ಪ್ರತಿಭೆ ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಲಿ
ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಜು.15
ಇಲ್ಲಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಕೇಂದ್ರೀಯ ಪಠ್ಯಕ್ರಮದ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮೆರೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ನಾಗರಾಜ್ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಅವರು ಮಾತನಾಡಿ, ಪ್ರತಿಭಾವಂತಿಕೆ ಸಾಧನೆಗೆ ಸಿಗುವ ಪ್ರತಿಫಲ. ಪ್ರತಿಭಾವಂತ ಯುವಕರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮ ಚಿಂತನೆಗಳನ್ನು ತೊಡಗಿಸಿಕೊಳ್ಳಬೇಕು. ವಿದ್ಯೆ ಕೇವಲ ವ್ಯಕ್ತಿಯ ಅಥವಾ ಕುಟುಂಬದ ಸ್ವತ್ತಾಗಬಾರದು. ಅದು ರಾಷ್ಟ್ರೀಯ ಸ್ವತ್ತಾಗಬೇಕು ಎಂದರು.
ನವೋದಯ ಶಾಲೆಗಳು ಭಿನ್ನ ಸಂಸ್ಕೃತಿ-ಭಾಷೆಗಳ ಸಮ್ಮಿಲನದ ತಾಣ. ಇಲ್ಲಿ ಕಲಿಯುವ ವಿದ್ಯಾರ್ಥಿ ಭಾರತೀಯತೆಯನ್ನು ಪ್ರಾಯೋಗಿಕವಾಗಿ ರೂಢಿಗತ ಮಾಡಿಕೊಳ್ಳುವ ಅವಕಾಶವಿದೆ. ಭಾವೈಕ್ಯತೆಯ ಪರಿಪಕ್ವ ವ್ಯಕ್ತಿತ್ವವಾಗಿ ಈ ಮಕ್ಕಳು ಬೆಳೆಯಲು ಉತ್ತಮ ವಾತಾವರಣ ಇದಾಗಿದೆ ಎಂದ ಅವರು ಅಭಿವೃದ್ಧಿ ಪರಿಸರ ಸ್ನೇಹಿಯಾಗಿರಬೇಕು. ಸರ್ಕಾರ ದೊಡ್ಡಬಳ್ಳಾಪುರ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಐಟಿ ಪಾರ್ಕ್‌ಗೆ ನೀರು ಒದಗಿಸುವುದು ಸವಾಲಿನ ಕೆಲಸ. ಈಗಾಗಲೇ ತಾಲೂಕಿನಲ್ಲಿ ಅಂತರ್ಜಲ ಪ್ರಮಾಣ ಕುಸಿದಿದೆ. ಈ ಹಂತದಲ್ಲಿ ವ್ಯವಸ್ಥಿತ ಯೋಜನೆಗಳ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ತಪ್ಪಿದಲ್ಲಿ ದೊಡ್ಡಬಳ್ಳಾಪುರದ ಮುಂಬರುವ ದಿನಗಳಲ್ಲಿ ಬರಡು ಪ್ರದೇಶವಾಗುವ ಲಕ್ಷಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು. 12ನೇ ತರಗತಿಯಲ್ಲಿ ಕನ್ನಡದಲ್ಲಿ 100ಕ್ಕೆ 98 ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ ಅಂಜಲಿಗೆ ವಿಶೇಷ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ರಂಗರಾಜು, ಪ್ರಾಂಶುಪಾಲ ಟಿ.ಗೋಪಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನವೋದಯ ವಿದ್ಯಾಲಯದ ಉಪನ್ಯಾಸಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

