ಬೆಂಗಳೂರು ಗ್ರಾಮಾಂತರ

ಸಂಸ್ಕೃತಿಯ ಸಾರ್ವತ್ರೀಕರಣ ಕನ್ನಡ ಮನಸ್ಸುಗಳ ಗುರಿಯಾಗಲಿ

Published On :

ದೊಡ್ಡಬಳ್ಳಾಪುರ: ಸಮಕಾಲೀನ ಸಂದರ್ಭದಲ್ಲಿ ಕನ್ನಡ ಪ್ರಜ್ಞೆ ಕ್ಷೀಣಿಸುತ್ತಿದೆ. ಗಡಿ, ಭಾಷೆ, ಜಲ, ಸಂಸ್ಕೃತಿಯ ಅರಿವು ಮತ್ತು ಅದರ ಸಾರ್ವತ್ರೀಕರಣ ಎಲ್ಲ ಕನ್ನಡಪರ ಮನಸ್ಸುಗಳ ಗುರಿಯಾಗಬೇಕು ಎಂದು ಕನ್ನಡಪರ ಹೋರಾಟಗಾರ ಕೆ.ರಾಜ್ಕುಮಾರ್ ಹೇಳಿದರು.
ಇಲ್ಲಿನ ನಾಗದಳ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ ಶನಿವಾರ ನಡೆದ ಕನ್ನಡ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಮತ್ತು ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ ಕುರಿತು ಮಾತನಾಡಿದರು.
ಜಗತ್ತಿನ 2 ಸಾವಿರಕ್ಕೂ ಹೆಚ್ಚಿನ ಭಾಷೆಗಳಲ್ಲಿ ಕನ್ನಡ ಮೊದಲ ಹತ್ತು ಸ್ಥಾನದೊಳಗಿನ ಮಹತ್ವದ ಸ್ಥಾನಗೌರವ ಹೊಂದಿದೆ. ಕನ್ನಡಕ್ಕೆ ಆತಂಕಗಳಿವೆ ಎಂಬ ಭ್ರಮೆಗಳನ್ನು ಬಿತ್ತುವ ಕೆಲಸ ನಿಲ್ಲಬೇಕು. ಇಂಗ್ಲಿಷನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿರುವ ಇಂಗ್ಲೆಂಡ್ನ ಜನಸಂಖ್ಯೆಗಿಂತಲೂ ಕನ್ನಡ ಭಾಷಿಕ ಪ್ರದೇಶದಲ್ಲಿ ವಾಸಿಸುವ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಪ್ರಾಚೀನತೆ ಒಂದೇ ಅನನ್ಯತೆ ಎಂದು ಕೊಂಡರೆ ತಮಿಳಿನ ರೀತಿಯಲ್ಲಿ ವೈಕಲ್ಯ ಹೊಂದಬೇಕಾಗುತ್ತದೆ. ಭಾಷಿಕ ಕೊಡು-ಕೊಳ್ಳುವಿಕೆಯಿಂದಲೇ ಕನ್ನಡ ಪರಿಪೂರ್ಣ ಭಾಷೆಯಾಗಿದೆ. ಪ್ರಾಚೀನತೆಯೊಂದಿಗೆ ವರ್ತಮಾನದ ಸಂವೇದನೆಯೂ ಕನ್ನಡಕ್ಕಿದೆ ಎಂದರು.
ಹಿಂದಿ ಈ ದೇಶದ ಅಧಿಕೃತ ರಾಷ್ಟ್ರಭಾಷೆಯಲ್ಲ. ಸಂವಿಧಾನವೂ ರಾಷ್ಟ್ರ ಭಾಷೆಯಾಗಿ ಯಾವುದೇ ಒಂದು ಭಾಷೆಗೆ ಮನ್ನಣೆ ನೀಡಿಲ್ಲ. ಆದರೆ ಕೇಂದ್ರ ಸರ್ಕಾರದ ಆಡಳಿತ ಭಾಷೆ ಹಿಂದಿಯಾಗಿದೆಯಷ್ಟೆ. ವಿನೋಬಾ ಬಾವೆ ಅವರು ಹೇಳಿರುವಂತೆ ಕನ್ನಡ ಜಗತ್ತಿನ ಲಿಪಿಗಳ ರಾಣಿ. ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಿದ್ದರೆ ರಾಜ್ಯೋತ್ಸವಗಳು ಭಾಷಿಕ ಚಿಂತನೆಯ ವೇದಿಕೆಗಳಾಗಬೇಕು. ಕನ್ನಡ ವಿಕಸನ ಕಾರ್ಯಕ್ರಮಗಳು, ಮಾತುಗಾರಿಕೆ ಸ್ಪರ್ಧೆಗಳು, ರಸಪ್ರಸ್ನೆ, ಶುದ್ಧ ಕನ್ನಡ ಅವಲೋಕನ, ಭಾಷೆಗೆ ಸಂಬಂಧಿಸಿದ ಚಟುವಟಿಕೆಗಳು, ವೈವಿಧ್ಯತೆಯನ್ನು ಬಿಂಬಿಸುವ ಕನ್ನಡ ಪ್ರಜ್ಞೆ ರೂಪಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಾಗದಳದ ಸಂಚಾಲಕರಾದ ಸಿ.ನಟರಾಜ್, ಸಂ.ಸು.ಬದ್ರಿನಾಥ್, ಕನ್ನಡ ಜಾಗೃತ ಪರಿಷತ್ತಿನ ತ.ನ.ಪ್ರಭುದೇವ್, ಡಿ.ವಿ.ಅಶ್ವತ್ಥಪ್ಪ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ. ಆಂಜನೇಯ, ಕಸಾಪ ತಾ.ಅಧ್ಯಕ್ಷ ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಎನ್.ಲಕ್ಷ್ಮೀ, ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಡಿ.ಸಿ.ಚೌಡರಾಜು, ಸಾಹಿತಿ ಎಂ.ಇ.ಖಲೀಲುಲ್ಲಾಖಾನ್, ಕರವೇ ರಾಜ್ಯ ಉಪಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ತಾ.ಕಾರ್ಯದರ್ಶಿ ರಾಜಘಟ್ಟ ರವಿ, ಕನ್ನಡಪಕ್ಷದ ವೆಂಕಟೇಶ್, ಪ್ರಕಾಶ್ರಾವ್, ಎಸ್.ಎಸ್.ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.