ಬೆಸ್ಕಾಂನಿಂದ ಮತ್ತೊಂದು ಶಾಕ್
ರಾಮನಗರ: ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಲ್ಲಿ ಓಪನ್ ಡೆಲ್ಟಾ ವ್ಯವಸ್ಥೆ ಜಾರಿ ಮೂಲಕ ಬೆಸ್ಕಾಂ ತನ್ನ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ.
ಫೆ.1ರಿಂದಲೇ ಜಾರಿಗೊಳಿಸಿರುವ ಓಪನ್ ಡೆಲ್ಟಾ ವ್ಯವಸ್ಥೆ ಪರಿಣಾಮ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಸಂಜೆ 6 ರಿಂದ ರಾತ್ರಿ 10ರವರೆಗೆ ಪೂರೈಕೆಯಾಗುವ ಸಿಂಗಲ್ ಫೇಸ್ ವಿದ್ಯುತ್ನಿಂದ ಯಾವುದೇ ಪಂಪ್ಸೆಟ್ಗಳು ಕೆಲಸ ನಿರ್ವಹಿಸುವುದಿಲ್ಲ.
ಸಿಂಗಲ್ ಫೇಸ್ಗೆಂದೇ ವಿನ್ಯಾಸಗೊಳಿಸಿರುವ ಪಂಪ್ಸೆಟ್ಗಳೂ ಈ ನಿಗದಿತ ಅವಧಿಯಲ್ಲಿ ಚಾಲನೆ ಆಗದಂತಾಗಿದೆ. ಬೇಸಿಗೆಗೆ ಮುನ್ನವೇ ಮಿತಿ ಮೀರಿದ ಲೋಡ್ಶೆಡ್ಡಿಂಗ್, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಈಗ ಮತ್ತೊಂದು ಆಘಾತವಾಗಿದೆ.
ಕುಸಿದ ಪೂರೈಕೆ ಪ್ರಮಾಣ: ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಪ್ರಮಾಣ ಕುಸಿದಿದ್ದು, ಪೂರೈಕೆಯಲ್ಲಿ ಕೊರತೆ ಎದುರಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ 6 ರಿಂದ ರಾತ್ರಿ 10ರವರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಡ ಹೆಚ್ಚಿದ್ದು, ಈ ಅವಧಿಯಲ್ಲಿ ಅನ್ಯ ಉದ್ದೇಶಗಳಿಗೆ ವಿದ್ಯುತ್ ಬಳಕೆಗೆ ಕಡಿವಾಣ ಹಾಕಲೆಂದೇ ಬೆಸ್ಕಾಂ ನೂತನ ವ್ಯವಸ್ಥೆ ಜಾರಿಗೊಳಿಸಿದೆ.
ಸಿಂಗಲ್ ಫೇಸ್ ಇದ್ದಾಗ ಕೆಪಾಸಿಟರ್ ಅಳವಡಿಸಿಕೊಂಡು, ಮೂರು ಫೇಸ್ಗಳಿಗೂ ವಿದ್ಯುತ್ ಪೂರೈಕೆ ಆಗುವಂತೆ ಮಾಡಿಕೊಳ್ಳುವ ಮೂಲಕ ಪಂಪ್ ಸೆಟ್ಗಳನ್ನು ಚಲಿಸಲಾಗುತ್ತಿತ್ತು. ಈಗ ಕೆಪಾಸಿಟರ್ ಅಳವಡಿಸಿದರೂ ಪಂಪ್ಸೆಟ್ಗಳು ಕೆಲಸ ನಿರ್ವಹಿಸುವುದಿಲ್ಲ.
ಅಡ್ಡದಾರಿಯ ಹುಡುಕಾಟ: ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಜಾರಿಗೆ ತಂದಾಗ ಕೆಪಾಸಿಟರ್ಗಳ ಬಳಕೆ ಮೂಲಕ ತ್ರೀ ಫೇಸ್ ಬಳಕೆಗೆ ಪರಿವರ್ತಿಸಿಕೊಳ್ಳುವ ವಿಧಾನವನ್ನು ಕಂಡುಕೊಳ್ಳಲಾಗಿತ್ತು. ಈಗ ಬಂದಿರುವ ಓಪನ್ ಡೆಲ್ಟಾ ವ್ಯವಸ್ಥೆಯಲ್ಲೂ ಪಂಪ್ಸೆಟ್ ಚಲಿಸುವಂತಹ ಸ್ಟಾರ್ಟರ್ಗಳು ಮಾರುಕಟ್ಟೆಗೆ ಬರಲಾರಂಭಿಸಿವೆ.
ಸಿಂಗಲ್ ಫೇಸ್ನಿಂದ ತ್ರೀ ಫೇಸ್ಗೆ ಪರಿವರ್ತಿಸುವ ಸ್ಟಾರ್ಟರ್ ಬೆಲೆ ರು.4-5ಸಾವಿರದಷ್ಟಾಗಿತ್ತು. ಇದೀಗ ಓಪನ್ ಡೆಲ್ಟಾ ವ್ಯವಸ್ಥೆಯಲ್ಲಿ ಪಂಪ್ಸೆಟ್ ಚಲಿಸುವಂತಹ ಸ್ಟಾರ್ಟರ್ಗೆ ರು.9 ರಿಂದ 10 ಸಾವಿರದಷ್ಟನ್ನು ನಿಗದಿಪಡಿಸಿಕೊಂಡು ಸುಲಿಗೆ ಮಾಡಲಾಗುತ್ತಿದೆ. ಬೆಸ್ಕಾಂ ತಂದ ಹೊಸ ನಿಯಮವು ಎಲೆಕ್ಟ್ರಿಷಿಯನ್ಗಳು ಮತ್ತು ಎಲೆಕ್ಟ್ರಿಕಲ್ಸ್ಗಳ ಮಾಲೀಕರಿಗೆ ಶುಕ್ರದೆಸೆ ತಂದಿದೆ.
ತ್ರೀ ಫೇಸ್ನಲ್ಲಿ ಕಡಿತ: ರಾತ್ರಿ 2 ತಾಸು ಮತ್ತು ಹಗಲು 4 ತಾಸು ಪಾಳಿಯಂತೆ ದಿನಕ್ಕೆ 6 ತಾಸು ತ್ರೀ ಫೇಸ್
ವಿದ್ಯುತ್ ನೀಡುವ ಸರ್ಕಾರ, ಬೆಸ್ಕಾಂ ಘೋಷಣೆ ಹುಸಿಯಾಗಿದೆ. ಹಗಲಿನ 4 ತಾಸಿನಲ್ಲಿ 1 ತಾಸು ಕಡಿತಗೊಳಿಸಿದ್ದು, ಉಳಿದ ಪೂರೈಕೆ ಅವಧಿಯಲ್ಲೂ ನಾಲ್ಕಾರು ಬಾರಿ ಕಣ್ಣಾಮುಚ್ಚಾಲೆ ತಪ್ಪಿದ್ದಲ್ಲ.
ಸಿಂಗಲ್ ಫೇಸ್ನಲ್ಲಿ ಒಂದೆರಡು ತಾಸು ಪಂಪ್ಸೆಟ್ ಕೆಲಸ ನಿರ್ವಹಣೆಗೂ ಈಗ ಸಂಚಕಾರ ಬಂದಿದೆ. ಇಷ್ಟಲ್ಲದೆ,
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಅಳವಡಿಸಿದ ಸಿಂಗಲ್ ಫೇಸ್ ಪಂಪ್ಸೆಟ್ಗಳೂ ಸ್ಥಗಿತಗೊಂಡಿವೆ. ಹೀಗಾಗಿ ನೀರಿನ ಬವಣೆ ಮತ್ತಷ್ಟು ಹೆಚ್ಚಿದೆ.
ಶೇ.50ರಷ್ಟು ಕೊರತೆ: ರಾಮನಗರ ಜಿಲ್ಲೆ ಒಂದಕ್ಕೇ ನಿತ್ಯ ಸರಾಸರಿ 120 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಪ್ರಸ್ತುತ ಸರಬರಾಜು ಪ್ರಮಾಣದಲ್ಲಿ ಶೇಕಡ 50ರಷ್ಟು ಕೊರತೆ ಇದೆ. ಹೀಗಾಗಿ ನಗರ, ಪಟ್ಟಣಗಳಲ್ಲಿ 6 ತಾಸಿಗೂ ಅಧಿಕ ವಿದ್ಯುತ್ ಕಡಿತ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಕೊರತೆ ಪ್ರಮಾಣ ಹೆಚ್ಚಲಿದ್ದು, ಈ ಬಾರಿ ಬೇಸಿಗೆ ಭೀಕರವಾಗಲಿದೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

