ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿಲೀಟರ್ ಹಾಲಿಗೆ ರು. 2 ಹೆಚ್ಚಳ
ಚನ್ನಪಟ್ಟಣ: ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿಲೀಟರ್ ಹಾಲಿಗೆ 2 ರು. ದರ ಹೆಚ್ಚಳ ಮಾಡುವ ಮೂಲಕ ಬೆಂಗಳೂರು ಹಾಲು ಒಕ್ಕೂಟ ಹೊಸವರ್ಷಕ್ಕೆ ರೈತರಿಗೆ ಬಂಪರ್ ಕೊಡುಗೆ ನೀಡಿದೆ. ಶನಿವಾರ ಬಮೂಲ್ ಅಧ್ಯಕ್ಷ ಸಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಆಡಳಿತ ಮಂಡಲಿ ಸಭೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದ್ದು. ಪರಿಷ್ಕೃತ ದರ ಜ.1 ರಿಂದ ಜಾರಿಗೆ ಬರಲಿದೆ.
ಇದೀಗ ರೈತರಿಂದ ಖರೀದಿಸುವ ಪ್ರತಿಲೀಟರ್ ಹಾಲಿಗೆ ಬೆಂಗಳೂರು ಒಕ್ಕೂಟ 21 ರೂ. ನೀಡುತ್ತಿದ್ದು ನೂತನ ದರ ಜಾರಿಯಾದಲ್ಲಿ 23 ರೂ. ಸಿಗಲಿದೆ. ಇದರೊಂದಿಗೆ ಸರ್ಕಾರ ಪ್ರತಿ ಲೀಟರ್ಗೆ 4 ರು. ಸಬ್ಸಿಡಿ ನೀಡುತ್ತಿದ್ದು ಒಟ್ಟಾರೆ ರೈತರಿಗೆ ಪ್ರತಿ ಲೀಟರ್ಗೆ 27 ರು.ಸಿಗಲಿದೆ.
ಕಾರ್ಯದರ್ಶಿಗಳಿಗೂ ಕೊಡುಗೆ: ರೈತರ ಜತೆಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮತ್ತು ಸಂಘಕ್ಕೂ ಪ್ರೋತ್ಸಾಹ ಧನ ನೀಡುವ ನಿರ್ಣಯ ಕೈಗೊಂಡಿದ್ದು ಜ.1 ರಿಂದ ಪ್ರತಿ ಲೀಟರ್ ಹಾಲಿಗೆ ಕಾರ್ಯದರ್ಶಿಗೆ 15 ಪೈಸೆ, ಸಂಘಕ್ಕೆ 15 ಪೈಸೆ ಹಣವನ್ನು ಒಕ್ಕೂಟ ನೀಡಲಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರು ಮತ್ತು ಸಂಘದ ಆಡಳಿತಾತ್ಮಕ ಖರ್ಚಿಗೆ ನೆರವು ನೀಡಬೇಕೆಂಬ ಬಹುದಿನದ ಬೇಡಿಕೆಗೆ ಆಡಳಿತ ಮಂಡಲಿ ಸ್ಪಂದಿಸಿದೆ.
ಗುಣಮಟ್ಟದ ಹಾಲು ನೀಡಿ: ಹಾಲು ಉತ್ಪಾದಕರಿಂದ ರಚಿತವಾಗಿರುವ ನಮ್ಮ ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಗೊಳಿಸಿದೆ. ಪಶು ಆಹಾರ ಮತ್ತು ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ, ಕಾಲುಬಾಯಿ ಜ್ವರದಿಂದ ಕಂಗಾಲಾಗಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್ ಮತ್ತು ಪಿ.ನಾಗರಾಜು ತಿಳಿಸಿದ್ದಾರೆ.
ಬೆಲೆ ಹೆಚ್ಚಳ ಮಾಡಲು ಸಹಕರಿಸಿರುವ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಟಿ. ಗುರುಲಿಂಗಯ್ಯ ಮತ್ತು ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿರುವ ಅವರು, ರೈತರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಒಕ್ಕೂಟಕ್ಕೆ ಒತ್ತಾಸೆಯಾಗಿ ನಿಂತಲ್ಲಿ ಇನ್ನೂ ಹೆಚ್ಚಿನ ದರವನ್ನು ರೈತರಿಗೆ ನೀಡಲು ಸಹಕಾರಿಯಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

