ತೆರಿಗೆ ವಸೂಲಿಗೆ ನಗರಸಭೆ ಅಧಿಕಾರಿಗಳು ವಿಫಲ
ಚನ್ನಪಟ್ಟಣ: ತೆರಿಗೆಹಣ ಸಂಗ್ರಹಿಸುವಲ್ಲಿ ವಿಫಲಗೊಂಡಿರುವ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಹಾಗೂ ನಗರಸಭಾ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಸಾಲಿನ ಬಜೆಟ್ ತಯಾರಿಕೆ ಹಿನ್ನೆಲೆಯಲ್ಲಿ ಪುಭವನದಲ್ಲಿ ನಗರಸಭೆ ವತಿಯಿಂದ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಸದಸ್ಯರು ಕಳೆದ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಹಣವನ್ನು ಸಂಗ್ರಹಿಸಿಲ್ಲ ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ತೀವ್ರ ತರಾಟೆ ತೆಗೆದು ಕೊಂಡರು.
ಕಳೆದ ಸಾಲಿನಲ್ಲಿ ನಗರಸಭೆ 2.20 ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು, ಆದರೆ ಕೇವಲ 50 ಲಕ್ಷ ರು. ಮಾತ್ರ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಕೆಂಡಮಂಡಲರಾದ ಸದಸ್ಯ ಉಮಾಶಂಕರ್ ಆದಾಯವಿಲ್ಲದೆ ನೀವ್ಯಾವ ಬಜೆಟ್ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ವ್ಯವಸ್ಥೆ ಸತ್ತಿದೆ: ಸಭೆಯಲ್ಲಿ ಮಾತನಾಡಿದ ಸದಸ್ಯ ವಿಷಕಂಠ ಮೂರ್ತಿ ನಗರಸಭಾ ಆಡಳಿತ ಸ್ಥಬ್ದ ಗೊಂಡಿದೆ. ಸಾರ್ವಜನಿಕ ಕೆಲಸಕಾರ್ಯಗಳು ನಡೆಯುತ್ತಿಲ್ಲ ಪಟ್ಟಣದ ನೈರ್ಮಲ್ಯ,ರಸ್ತೆ ಯಾವುದೂ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಸಮರ್ಪಕವಾದ ಕಾಮಗಾರಿಗಳಿಗೆ ಹಣ ವಿನಿಯೋಗ ಮಾಡಿಲ್ಲ ಬೇಕಾಬಿಟ್ಟಿ ಹಣ ಖರ್ಚುಮಾಡಿ ಸಾರ್ವಜನಿಕ ಹಣವನ್ನು ಪೋಲು ಮಾಡಿದ್ದೀರಿ, ಪುಟ್ಪಾತ್ ವ್ಯಾಪಾರದ ಗೊಂದಲ ಸರಿಪಡಿಸುವಲ್ಲಿ ನಗರಸಭೆ ವಿಫಲಗೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು.
ನಗರಸಭೆಯ ಕೆಲ ಸಿಬ್ಬಂದಿ ಉಳಿದಲ್ಲೇ ಉಳಿದು ಜಡ್ಡುಗಟ್ಟಿದ್ದಾರೆ. ನಗರಸಭೆ ಸಿಬ್ಬಂದಿಯನ್ನು ಬದಲಾಯಿಸಿ ಎಂದು ಹೇಳಿ 15 ದಿನವಾದರೂ ಬದಲಾವಣೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಚರಂಡಿ ನಿರ್ಮಾಣ ಮಾಡಿ: ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಮುದ್ದುಕೃಷ್ಣ ಪಟ್ಟಣದ ಯಾವ ವಾರ್ಡ್ ನಲ್ಲಿ ಸೂಕ್ತಚರಂಡಿ ವ್ಯವಸ್ಥೆ ಇಲ್ಲ ಎಂಬುದನ್ನು ಪರಿಶೀಲಿಸಿ ಅಲ್ಲಲ್ಲಿ ಚರಂಡಿ ನಿರ್ಮಾಣ ಮಾಡಲು ಬಜೆಟ್ನಲ್ಲಿ ಹಣ ಕಾಯ್ದಿರಿಸಿ. ಅಗತ್ಯ ನಾಗರಿಕ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುವ ಕಾರ್ಯ ನಡೆಯ ಬೇಕಿದೆ ಎಂದು ಸಲಹೆ ನೀಡಿದರು.
53 ಲಕ್ಷ ದುರ್ಬಳಕೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆಂದು ಮೀಸಲಿರಿಸಿದ್ದ ಶೇ.18.5ರ ನಿಧಿಯನ್ನು ಅನ್ಯಕಾರ್ಯಗಳಿಗೆ ಬಳಸುವ ಮೂಲಕ ಪ್ರಮಾದವೆಸಗಿದ್ದು ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸ ಬೇಕೆಂದು ಸದಸ್ಯ ವಿಷಕಂಠಮೂರ್ತಿ, ದಲಿತ ಮುಖಂಡ ವೆಂಕಟಾಚಲಯ್ಯ ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಜನಾಂಗದ ನಿಜವಾದ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಸಿಗದಾಗಿದ್ದು, ಇನ್ನಾದರೂ ಬಲಾಢ್ಯರಿಗೆ ಅನುದಾನ ನೀಡುವ ಕೆಲಸವನ್ನು ಬಿಟ್ಟು ಅರ್ಹರಿಗೆ ಸೌಲಭ್ಯ ತಲುಪಿಸುವ ಕಾರ್ಯ ನಡೆಯಲಿ ಎಂದು ಆಗ್ರಹಿಸಿದರು.
ವಾರ್ಡ್ ಗೊಂದು ಅಂಗನವಾಡಿ ನೀಡಿ: ಪಟ್ಟಣದ ಸಾಕಷ್ಟು ವಾರ್ಡ್ ಗಳಲ್ಲಿ ಅಂಗನವಾಡಿ ಕೇಂದ್ರಗಳಿಲ್ಲದಿದ್ದು ಇದಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಸದಸ್ಯ ಜೆಸಿಬಿ ಲೋಕೇಶ್ ಆಗ್ರಹಿಸಿದರು. ಪಟ್ಟಣದ 20 ವಾರ್ಡ್ಗಳಲ್ಲಿ ಅಂಗನವಾಡಿ ಕೇಂದ್ರಗಳಿಲ್ಲ, ಈ ವಾರ್ಡ್ಗಳಲ್ಲಿರುವ ಸರ್ಕಾರಿ ಜಾಗವನ್ನು ಕೆಲ ಪ್ರಭಾವಶಾಲಿಗಳು ಆಕ್ರಮಿಸಲು ಯತ್ನಿಸುತ್ತಿದ್ದು ಅಂಗನವಾಡಿ ನಿರ್ಮಿಸಿದ್ದೇ ಆದಲ್ಲಿ ಈ ಎಲ್ಲಾ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದರು.
ಸಭೆಯಲ್ಲಿ ಪೌರಾಯುಕ್ತ ಜಗದೀಶ್, ನಗರಸಭಾ ಎಇಇ ಭಗವಾನ್, ಸದಸ್ಯರಾದ ಭಾವಾಸ, ರಮೇಶ್ ಬಾಬು, ಆಸಿಂ, ಕಿರಣ್ ಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

