಿಕಾರಿ ಪ್ರಕಾಶ್, ತಾ.ಪಂ.ಅಧ್ಯಕ್ಷೆ ಸರಸ್ವತಮ್ಮ, ಸದಸ್ಯ ವೀರಣ್ಣ, ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್, ಉಪಾಧ್ಯಕ್ಷೆ ಇಂದ್ರಮ್ಮ ಸದಸ್ಯರಾದ ಜಯಮ್ಮ, ಶಾರದಮ್ಮ, ಧನಲಕ್ಷ್ಮಿ, ಕುಮಾರ್, ಕೃಷ್ಣೇಗೌಡ, ಜಗದೀಶ್, ದೈವಕುಮಾರ್, ನಾಗರತ್ನಮ್ಮ, ಶಿವಣ್ಣ, ಲೋಕೇಶ್, ಶಿವಕುಮಾರ್, ಶ್ರೀದೇವಿ, ಮಂಜುಳ, ಮಂಗಳಮ್ಮ, ಮಮತ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮುರುಡಯ್ಯ, ಕಾರ್ಯದರ್ಶಿ ಕೆಂಪರಂಗಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

