ಅದ್ಧೂರಿ ಸಮ್ಮೇಳನ ಬೇಕಿತ್ತಾ?
ರಾಮನಗರ: ಭೀಕರ ಬರದ ಜತೆಗೆ ಜ್ವಲಂತ ಸಮಸ್ಯೆಗಳು ಕಾಡುತ್ತಿರುವ ಇಂತಹ ಸಂದರ್ಭದಲ್ಲಿ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅಗತ್ಯ ಏನಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ.
5 ದಶಕದಿಂದ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಇನ್ನೂ ಅನುಷ್ಠಾನಕ್ಕೆ ಬಂದೇ ಇಲ್ಲ. ಈಗ ಮತ್ತೊಂದು ಕಾಟಾಚಾರದ ಸಮ್ಮೇಳನ ನಡೆಯುತ್ತಿದೆ. ಬೂರಿ ಭೋಜನ ಮತ್ತು ಕಣ ಹಂಚಿಕೆ ಮೂಲಕ ಮದುವೆ ಸಂಭ್ರಮವನ್ನು ಮೂಡಿಸಲಾಗಿದೆ ಎಂದು ಅವರು ಟೀಕಿಸಿದರು.
ಗಡಿನಾಡ ಕನ್ನಡಿಗರ ಕರುಣಾಜನಕ ಸ್ಥಿತಿ ಮತ್ತು ಮಹಾಜನ ಆಯೋಗದ ವರದಿಯಂತೆ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ವಿಷಯದಲ್ಲಿ ಯಾರೂ ಸೊಲ್ಲೆತ್ತುತ್ತಿಲ್ಲ.
ತಮಿಳುನಾಡಿನ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಅಂಕಗಳನ್ನು 100 ರಿಂದ 50ಕ್ಕೆ ಇಳಿಸಿ, ಕನ್ನಡ ಬೋಧಿಸಲು ತಮಿಳು ಶಿಕ್ಷಕರನ್ನು ನೇಮಿಸಿದ್ದರೂ ಹೋರಾಟ ನಡೆಸಿಲ್ಲ ಎಂದು ತಿಳಿಸಿದರು.
ಬಿಕ್ಕಟ್ಟಿಗೆ ಸರ್ಕಾರ ಹೊಣೆ: ಪೌರ ಸಂಸ್ಥೆಗಳ ಚುನಾವಣೆ ವಿಷಯದಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಯಾವ ಪಕ್ಷಗಳಿಗೂ ಚುನಾವಣೆ ನಡೆಸುವುದು ಇಷ್ಟವಿಲ್ಲ. ಚುನಾವಣೆ ಮುಂದೂಡಲು ಷಡ್ಯಂತ್ರ ನಡೆಸಿ, ಇದೀಗ ಚುನಾವಣಾ ಆಯುಕ್ತರ ವಿರುದ್ಧ ಹಕ್ಕುಚ್ಯುತಿಗೆ ನಿರ್ಣಯಿಸಿರುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು.
ಚುನಾವಣೆ ವಿಷಯವು ಶಾಸನ ಸಭೆಯ ಹಕ್ಕುಚ್ಯುತಿ ನಿರ್ಣಯಕ್ಕೆ ಒಳಪಡುವುದಿಲ್ಲ. ಬೇಕಾದಲ್ಲಿ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಬಹುದು. ಈ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ.
ಶಾಸಕರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸಭಾಪತಿಗಳು ಹಕ್ಕುಚ್ಯುತಿಗೆ ಅವಕಾಶ ನೀಡದೆ, ಸ್ಥಾನದ ಗೌರವ ಕಾಪಾಡಬೇಕು ಎಂದು ವಾಟಾಳ್ ನಾಗರಾಜ್ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

