ಬೆಂಗಳೂರು ಗ್ರಾಮಾಂತರ

ಸುಮ್ನೆ ಮೆಜೆಸ್ಟಿಕ್ ಸುತ್ತಾಡಿ ಹೋಗಲು ಬಂದ್ರಾ?

Published On :

ಬೆಂಗಳೂರು: ಅತ್ಯಂತ ಬೇಜವಾಬ್ದಾರಿಯಿಂದ ಉತ್ತರಿಸುತ್ತಿರಲ್ಲ, ಏನಾಗಿದೆ ನಿಮಗೆ? ಏನೂ ಗೊತ್ತಿಲ್ಲ ಅಂದ ಮೇಲೆ ಇಲ್ಲೇಕೆ ಬಂದಿದ್ದೀರಿ? ಮೆಜೆಸ್ಟಿಕ್ ಸುತ್ತಾಡಿ ಹೋಗಲು ಬಂದಿದ್ದೀರಾ?
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರೀತಿ ಇದು.  ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳ ಕರ್ತವ್ಯ ಲೋಪ, ಬೇಜವಾಬ್ದಾರಿತನ ಕಂಡು ಸಿಟ್ಟಿಗೆದ್ದರು. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅಧಿಕಾರಿಗಳನ್ನು ಜಾಡಿಸಿದರು. ಪ್ರತಿ ಅಧಿಕಾರಿಗಳ ವಿಚಾರಣೆ ನಡೆಸಿ ಲೋಪ-ದೋಷ ಎತ್ತಿ ತೋರಿಸಿದರು.
ಸಚಿವರ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಅಧಿಕಾರಿಗಳು ಪರದಾಡಿದರು. ಒಟ್ಟಿನಲ್ಲಿ ಶಾಲಾ ತರಗತಿಯಂತೆ ಸಚಿವರು ಸಭೆ ನಡೆಸಿದರು.  ಅಂದರೆ,  ಸರ್ಕಾರ ವಿವಿಧ ಯೋಜನೆಗಳಲ್ಲಿ ಪ್ರಗತಿ ಕುಂಠಿತವಾಗಿರುವುದನ್ನು ಪ್ರಸ್ತಾಪಿಸುವ ಮೂಲಕ ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಅಂದಾಜಿನ ಮೇಲೆ ತಪ್ಪು ಮಾಹಿತಿ: ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಮುಖ್ಯ ಅಧಿಕಾರಿಗಳು ಯಾವ ತಾಲೂಕಿನಲ್ಲಿ ಎಷ್ಟು ಬೋರ್‌ವೆಲ್ ಇವೆ? ಎಷ್ಟು ಕೆಟ್ಟಿವೆ ಎನ್ನುವುದೇ ತಿಳಿಯದೆ ಅಂದಾಜಿನ ಮೇಲೆ ತಪ್ಪು ಮಾಹಿತಿ ನೀಡುತ್ತಿದ್ದರು.
ಜಿಲ್ಲೆಯ 4 ತಾಲೂಕುಗಳ ಅಧಿಕಾರಿಗಳಿಂದಲೂ ಇದೇ ತಪ್ಪು ಮಾಹಿತಿ ಬರುತ್ತಿತ್ತು. ಇದರಿಂದ ಸಿಟ್ಟಾದ ಸಚಿವರು,  ನಿಮಗೆ ಕನಿಷ್ಠ ಜ್ಞಾನವೂ ಇಲ್ಲ. ನಿಮ್ಮಿಂದ ಉತ್ತರ ಬಯಸುವವರಿಗೂ ಜ್ಞಾನ ಇಲ್ಲ ಎಂದು ಭಾವಿಸಿದ್ದಿರಾ?  ನೀವು, ನಾವು ವೇತನ ಪಡೆಯುತ್ತಿರುವುದು ಸಾಮಾನ್ಯ ಜನರ ತೆರಿಗೆ ಹಣದಿಂದ. ಹಳ್ಳಿಗಳಲ್ಲಿ ಬೀಡಿ, ಬೆಂಕಿ ಪೊಟ್ಟಣ ಖರೀದಿಸುವವರೂ ಪರೋಕ್ಷವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಅದರಿಂದಲೇ ನಾವು ಆಡಳಿತ ನಡೆಸಿ ವೇತನ ಪಡೆಯುತ್ತಿದ್ದೇವೆ. ಇನ್ನಾದರೂ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಚುರುಕು ಮುಟ್ಟಿಸಿದರು.
ಹೊಸ ಸಂಪರ್ಕ ಬೇಡ: ಇನ್ನು ಮುಂದೆ ಹೊಸ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬಾರದು. ಕೆಟ್ಟಿರುವ ಕೊಳವೆ ಬಾವಿಗಳಿಗೆ ನೀಡಿರುವ ಸಂಪರ್ಕವನ್ನೇ ಹೊಸದಕ್ಕೂ ಬಳಸಿಕೊಳ್ಳಿ ಎಂದು ಅವರು ಸೂಚನೆ ನೀಡಿದರು.  ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ತಿರುವರಂಗ ನಾರಾಯಣ, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜಿಲ್ಲಾಧಿಕಾರಿ ವಿ.ಶಂಕರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.