ರೈತರ ಮಕ್ಕಳು ಕೃಷಿ ನಂಬಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ: ಎಚ್ಡಿಕೆ
ಮಾಗಡಿ: ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು ಕೇವಲ ಕೃಷಿ ನಂಬಿ ಸುಂದರ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ, ಗುಣಾತ್ಮಕ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನುಡಿದರು.
ಅವರು ಮಾಗಡಿ ಪಟ್ಟಣದ ಬೈಚಾಪುರ ರಸ್ತೆ ಬಳಿ ನೂತನ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇಂದು ಮೌಲ್ಯಾಧಾರಿತ ಶಿಕ್ಷಣ ಅನಿವಾರ್ಯ. ಗ್ರಾಮೀಣ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶದ ಸ್ವಾಸ್ಥ್ಯ ಕಾಪಾಡಬೇಕು ಎಂದರು.
ಶಿಕ್ಷಕರು ಸಹ ಮಕ್ಕಳಲ್ಲಿರುವ ಸೂಕ್ಷ್ಮ ಜ್ಞಾನವನ್ನು ಹೊರ ತೆಗೆಯಲು ತ್ಯಾಗಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಯತ್ನಿಸಿಬೇಕು ಎಂದರು.
ಸಮಾಜ ಉದ್ಧಾರ: ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಮಾಜ ಉದ್ಧಾರ ಸಾಧ್ಯ, ಮಕ್ಕಳಿಗೆ ಉತ್ತಮವಾದ ಶಾಲಾ ಪರಿಸರ ಬಹಳ ಮುಖ್ಯ, ಗ್ರಾಮೀಣ ಜನತೆ ಮಕ್ಕಳಿಗೆ ಆಸ್ತಿ ಮಾಡದೆ ಶಿಕ್ಷಣ ಕೊಡಿಸಿ ದೇಶದ ಆಸ್ತಿಯಾಗಿಸಬೇಕು ಎಂದರು.
ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಲಿ ಅಧ್ಯಕ್ಷ ಬಿ.ಆರ್. ರಂಗನಾಥ್ ಪ್ರಾಸ್ತಾವಿಕ ಮಾತನಾಡಿದರು
ಶಿಕ್ಷಣ ತಜ್ಞ ಡಾ. ಜಯರಾಮಶೆಟ್ಟಿ ಮಾತನಾಡಿ ದೇಶದ ಭವಿಷ್ಯ ರೂಪಿಸುವ ಶಿಕ್ಷಕರು ತ್ಯಾಗದ ಪ್ರತೀಕವಾಗಿದ್ದಾರೆ. ಸಮಾಜದಲ್ಲಿಂದು ರಾಜಕೀಯವಾಗಿ, ಆರ್ಥಿಕವಾಗಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮೌಲ್ಯಗಳು ಅಧಃಪತನವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿ ಮೌಲ್ಯಗಳು ಉಳಿಯಬೇಕಾದರೆ ಜಾಗೃತ ಶಿಕ್ಷಣದಿಂದ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಜಾಗೃತರಾಗಬೇಕು. ಶಾಲೆಗಳು ಯಶಸ್ಸಿನ ಸೂತ್ರಗಳಾಗಬೇಕು. ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಬೇಕು. ಸಮಾಜಕ್ಕೆ ಸಾಂಸ್ಕೃತಿಕ ಪರಂಪರೆ ನೀಡುವ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು, ರಕ್ಷಕರು,ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಬಾಡಿಗೆ ಕಟ್ಟಡ ಪಡೆದು ವಿದ್ಯಾ ಸಂಸ್ಥಗಳನ್ನು ಆರಂಭಿಸುವ ಮೂಲಕ ಆರ್ಥಿಕತೆಯನ್ನು ಕ್ರೋಡಿಕರಿಸಿಕೊಳ್ಳುವ ದಿನಗಳಲ್ಲಿ ಬಿ.ಆರ್.ರಂಗನಾಥ್ ಅವರು ಸ್ವಂತ ಬಂಡವಾಳದಿಂದ ಕಟ್ಟಿರುವ ವಿದ್ಯಾ ಸಂಸ್ಥೆಯೀಗ ಸಮಾಜದ ಬಂಡವಾಳವಾಗಿದೆ. ಇದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಎಂಎಲ್ಸಿ ಇ.ಕೃಷ್ಣಪ್ಪ ತಿಳಿಸಿದರು.
ತಮ್ಮಡಿ ಮಠದ ಮಲ್ಲಿಕಾರ್ಜುನಸ್ವಾಮಿ ಆಶೀರ್ವಚನ ನೀಡಿದರು. ಜಿ.ಪಂ. ಅಧ್ಯಕ್ಷ ಕೆ. ಮುದ್ದುರಾಜ ಯಾದವ್, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ಮಾಜಿ ಅಧ್ಯಕ್ಷ ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್, ಜಿ.ಪಂ. ಸದಸ್ಯ ವಿಜಯಕುಮಾರ್, ಐಟಿಐ ಕಾಲೇಜು ಪ್ರಾಂಶುಪಾಲ ಪ್ರಾಣೇಶ್, ಮುಖ್ಯಶಿಕ್ಷಕರ ಸುದರ್ಶನ್, ಸುರೇಶ್, ಹಾಸ್ಯ ನಟರಾದ ಬ್ಯಾಂಕ್ ಜನಾರ್ದನ್, ಕೋಟೆ ನಾಗರಾಜು, ವೇಣುಗೋಪಾಲ್, ಆಶಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

