ಬೆಂಗಳೂರು ಗ್ರಾಮಾಂತರ

ಪಾಲಿಕೆ ಪ್ರಸ್ತಾವನೆಯಲ್ಲಿ ವ್ಯಾಪ್ತಿ ನಿಗದಿಯೇ ಅವೈಜ್ಞಾನಿಕ

Published On :

ಮತ್ತೀಕೆರೆ ಜಯರಾಮ್
ರಾಮನಗರ: ರಾಮನಗರ-ಚನ್ನಪಟ್ಟಣ ಅವಳಿ ಮಹಾನಗರ ಪಾಲಿಕೆ ರಚನೆ ಸಂಬಂಧ ಸರ್ಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವ್ಯಾಪ್ತಿ ನಿಗದಿಯೇ ಅವೈಜ್ಞಾನಿಕವಾಗಿದೆ. ಒಂದೊಮ್ಮೆ ಸರ್ಕಾರ ಷರತ್ತು ಸಡಿಲಿಸದೇ ಹೋದರೆ ಜನಸಂಖ್ಯೆ ಕೊರತೆ ಪರಿಣಾಮ  ಮಹಾನಗರ ಪಾಲಿಕೆ ರಚನೆ ಕಸರತ್ತು ಕೈಗೂಡುವ ಸಾಧ್ಯತೆ ಕ್ಷೀಣಿಸಲಿದೆ. ಮಹಾನಗರ ಪಾಲಿಕೆ ರಚನೆಗೆ ಪ್ರತಿ ಚದರ ಕಿ.ಮೀ.ಗೆ 3 ಸಾವಿರ ಜನಸಾಂದ್ರತೆಯೊಂದಿಗೆ ಕನಿಷ್ಠ 3 ಲಕ್ಷ ಜನ ಸಂಖ್ಯೆ ಅಗತ್ಯವಾಗಿದೆ. ಡಿ.18ರಂದು ಜಿಲ್ಲಾಡಳಿತವು ಪೌರಾಡಳಿತ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಜನಸಾಂದ್ರತೆಯೇನೋ ನಿಗದಿಗಿಂತ ಹೆಚ್ಚಿದೆ. ಆದರೆ, 1.07 ಲಕ್ಷ ಜನಸಂಖ್ಯೆಯ ಕೊರತೆ ಕಾಡುತ್ತಿದೆ.
ಪ್ರಸ್ತಾವನೆಯಲ್ಲಿ ಸೇರ್ಪಡೆಯಾಗಿರುವ ಒಟ್ಟಾರೆ ಪ್ರದೇಶದ ಸರಾಸರಿ ಜನಸಾಂದ್ರತೆ 3353, ಸರಾಸರಿ ಕೃಷಿಯೇತರ ಚಟುವಟಿಕೆ ಶೇಕಡ 56.87 ಎಂದು ನಮೂದಿಸಲಾಗಿದೆ. 2011ರ ಜನಗಣತಿ ಪ್ರಕಾರ ಜನಸಂಖ್ಯೆಯನ್ನು 192402 ಎಂದಷ್ಟೇ ಕಾಣಿಸಿ ರಾಮನಗರ ಜಿಲ್ಲಾಡಳಿತವೇ ಪಾಲಿಕೆ ರಚನೆ ಕನಸಿಗೆ ಕಲ್ಲು ಹಾಕಿದೆ.
ಪರಿಗಣಿಸಲ್ಪಟ್ಟ ಪ್ರದೇಶ: 95167 ಜನಸಂಖ್ಯೆ ಹೊಂದಿದ ರಾಮನಗರ ನಗರಸಭೆ ವ್ಯಾಪ್ತಿ, 71942 ಜನಸಂಖ್ಯೆಯುಳ್ಳ ಚನ್ನಪಟ್ಟಣ ನಗರಸಭೆ ಪ್ರದೇಶ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ 8 ಗ್ರಾ.ಪಂ. ಕೇಂದ್ರ ಸ್ಥಾನಗಳನ್ನು ಮಾತ್ರವೇ ಉದ್ದೇಶಿತ ಮಹಾನಗರ ಪಾಲಿಕೆ ರಚನೆಗೆ ಪರಿಗಣಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಿಡದಿ, ಮಂಚನಾಯಕನಹಳ್ಳಿ, ಕೆಂಚನಕುಪ್ಪೆ, ಮಾಯಗಾನಹಳ್ಳಿ, ವಂದಾರಗುಪ್ಪೆ, ಮಳೂರು, ಮತ್ತೀಕೆರೆ, ಮುದಗೆರೆ ಗ್ರಾ.ಪಂ. ಕೇಂದ್ರಗಳನ್ನಷ್ಟೇ ಪಟ್ಟಿಯಲ್ಲಿ ಕಾಣಿಸಲಾಗಿದೆ. ಇವಿಷ್ಟೂ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ಪರಿಗಣಿಸುವ ಗೋಜಿಗೆ ಹೋಗಿಲ್ಲ.
ಹೀಗಾಗಿ 8 ಗ್ರಾ.ಪಂ.ಗಳ ಜನ ಸಂಖ್ಯೆ 25293 ಮಾತ್ರ. ಗ್ರಾ.ಪಂ.ಗಳ ಕೇಂದ್ರ ಸ್ಥಾನಗಳಲ್ಲಿನ ಸರಾಸರಿ ಜನಸಾಂದ್ರತೆಯು 637 ಆಗಿದೆ. ಇವುಗಳ ಸರಾಸರಿ ಕಷಿಯೇತರ ಚಟುವಟಿಕೆ ಪ್ರದೇಶದ ಪ್ರಮಾಣವು ಶೇಕಡ 36.25 ಆಗಿದೆ.
ಪರಿಷ್ಕರಣೆ ಅಗತ್ಯ: ಅಗತ್ಯವಿರುವ ಜನಸಂಖ್ಯೆ ಮತ್ತು ಜನಸಾಂದ್ರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೌರಾಡಳಿತ ಸಚಿವಾಲಯದ ಮಟ್ಟದಲ್ಲಿ ಸಕಾರಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಸಮಾಲೋಚನೆ ನಡೆಸಲು ಜಿಲ್ಲಾಡಳಿತ ಮುಂದಾಗಬೇಕಿದೆ.  ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸೇರಿರುವ ಗ್ರಾ.ಪಂ.ಗಳ ಇಡೀ ವ್ಯಾಪ್ತಿ, ರಾಮನಗರ ಮತ್ತು  ಚನ್ನಪಟ್ಟಣ ಉಭಯ ನಗರಗಳಿಂದ 6-7 ಕಿ.ಮೀ. ಸುತ್ತಮುತ್ತಲಿನ ಎಲ್ಲ ಗ್ರಾಮಗಳನ್ನು ಪರಿಷ್ಕೃತ ಪ್ರಸ್ತಾವನೆಯಲ್ಲಿ ಪರಿಗಣಿಸಿದ್ದೇ ಆದರೆ 3 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ತೋರಿಸಬಹುದಾಗಿದೆ.
ಕೈತಪ್ಪುವುದು ಬೇಡ: ಸರ್ಕಾರವು ಬೆಂಗಳೂರಿಗೆ ಪರ್ಯಾಯವಾಗಿ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ, ಈ ಜಿಲ್ಲಾ ಕೇಂದ್ರಕ್ಕೆ ಮಹಾನಗರ ಪಾಲಿಕೆ ಮಂಜೂರು ಮಾಡುವ ಇರಾದೆಯನ್ನು ಹೊಂದಿದೆ. ಇಂಥದ್ದೊಂದು ಯೋಜನೆ ಕೈತಪ್ಪಿದ್ದೇ ಆದರೆ ನಿಜಕ್ಕೂ ಜಿಲ್ಲೆಗೆ ಬಹುದೊಡ್ಡ ನಷ್ಟವೇ ಸರಿ. ಒಂದೆಡೆ ಭೀಕರ ಬರ, ಮತ್ತೊಂದೆಡೆ ಪಾತಾಳ ಸೇರಿರುವ ಅಂತರ್ಜಲದ ಪರಿಣಾಮ ಈ ಭಾಗದಲ್ಲಿ ಬಹುತೇಕರು ಕೃಷಿಗೆ ಬೆನ್ನು ತೋರಿದ್ದಾಗಿದೆ. ಪಾಲಿಕೆ ವ್ಯಾಪ್ತಿಗೆ ತರಬೇಕೆಂದುಕೊಂಡ ಪ್ರದೇಶಗಳಲ್ಲಿ ಈಗಾಗಲೇ ರಿಯಲ್ ಎಸ್ಟೇಟ್ ಅಬ್ಬರ ಹೆಚ್ಚಿದ್ದು, ಚದರ ಅಡಿ ಲೆಕ್ಕದಲ್ಲಿ ಭೂಮಿ ಕ್ರಯವಾಗುತ್ತಿದೆ. ಹೀಗಾಗಿ ನೆರೆಯ ಮಂಡ್ಯ ಜಿಲ್ಲೆಯಂತೆ ಇಲ್ಲಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭೀತಿ ಇಲ್ಲ. ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ಈ ಭಾಗದ ಅಭಿವದ್ಧಿ ಚಟುವಟಿಕೆಗಳಿಗೆ ಹೇರಳ ಅನುದಾನ ಲಭ್ಯವಾಗಲಿದ್ದು, ಬೆಂಗಳೂರು ಮೇಲಿನ ಒತ್ತಡವೂ ತಗ್ಗುತ್ತದೆ.


ಸಭೆಗೆ ಮುನ್ನವೇ ಪ್ರಸ್ತಾವನೆ
ಮಹಾನಗರ ಪಾಲಿಕೆ ರಚನೆ ಸಂಬಂಧ ಈ ಭಾಗದ ಸಂಸದ, ಶಾಸಕರು, ಪುರಪಿತೃಗಳ ಸಭೆ ಕರೆದು ಸಮಾಲೋಚಿಸಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ರಾಮನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಸೂಚಿಸಿದ್ದರು.  ಆಗ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ವಿ.ಶ್ರೀರಾಮರೆಡ್ಡಿ ಬದಲಾಗಿದ್ದಾರೆ. ಪ್ರಸ್ತುತ ಹುದ್ದೆಯಲ್ಲಿರುವ ಡಾ.ಡಿ.ಎಸ್.ವಿಶ್ವನಾಥ್ ಅವರು ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸಮಾಲೋಚನೆ ನಡೆಸುವ ಮುನ್ನವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೈತೊಳೆದುಕೊಂಡಿದ್ದಾರೆ.  ರಾಮನಗರ ಕ್ಷೇತ್ರ ಪ್ರತಿನಿಧಿಸುತ್ತಿರುವ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹಿತ ಈ ಭಾಗದ ಜನಪ್ರತಿನಿಧಿಗಳು ಮಹಾನಗರ ಪಾಲಿಕೆ ರಚನೆಯ ಪರವಿದ್ದಾರೆ. ಒಂದೊಮ್ಮೆ ಸಭೆ ನಡೆಸಿದ್ದರೆ ಪೂರಕವಾದ ಒಂದಷ್ಟು ಅಂಶಗಳನ್ನು ಸೇರಿಸಲು ಸಾಧ್ಯವಾಗುತ್ತಿತ್ತು.

ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳು, ಆಸುಪಾಸಿನ ಗ್ರಾ.ಪಂ. ವ್ಯಾಪ್ತಿಯನ್ನೊಳಗೊಂಡಂತೆ ಮಹಾನಗರ ಪಾಲಿಕೆ ರಚನೆಯು ದೂರದೃಷ್ಟಿಯ ಯೋಜನೆ ಜಾರಿ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣವೇ ಜನಪ್ರತಿನಿಧಿಗಳ ಸಭೆ ಕರೆಯಬೇಕು. ಸರ್ಕಾರವು  ಪ್ರಕ್ರಿಯೆಗೆ ತ್ವರಿತವಾಗಿ ಚಾಲನೆ ನೀಡಲು ಮುಂದಾಗಬೇಕು.
ಟಿಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.