ಕಿರುಚಿತ್ರ ಬಿಡುಗಡೆ ಇಂದು
ದೊಡ್ಡಬಳ್ಳಾಪುರ: ಬೆಂ.ಗ್ರಾ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ನೇತೃತ್ವದಲ್ಲಿ ಜಿಲ್ಲೆಯ ಶಾಲಾ ಮಕ್ಕಳಲ್ಲಿ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧಪಡಿಸಿರುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ಜು.11ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ದತ್ತಿ ಸ್ಥಾಪನೆ
ರಾಮನಗರ: ಜಿಎಸ್ಎಸ್ ಮೂರ್ತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ ಪ್ರದಾನದ ಸಲುವಾಗಿ ರು.1 ಲಕ್ಷ ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರಧಾನದ ಸಲುವಾಗಿ ರು.1 ಲಕ್ಷ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಈ ಎರಡೂ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ ಪ್ರತಿ ವರ್ಷ ಶ್ರೇಷ್ಠ ಕಾದಂಬರಿಗೆ ರು.5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ಬಹುಮಾನಗಳಿಗಾಗಿ ಅರ್ಹ ಕಾದಂಬರಿಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. 2012ನೇ ಸಾಲಿನಲ್ಲಿ ಪ್ರಕಟವಾದ ಶ್ರೇಷ್ಠ ಕಾದಂಬರಿಯನ್ನು ಮಾತ್ರ ಸ್ಪರ್ಧೆಗೆ ಕಳುಹಿಸಬೇಕು. ಪ್ರತಿ ಪ್ರವೇಶಕ್ಕೆ ಮೂರು ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರ ಶಿಫಾರಸು ಅಂತಿಮವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗಿರುತ್ತದೆ. ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಆ.30 ಕೊನೆಯ ದಿನ. ಮಾಹಿತಿಗೆ ದೂ 080-26623584 ಅಥವಾ ಖುದ್ದಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಸಂಪರ್ಕಿಸಿ.
ಮಕ್ಕಳ ಮೇಲೆ ಗುಂಪೊಂದರ ಹಲ್ಲೆ
ಚನ್ನಪಟ್ಟಣ: ತನ್ನ ಜಮೀನಿನಲ್ಲಿ ಬೆಳೆದಿದ್ದ ಎಳ್ಳು ಗಿಡಗಳನ್ನು ಹಸು ಬಿಟ್ಟು ಮೇಯಿಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಮಕ್ಕಳ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಕೆಸ್ತೂರು ಠಾಣೆ ವ್ಯಾಪ್ತಿಯಲ್ಲಿರ ಗ್ರಾಮದ ಬೋರಮ್ಮ ಎಂಬುವರ ಜಮೀನಿನಲ್ಲಿ ಹೊನ್ನಾಯ್ಕನ ಹಳ್ಳಿ ಗ್ರಾಮದ ಗ್ರಾ.ಪಂ. ಸದಸ್ಯ ರವಿ, ಕುಮಾರ, ಹರೀಶ್, ರಾಮ, ಸೋಮಣ್ಣ ಎಂಬುವರು ಹಸು ಬಿಟ್ಟು ಕಟಾವಿಗೆ ಬಂದಿದ್ದ ಎಳ್ಳು ಗಿಡಗಳನ್ನು ಮೇಯಿಸುತ್ತಿದ್ದನ್ನು ನೋಡಿದ ಬೋರಮ್ಮನ ಮಕ್ಕಳಾದ ಚೇತನಾ, ಕೃಷ್ಣ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಗುಂಪೊಂದು ಮಕ್ಕಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಭೇಟಿ: ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತಿಮ್ಮಪ್ಪ ಅರಳಾಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದರಲ್ಲದೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಆಯುರ್ವೇದ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್, ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್ ಮತ್ತು ಲಯನೆಸ್ ಕ್ಲಬ್ಗಳು ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆಯುರ್ವೇದ ಮತ್ತು ಹೋಮಿಯೋಪತಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿತ್ತು. ಬೆಂ.ಗ್ರಾ.ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಲಿಂಗಯ್ಯ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮುರಳೀಕೃಷ್ಣ ನೇತೃತ್ವದ ವೈದ್ಯರ ತಂಡ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಅದೇ ರೀತಿ ಪಾಪ್ಸ್ಮಿಯರ್ ಶಿಬಿರದಲ್ಲಿ ಡಾ.ಶ್ಯಾಂಪ್ರಸಾದ್, ಡಾ.ತೇಜಸ್ವಿನಿ, ಡಾ.ಇಂದಿರಾ, ಡಾ.ಕಾಮೇಶ್ವರಿದೇವಿ ಮತ್ತಿತರರು ಪಾಲ್ಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

