ಬೆಂಗಳೂರು ಗ್ರಾಮಾಂತರ

ನಿರಾಸೆಯ ನಡುವೆ ಕಂಡ ಬೆಳಕಿಂಡಿ 2013

Published On :

 ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: 2013, ಅಕ್ಷರಶಃ ನಿರಾಶೆಯ ವರ್ಷ. ವರ್ಷಾರಂಭದಲ್ಲಿ ಕಟ್ಟಿದ್ದ ಕನಸುಗಳು ಕೈಗೂಡಲಿಲ್ಲ, ಭರವಸೆಗಳು ಈಡೇರಲಿಲ್ಲ. ಒಟ್ಟಿನಲ್ಲಿ ದೊಡ್ಡಬಳ್ಳಾಪುರ ಆರಕ್ಕೇರದ-ಮೂರಕ್ಕಿಳಿಯದ ಸ್ಥಿತಿಯಲ್ಲೇ ಕಳೆದ ವರ್ಷವಿದು.
ಮಹತ್ವದ ಘಟನಾವಳಿಗಳು ಸಂಭವಿಸದಿದ್ದರೂ ರಾಜಕಾರಣದಲ್ಲಾದ ಮಹತ್ವದ ಬದಲಾವಣೆ, ಸಾಂಸ್ಕೃತಿಕ ಕ್ಷೇತ್ರದ ನೀರವತೆ, ಹೋರಾಟ-ಚಳವಳಿಗಳ ತಪ್ಪಿದ ತಾಳ, ದುರಸ್ಥಿಯಾಗದ ರಸ್ತೆಗಳು, ಸಾಮಾನ್ಯ ಜನಕ್ಕೆ ಗಗನಕುಸುಮವೇ ಆಗಿರುವ ಸರ್ಕಾರಿ ಸವಲತ್ತುಗಳು 2013ರ ಸಂಕ್ಷಿಪ್ತ ಪುನರಾವಲೋಕನಕ್ಕೆ ದಾರಿ ಮಾಡಿಕೊಡುತ್ತವೆ.
ರಾಜಕೀಯವಾಗಿ ಜಾಲಪ್ಪ ಕುಟುಂಬದ ಹಿಡಿತ ತಪ್ಪಿದ ವರ್ಷವಿದು. ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಜನ ಸಾಕ್ಷಿಯಾದರು. 30 ವರ್ಷಗಳ ರಾಜಕಾರಣಕ್ಕೆ ತಿಲಾಂಜಲಿ ನೀಡಿ, ತೀರಾ ಹೊಸಬ ಮತ್ತು ಅನನುಭವಿ ವ್ಯಕ್ತಿಗೆ ಮಣೆಹಾಕುವ ಮೂಲಕ ಮತದಾರ ಬದಲಾವಣೆ ಬಯಸಿದ. ಪರಿಣಾಮ ಟಿ.ವೆಂಕಟರಮಣಯ್ಯ ಶಾಸಕರಾಗಿ ಆಯ್ಕೆಯಾದರು. ಇದಕ್ಕೂ ಮುನ್ನ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಅಲೆಗೆ ರಾಜಕಾರಣ ಬೆಂಡಾಗಿದ್ದು, ತಾಲೂಕು ಪಂಚಾಯಿತಿಯಲ್ಲಿ 3 ಜನ ಅಧ್ಯಕ್ಷರು ಆಗಿ ಹೋಗಿದ್ದು, ಲಾಬಿಗಳ ದಡ್ಡತನ ಈಗ ಇತಿಹಾಸ.
ಬೇಡಿಕೆ ಫಲಿಸಲಿಲ್ಲ: ಇನ್ನು ಜನರ ಬೇಡಿಕೆಗಳು ಸುಧಾರಿತ ಮಟ್ಟದಲ್ಲಿ ಫಲಿಸಲಿಲ್ಲ. ನೆನೆಗುದಿಗೆ ಬಿದ್ದಿದ್ದ ಜಕ್ಕಲಮಡಗು ನೀರು ದೊಡ್ಡಬಳ್ಳಾಪುರಕ್ಕೆ ಈ ವರ್ಷ ಬಂತು. ಆದರೆ ಜನರ ದಾಹ ತಣಿಯುತ್ತಿಲ್ಲ. ಕೊಳವೆ ಬಾವಿಗಳು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ತೆರೆದುಕೊಂಡರೂ ನೀರಿನ ಬವಣೆ ನೀಗಿಲ್ಲ. 3 ವರ್ಷದ ಹಿಂದೆ ಆರಂಭವಾಗಿದ್ದ ಒಳಚರಂಡಿ ಯೋಜನೆ ಈ ವರ್ಷ ಸಂಪೂರ್ಣವಾಗಿ ನಿಂತೇ ಹೋಗಿದೆ. ರಸ್ತೆಗಳ ಅಗಲೀಕರಣ ಮರೀಚಿಕೆಯಾಗಿಯೇ ಉಳಿಯಿತು. ರಸ್ತೆಗಳು ಡಾಂಬರು ಕಾಣಲಿಲ್ಲ. ಚುನಾವಣೆ ಹಿನ್ನಲೆಯಲ್ಲಿ ಡಾಂಬರು ಹಾಕಿಕೊಂಡ ರಸ್ತೆಗಳು ಕೆಲವೇ ದಿನಗಳಲ್ಲಿ ಬಣ್ಣ ಕಳೆದುಕೊಂಡವು. ಗಣನೀಯ ಎನಿಸುವ ಯಾವುದೇ ಹೊಸ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಗತಿ ಕಾಣಲಿಲ್ಲ. ಶಾಶ್ವತ ನೀರಾವರಿ ಯೋಜನೆ, ಎತ್ತಿನಹೊಳೆ ಯಾವುದೂ ಕನಿಷ್ಠ ಆರಂಭವೂ ಆಗಲಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಿತು. ನೇಕಾರರ ಬವಣೆ ತಪ್ಪಲಿಲ್ಲ. ಜವಳಿ ಪಾರ್ಕ್ ದಿವಾಳಿ ಹಂತಕ್ಕೆ ತಲುಪಿದೆ. ಹೋರಾಟಗಳ ದಿಕ್ಕು ಬದಲುಣ ಸಂಘಟನೆಗಳಲ್ಲಿ ಉಂಟಾದ ವಿಘಟನೆಗಳು ಹೋರಾಟದ ದಿಕ್ಕುದೆಸೆಗಳನ್ನು ಬದಲಿಸಿದ ವರ್ಷ ಇದು. ಎಲ್ಲರೂ ಒಂದಾಗಬೇಕು ಎಂಬುದನ್ನು ವೇದಿಕೆ ಭಾಷಣಗಳಲ್ಲಿ ಹೇಳುತ್ತಾ, ನಿಜಸ್ಥಿತಿಯಲ್ಲಿ ಒಬ್ಬರಿಗೊಬ್ಬರು ದೂರವಾಗಿಯೇ ಉಳಿದುಕೊಂಡರು. ಪ್ರತಿಷ್ಠೆ, ವ್ಯಕ್ತಿಗತ ಹಿತಾಸಕ್ತಿಗಳಿಗೆ ಬಲಿಯಾದ ಹೋರಾಟಗಳಿಂದ ಈ ವರ್ಷ ಸಾಧನೆಯಾದದ್ದು ಅಷ್ಟಕ್ಕಷ್ಟೆ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ
ತಾರಕಕ್ಕೇರಿದ ವರ್ಷ ಇದು. ಜಿಲ್ಲಾ ಕೇಂದ್ರ ಮತ್ತು ಉಪವಿಭಾಗ ಕೇಂದ್ರಗಳು ದೊಡ್ಡಬಳ್ಳಾಪುರಕ್ಕೆ ಬರಬೇಕು ಎಂದು ಸಿಎಂವರಗೆ ಚಳವಳಿಯ ಕಾವು ಮುಟ್ಟಿತು. ಶಾಶ್ವತ ನೀರಾವರಿ ಹೋರಾಟ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂಬುದು ಸಮಾಧಾನಕರ.
ಅಪರಾಧ ಹೆಚ್ಚಳ: ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾದವು. ಬಸ್ನಿಲ್ದಾಣದಲ್ಲಿ ಮತ್ತು ವಾಸುದೇವನಹಳ್ಳಿಯಲ್ಲಿ ನಡೆದ ಕೊಲೆಗಳು ಬರ್ಬರ. ಕನ್ನಮಂಗಲದಲ್ಲಿ ನಡೆದ ಗ್ಯಾಂಗ್ರೇಪ್ ರಾಜ್ಯದ ಗಮನ  ಸೆಳೆದಿತ್ತು. ಅತ್ಯಾಚಾರ, ಸುಲಿಗೆ, ದರೋಡೆ ಪ್ರಕರಣಗಳು ಅವ್ಯಾಹತ ನಡೆದವು. ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾದರೂ ಪೊಲೀಸ್ ಇಲಾಖೆ ಗಮನಹರಿಸಲಿಲ್ಲ. ಅಪಘಾತ, ಆತ್ಮಹತ್ಯೆ, ಸಾವುಗಳೂ ಗಣನೀಯವಾಗಿ ಹೆಚ್ಚಾದದ್ದು ವಿಷಾದನೀಯ.
ಸಾಂಸ್ಕೃತಿಕ ತಲ್ಲಣ: 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಂ.ಇ.ಖಲೀಲುಲ್ಲಾಖಾನ್ ಅಧ್ಯಕ್ಷತೆಯಲ್ಲಿ ನಡೆದದ್ದು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸೇರಿದಂತೆ ಕೆಲವೇ ಸಾಂಸ್ಕೃತಿಕ ಗಟ್ಟಿತನದ ಕಾರ್ಯಕ್ರಮಗಳು ಈ ವರ್ಷ ನಡೆದವು. ಇದನ್ನು ಬಿಟ್ಟರೆ ಹೇಳಿಕೊಳ್ಳುವಂತಹುದೇನೂ ಆಗಿಲ್ಲ. ಇಲ್ಲಿನ ಕೆಲ ಸಾಂಸ್ಕೃತಿಕ ಮತ್ತು ಯೋಗ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದರು. ವಿಸ್ಮಿತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದರು. ಕೆಲ ಹೊಸ ಕವಿಗಳು ಪುಸ್ತಕ ಬಿಡುಗಡೆ ಮಾಡಿದರು. ಘಾಟಿ ದನಗಳ ಜಾತ್ರೆ ಕಾಲುಬಾಯಿ ರೋಗದ ಪರಿಣಾಮ ರದ್ದಾಯಿತು. ಮಹಿಳಾ ಪದವಿ ಕಾಲೇಜಿಗೆ ಅನುಮೋದನೆ ಸಿಕ್ಕಿದೆ.
ಹೀಗೆ ಹಲವು ಕಹಿ, ಕೆಲವು ಸಿಹಿ ಘಟನೆಗಳೊಂದಿಗೆ ವರ್ಷ ಮುಗಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.