ಮಾಧ್ಯಮದ ನೈತಿಕತೆ ಪ್ರಶ್ನಿಸಲ್ಪಡುವುದು ದುರಂತ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಜು,13
ಪತ್ರಿಕೋದ್ಯಮ ಸಾಮಾಜಿಕವಾಗಿ ತನ್ನ ಘನತೆ ಮತ್ತು ಗಂಭೀರತೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಮಾಜವನ್ನು ಪ್ರಶ್ನಿಸುವ ನೈತಿಕತೆ ಹೊಂದಿರಬೇಕಾದ ಮಾಧ್ಯಮವೇ ಮತ್ತೊಬ್ಬರಿಂದ ಪ್ರಶ್ನಿಸಲ್ಪಡುತ್ತಿರುವುದು ದುರಂತ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೆಲ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆದ 170ನೇ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಕೈಗೊಂಡಿಲ್ಲ: ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳು ಮಿತಿ ಮೀರಿವೆ. ಸಂವಿಧಾನದ 4ನೇ ಅಂಗವೆಂದು ಪರಿಗಣಿಸಲ್ಪಟ್ಟರೂ ಪತ್ರಕರ್ತರಿಗೆ ರಕ್ಷಣೆ ನೀಡುವಲ್ಲಿ ಮತ್ತು ನಿರ್ಭೀತವಾಗಿ ಸುದ್ದಿ ಪ್ರಕಟಿಸಲು ಸಹಾಯಕವಾಗುವ ಕ್ರಮಗಳನ್ನು ಸರ್ಕಾರ ಇನ್ನೂ ಕೈಗೊಂಡಿಲ್ಲ. ಜನರ ಮತ್ತು ಆಡಳಿತ ಯಂತ್ರದ ನಡುವಿನ ಸೇತುವೆಯಾಗಿ ಕೆಲಸ ಮಾಡುವ ಪತ್ರಕರ್ತರು ಹಲವು ಬಾರಿ ತಮ್ಮ ಪ್ರಾಣದ ಹಂಗು ತೊರೆದು ಸುದ್ದಿ ಬೇಟೆಯಲ್ಲಿ ತೊಡಗುತ್ತಾರೆ. ಅವರ ಆತ್ಮಗೌರವ, ಸಾಮಾಜಿಕ ಸ್ಥಾನಮಾನಗಳಿಗೆ ಮತ್ತು ಅರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಕೆಲ ಕಾನೂನುಗಳನ್ನು ರೂಪಿಸಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಸಮಾಜದಲ್ಲಿನ ಆಗುಹೋಗುಗಳನ್ನು ಹರಿತವಾದ ನುಡಿಗಳಿಂದ ಜನರಿಗೆ ತಲುಪಿಸುವ ಮತ್ತು ಹೊಣೆಗಾರಿಕೆಯರಿತು ಕೆಲಸ ಮಾಡಲು ಆಡಳಿತಶಾಹಿಯನ್ನು ನಿರಂತರ ಎಚ್ಚರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ಇಡೀ ಸಮುದಾಯಕ್ಕೆ ಒಳಿತು ಮತ್ತು ಕೆಡಕುಗಳ ಅರಿವು ಮೂಡಿಸುವ ಪತ್ರಕರ್ತರು ಅಭಿನಂದನಾರ್ಹರು ಎಂದರು.
ಈ ಬಗೆಯ ಕಾರ್ಯಕ್ರಮಗಳು ತಾಲೂಕು ಹಂತದಿಂದ ಹೋಬಳಿ ಹಂತಕ್ಕೂ ಕೊಂಡೊಯ್ಯುವ ಪ್ರಯತ್ನವಾಗಬೇಕು. ದೊಡ್ಡಬಳ್ಳಾಪುರ ನಗರದಲ್ಲಿ ಬೆಂ.ಗ್ರಾ.ಜಿಲ್ಲಾ ಪತ್ರಕರ್ತರ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನವನ್ನು ಮಂಜೂರು ಮಾಡಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದಲ್ಲೇ ಸ್ಥಳ ಮಂಜೂರಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಸನ್ಮಾನಿಸಲಾಯಿತು. ಸಮಕಾಲೀನ ಪತ್ರಿಕೋದ್ಯಮದ ಸ್ಥಿತಿ-ಗತಿ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಪತ್ರಕರ್ತ ಕೆ.ಆರ್.ರವಿಕಿರಣ್ ವಿಚಾರ ಮಂಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಬಿಜ್ಜವಾರ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಆರ್.ರಮೇಶ್, ಹೊಸಕೋಟೆಯ ವೆಂಕಟಸ್ವಾಮಿ, ನೆಲಮಂಗಲದ ನರಸಿಂಹಮೂರ್ತಿ, ಡಿಎಸ್ಎಸ್ನ ರಾಜು ಸಣ್ಣಕ್ಕಿ, ಕರ್ನಾಟಕ ನವನಿರ್ಮಾಣ ಸೇನೆಯ ಚಂದ್ರು, ಪತ್ರಕರ್ತ ಸತೀಶ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

