ಪರಸ್ಪರ ಕಚ್ಚಾಟದಲ್ಲಿ ರಾಜಕಾರಣಿಗಳೆನ್ನುವ ರಾಕ್ಷಸರ ಕೂಟ
ರಾಮನಗರ: ಆಗಿನ ಸಮುದ್ರ ಮಂಥನದ ಬಳಿಕ ಯುದ್ಧವು ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದರೆ, ಈಗಿನ ಚುನಾವಣಾ ಸಮುದ್ರ ಮಂಥನದ ಯುದ್ಧದಲ್ಲಿ ರಾಜಕಾರಣಿಗಳೆನ್ನುವ ರಾಕ್ಷಸರ ಕೂಟವೇ ಪರಸ್ಪರ ಕಚ್ಚಾಡುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.
ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಶನಿವಾರ ಜನ ಸಂಗ್ರಾಮ ಪರಿಷತ್, ಹಸಿರು ಸೇನೆ ಮತ್ತು ರೈತ ಸಂಘದಿಂದ ನಡೆದ ಮತದಾರರ ಜಾಗೃತಿ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆ ಸಮುದ್ರ ಮಂಥನದಲ್ಲಿ ಅಮೃತ ಮತ್ತು ವಿಷ ಉಕ್ಕಿದರೆ, ಈಗಿನ ಮಂಥನದಲ್ಲಿ ವಿಷ ಮಾತ್ರವೇ ಉಕ್ಕಿ ಬರುತ್ತಿದೆ ಎಂದರು.
ಚುನಾವಣಾ ಮಂಥನದಲ್ಲಿ ಬರುತ್ತಿರುವ ವಿಷವು ಸಮಾಜವನ್ನು ಬಲಿ ತೆಗೆದುಕೊಳ್ಳುವ ಆತಂಕವಿದೆ. ಜನಪ್ರತಿನಿಧಿಗಳನ್ನು ಚುನಾಯಿಸುವಾಗ ಯಾವುದೇ ಆಮಿಷಕ್ಕೆ ಬಲಿಯಾಗಬಾರದು. ಈ ವಿಷಯದಲ್ಲಿ ಜನರು ಎಚ್ಚರ ವಹಿಸದಿದ್ದಲ್ಲಿ ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಂಡಂತಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕುಂಭಕರ್ಣರು ಹೆಚ್ಚಿದ್ದಾರೆ: ಲಂಕೆಗೆ ಇದ್ದವನು ಒಬ್ಬನೇ ಕುಂಭಕರ್ಣ. ಆದರೆ, ಈಗ ಶಾಸನ ಸಭೆ ಮತ್ತು ಸಂಸತ್ನಲ್ಲಿ ಇರುವವರು ಬಹುತೇಕ ಕುಂಭಕರ್ಣರೇ. ಸದನಗಳನ್ನು ನಿದ್ರಾ ಸ್ಥಳವನ್ನಾಗಿ ಮಾಡಿಕೊಂಡ ಪ್ರತಿನಿಧಿಗಳು ತಮ್ಮ ಜವಬ್ದಾರಿಯನ್ನು ಮರೆತು, ವರ್ತಿಸುತ್ತಿದ್ದಾರೆ ಎಂದು ದೊರೆಸ್ವಾಮಿ ಕಿಡಿ ಕಾರಿದರು.
ಚುನಾವಣೆಯಲ್ಲಿ ಮತದಾರರಿಗೆ ಬಳುವಳಿಗಳನ್ನು ಕೊಟ್ಟು ಗೆದ್ದವರು ಅಧಿಕಾರದುದ್ದಕ್ಕೂ ಲೂಟಿಗೆ ಇಳಿಯುತ್ತಾರೆ. ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿ, ದೇಶವನ್ನು ಮತ್ತೆ ಅಡವಿಡುವುದಕ್ಕೂ ಸಿದ್ಧವಿದ್ದಾರೆ. ಅಂತಹವರನ್ನು ಜನತೆ ಧಿಕ್ಕರಿಸುವ ಮೂಲಕ ದೇಶವನ್ನು ಉಳಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಸಂಪತ್ತು ಉಳಿಸಲು ಕರೆ: ನೈಸರ್ಗಿಕವಾದ ಸಂಪತ್ತನ್ನು ಗಣಿ ಉದ್ಯಮಿಗಳು ಲೂಟಿ ಮಾಡುತ್ತಿದ್ದಾರೆ. ತಾತ್ವಿಕ ಶಕ್ತಿ, ಕಾನೂನಾತ್ಮಕ ಹೋರಾಟ ಮತ್ತು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಲೂಟಿ ತಡೆದು, ಸಂಪತ್ತು ಉಳಿಸಲು ಜನತೆ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಕರೆ ನೀಡಿದರು.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ನೀಡಬಾರದು. ಭೂ ಬಳಕೆ ಪ್ರಮಾಣದ ಜತೆಗೆ ಆಹಾರ ಉತ್ಪಾದನೆ ಹೆಚ್ಚಬೇಕು. ಉಳುವವನೇ ಭೂಮಿಯ ಒಡೆಯನಾಗಬೇಕು. ಇದೆಲ್ಲ ಸಾಕಾರಗೊಂಡಾಗ ಮಾತ್ರವೇ ದೇಶವು ಆಹಾರ ಭದ್ರತೆ ಹೊಂದುತ್ತದೆ ಎಂದು ಅವರು ಹೇಳಿದರು.
ಜನ ಸಂಗ್ರಾಮ ಪರಿಷತ್ ಪದಾಧಿಕಾರಿಗಳಾದ ಡಾ.ಪಾಯಸ್, ವಾಮದೇವಗೌಡ, ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಮುಖಂಡ ಸಿ.ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

