ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಾನಪದ ಪಾತ್ರ ಅತಿ ಮುಖ್ಯ
ರಾಮನಗರ: ಸಮಾಜದಲ್ಲಿ ಬೇರೂರಿರುವ ಜಾತೀಯತೆ, ಮೌಢ್ಯತೆಯನ್ನು ಕಿತ್ತೊಗೆದು ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಬೇಕಾದರೆ ಜಾನಪದದ ಪಾತ್ರ ಅತೀ ಮುಖ್ಯವಾದುದು ಎಂದು ಸಾಹಿತಿ ಡಾ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ನಗರದ ಜಾನಪದಲೋಕದಲ್ಲಿ ನಡೆಯುತ್ತಿರುವ ಮೂರು ದಿನಗಳ ಲೋಕೋತ್ಸವದಲ್ಲಿ ಭಾನುವಾರ ಜಾನಪದ ಮುನ್ನೋಟ ವಿಷಯದ ಸಂವಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನಪದವು ಒಂದು ಅಲಿಖಿತ ಸಂವಿಧಾನ ಇದ್ದಂತೆ. ಇದು ವೇದಕ್ಕಿಂತಲೂ ಮಿಗಿಲಾದದ್ದು. ವೇದ ಕೆಲವರ ಚಿಂತನೆಯಾದರೆ, ಜಾನಪದ ಒಂದು ಸಮೂಹದ ಚಿಂತನೆಯಾಗಿದೆ. ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಗಾದೆ ಎಷ್ಟು ಸತ್ಯೋವೋ, ಜಾನಪದವು ಅಷ್ಟೇ ಸತ್ಯವಾದುದು ಎಂದರು. ಬಡವರ ಹಣ ಹರಕೆ ರೂಪದಲ್ಲಿ ದೇವಾಲಯದ ಹುಂಡಿ ಸೇರುತ್ತಿದೆ. ದೇವಾಲಯದ ಆಡಳಿತ ಮಂಡಳಿ ಈ ಹಣವನ್ನು ಬಡವರ ಉದ್ಧಾರಕ್ಕೆ ಬಳಸುವುದನ್ನು ಬಿಟ್ಟು ದೇವಾಲಯಕ್ಕೆ ಚಿನ್ನದ ಗೋಪುರವನ್ನು ಹೊದಿಸುತ್ತಿರುವುದು ವಿಷಾದನೀಯ. ಕೋಟ್ಯಂತರ ರು. ಹಣ ದೇವಾಲಯಗಳ ಹುಂಡಿಗಳಲ್ಲಿ ಕೊಳೆಯುತ್ತಿದ್ದು, ಇದನ್ನು ಬಡವರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾನಪದದ ಪ್ರಭಾವ: ಕನ್ನಡ ಸಾಹಿತ್ಯಕ್ಕೆ ಹಿಂದಿನಿಂದಲೂ ಜಾನಪದದ ಪ್ರಭಾವವಿದೆ. ಕ್ರಾಂತಿಕಾರಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಒಳಗೊಂಡಿರುವ ಜಾನಪದ ಸಾಹಿತ್ಯವನ್ನು ಹಿಂದಿನ ಕವಿಗಳು ಸೇರಿದಂತೆ ಈಗಿನ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಲ್ಲಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು. ಇಂದು ನಮ್ಮಲ್ಲಿರುವ ವೈವಿಧ್ಯತೆ ನಾಶವಾಗುತ್ತಿದೆ. ನೇಕಾರರು, ಮೇದರು, ಕುಂಬಾರರು ತಯಾರಿಸುವ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಎಲ್ಲೆಲ್ಲೂ ಪ್ಲಾಸ್ಟಿಕ್ ವಸ್ತುಗಳು ರಾರಾಜಿಸುತ್ತಿವೆ. ಇದರಿಂದ ಮಾಲಿನ್ಯ ಹೆಚ್ಚುತ್ತಿರುವುದರ ಜತೆಗೆ ಕ್ಯಾನ್ಸರ್ನಂತ ಮಾರಣಾಂತಿಕ ಕಾಯಿಲೆಗಳೂ ಬರುವ ಸಾಧ್ಯತೆ ಇದೆ ಎಂದರು.
ಸಾಮಾಜಿಕವಾಗಿ ದಿವಾಳಿ: ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ದಿವಾಳಿಯಾಗಿದ್ದೇವೆ. ಎಲ್ಲೆಡೆ ಮಾರಿ-ಕೊಳ್ಳು ಸಂಸ್ಕಣತಿ ಬೆಳೆಯುತ್ತಿದೆ. ನಮ್ಮನ್ನು ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ ಎಂದು ವಿಷಾದಿಸಿದರು.
ಅದ್ದೂರಿ ವೆಚ್ಚದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳು ಬಜಾರ್ಗಳಾಗಿ ಮಾರ್ಪಾಡಾಗುತ್ತಿವೆ. ಸಮ್ಮೇಳನದಲ್ಲಿ ಸಾಹಿತ್ಯಕ, ನಾಡು, ನುಡಿಯ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುವ ಬದಲು ಕೇವಲ ಮೆರವಣಿಗೆಗೆ ಮಾತ್ರ ಸೀಮಿತವಾಗಿದೆ. ಪ್ರಭಾವಿಗಳು ತಮಗೆ ಬೇಕಾದವರನ್ನು ಮರೆಸುವ ಜಾತ್ರೆಗಳಾಗುತ್ತಿವೆ ಎಂದು ಟೀಕಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

