ಬೆಂಗಳೂರು ಗ್ರಾಮಾಂತರ

ರೆಡ್ಡಿಗೆ ಲೂಟಿ ಹೇಳಿದ್ದೇ ಡಿಕೆಶಿ

Published On :

ರಾಮನಗರ: ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಪರಕೀಯರ ವಿರುದ್ಧ ಹೋರಾಟ ಮಾಡಿದ್ದೆವು. ಆದರೆ ಇಂದು ಭ್ರಷ್ಟರೇ ಸಾರ್ವಜನಿಕ ಜೀವನದಿಂದ ತೊಲಗಿ ಎಂಬ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್ ವಿಷಾದ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸೇವೆಗೆ ಆಯ್ಕೆಯಾದಂತಹ ಜನಪ್ರತಿನಿಧಿಗಳು ಜನರ ವಿಶ್ವಾಸಕ್ಕೆ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದು, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ. ಇವರು ಸಾರ್ವಜನಿಕ ಜೀವನದಿಂದ ದೂರವಾಗಬೇಕು ಎಂದರು.
ಅಕ್ರಮ ಅದಿರು ಲೂಟಿ ಮಾಡಿ ಜೈಲು ಸೇರಿರುವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ನೈಸರ್ಗಿಕ ಸಂಪತ್ತು ಲೂಟಿ ಮಾಡುವ ಪಾಠವನ್ನು ಹೇಳಿಕೊಟ್ಟಿದ್ದು ಹಾಗೂ ಸಜ್ಜನಿಕೆಗೆ ಹೆಸರಾಗಿದ್ದ ರಾಜ್ಯ ರಾಜಕಾರಣಕ್ಕೆ ಅಪರಾಧ ಹಿನ್ನೆಲೆಯ ದುಷ್ಟ ಶಕ್ತಿಗಳನ್ನು ಕರೆತಂದಿದ್ದೇ ಡಿ.ಕೆ. ಶಿವಕುಮಾರ್ ಎಂದು ಹಿರೇಮಠ್ ಆರೋಪಿಸಿದರು.
ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಎಸಗುವ ಮೂಲಕ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ 2 ಸಾವಿರ ಪುಟಗಳ ವರದಿ ಸಲ್ಲಿಸಲಾಗಿದೆ ಎಂದರು.
ಶಾಸಕರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಸಹೋದರ ಡಿ.ಕೆ. ಸುರೇಶ್ ಮತ್ತು ಇನ್ನಿತರ ಸಂಬಂಧಿಕರು ಪಾಲುದಾರಾಗಿರುವ 8 ಕಂಪನಿಗಳಿಗೆ ಅದಿರು ಸರಬರಾಜು ಮಾಡುವಂತೆ ಮೈಸೂರು ಮಿನೆರಲ್ ಕಂಪನಿಗೆ ಪತ್ರ ಬರೆದಿದ್ದಾರೆ ಎಂದು ದಾಖಲೆ ಸಮೇತ ವಿವರಿಸಿದರು.
ಕಲ್ಯಾಣಿ ಸ್ಟೀಲ್ ಕಂಪನಿ, ಕಲ್ಯಾಣಿ ಫೆರಸ್, ಮುಕುಂದ್ ಲಿಮಿಟೆಡ್ ಸೇರಿದಂತೆ ಇನ್ನಿತರೆ ಅದಿರು ಕಂಪನಿಗಳಿಗೆ ಹಲವಾರು ಐಎಎಸ್ ಅಧಿಕಾರಿಗಳೂ ಸೇರಿದಂತೆ ಪ್ರಭಾವಿ ರಾಜಕಾರಣಿಗಳು ಮೈಸೂರು ಮಿನೆರಲ್ ಲಿಮಿಟೆಡ್‌ನಿಂದ ಅದಿರು ಪಡೆದು ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದ್ದಾರೆ ಎಂದು ತಿಳಿಸಿದರು.
ಸುಮಾರು 10-12 ತಿಂಗಳು ಸಮಗ್ರವಾಗಿ ಸಂಶೋಧನೆ ನಡೆಸಿ, ಅಕ್ರಮಕ್ಕೆ ಸಂಬಂಧಿಸಿದಂತೆ 2 ಸಾವಿರ ಪುಟಗಳ ದಾಖಲೆಗಳನ್ನು ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಇದರಲ್ಲಿ 10 ಲಕ್ಷ 80 ಸಾವಿರ ಮೆಟ್ರಿಕ್ ಟನ್ ಅದಿರನ್ನು ಮೈಸೂರು ಮಿನೆರಲ್ ಕಂಪನಿಯಿಂದ ಸರಬರಾಜು ಮಾಡಿರುವ ಬಗ್ಗೆ ದಿನಾಂಕ ಸಹಿತ ಪ್ರತಿಯೊಂದು ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ ಎಂದರು.
ಹಣಕಾಸು ಮತ್ತು ಯೋಜನಾ ಸಚಿವರಾಗಿದ್ದ ಪಿ.ಜಿ.ಆರ್. ಸಿಂಧ್ಯಾ ಸುಮಾರು 6 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಬ್ಬಿಣದ ಅದಿರನ್ನು ಕೆ.ಎನ್.ಸುಧೀಂದ್ರ ಅವರ ಕೆ.ಎನ್.ಎಸ್. ಮೈನ್ಸ್ ಮತ್ತು ಮಿನೆರಲ್ಸ್‌ಗೆ ಬಿಡುಗಡೆ ಮಾಡಬೇಕೆಂದು 20-11-2005ರಲ್ಲಿ ಶಿಫಾರಸು ಪತ್ರ ಬರೆದಿದ್ದಾರೆ. ಸಿಂಧ್ಯಾ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದ ವಿ.ಮುನಿಯಪ್ಪ, ಡಿ.ಕೆ. ಶಿವಕುಮಾರ್ ಅವರ ಕಂಪನಿಗಳಿಗೆ ಅದಿರು ಪೂರೈಸುವಂತೆ ಸುಮಾರು 21 ಶಿಫಾರಸು ಪತ್ರಗಳನ್ನು ಎಂಎಂಎಲ್‌ಗೆ ಬರೆದಿದ್ದಾರೆ. ಮುನಿಯಪ್ಪ 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಪೂರೈಸುವಂತೆ ಈ ಪತ್ರಗಳಲ್ಲಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮಾತಾ ಮಿನರಲ್ ಕಂಪನಿ ಮೂಲಕ ಲೂಟಿ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿ ಸೋಮಣ್ಣ ಭಾಗಿಯಾಗಿದ್ದಾರೆ ಎಂದು 127 ಪುಟಗಳ ಮಾಹಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದರು.
ಈ ಮೂವರು ರಾಜಕಾರಣಿಗಳಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಹಗರಣದಲ್ಲಿ ಇವರೂ ಕೂಡ ಬಾಗಿಯಾಗಿರುವುದರಿಂದ ಇವರ ವಿರುದ್ಧವೂ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
10 ಲಕ್ಷ 80 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಮೈಸೂರು ಮಿನರಲ್ ಕಂಪನಿಯಿಂದ ಅತೀ ಕಡಿಮೆ ಬೆಲೆಗೆ ಡಿ.ಕೆ.ಶಿವಕುಮಾರ್ ಖರೀದಿಸಿದ್ದಾರೆ. ಈ ರೀತಿ ಅಕ್ರಮವಾಗಿ ಲೂಟಿ ಮಾಡಿ ಅದಿರನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದಾರೆ. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಸಾವಿರಾರು ಕೋಟಿ ಅಕ್ರಮ ಸಂಪತ್ತಿನ ಒಡೆಯರಾಗಿದ್ದಾರೆ ಎಂದು ಆರೋಪಿಸಿದರು.
ಜನರು ವಿಶ್ವಾಸ ಇಟ್ಟು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುವ ಇವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ಸಂಬಂಧಿಕರಿಗೆ, ಹಿಂಬಾಲಕರಿಗೆ ಸ್ವಜನ ಪಕ್ಷಪಾತದ ಮೂಲಕ ಅಕ್ರಮ ಸಂಪಾದನೆಗೆ ನೆರವು ನೀಡಿದ್ದಾರೆ.
ಇವರು ಅಕ್ರಮವಾಗಿ ಸಂಪಾದಿಸಿರುವ ಪ್ರತಿ ಪೈಸೆಯನ್ನೂ ವಸೂಲಿ ಮಾಡಿ, ಕಠಿಣ ಶಿಕ್ಷೆ ನೀಡಬೇಕು. ಭವಿಷ್ಯದಲ್ಲಿ ಮತ್ತೊಮ್ಮೆ ಯಾರೊಬ್ಬರೂ ಇಂತಹ ದುಷ್ಕೃತ್ಯಕ್ಕೆ ಕೈ ಹಾಕದಂತೆ ಎಚ್ಚರಿಕೆ ಸಂದೇಶ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹಿರೇಮಠ್ ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಐ.ಜಿ.ಪುಲ್ಲಿ, ಮುರಳೀಧರ, ರಾಘವೇಂದ್ರ ಕುಷ್ಠಗಿ, ಆರ್.ವಿ.ನಾಗಮೂಳೆ, ಶಿವಕುಮಾರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.