ದೊಡ್ಡಬಳ್ಳಾಪುರದಲ್ಲಿ ಏಳು ಕೋಟಿ ಮೌಲ್ಯದ ಭೂಮಿ ಸರ್ಕಾರದ ವಶಕ್ಕೆ
ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಜು.17
ನಗರದ ದರ್ಗಾಪುರ ವ್ಯಾಪ್ತಿಯ ಸರ್ವೇ ನಂ.23ರ ಗುಂಡುತೋಪು ಭೂಮಿ ಎಂದು ಹೇಳಲಾಗಿರುವ ಜಾಗದಲ್ಲಿ ಒತ್ತುವರಿಯಾಗಿದ್ದ 2.17ಎಕರೆ ಸರ್ಕಾರಿ ಭೂಮಿಯನ್ನು ಬೆಂ.ಗ್ರಾ.ಜಿಲ್ಲಾಧಿಕಾರಿ ಶಂಕರ್ ಮತ್ತು ತಹಸೀಲ್ದಾರ್ ಚಂದ್ರ ನೇತೃತ್ವದಲ್ಲಿ ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಯಿತು.
ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯ ದೊಡ್ಡಬಳ್ಳಾಪುರ ರೈಲುನಿಲ್ದಾಣ ಸಮೀಪ ಇರುವ ಶುಭಫಾರಂನಿಂದ ಈ ಭೂಮಿಯನ್ನು ತೆರವು ಮಾಡಲಾಗಿದೆ. ಸರ್ಕಾರಿ ಜಾಗವಾಗಿರುವ ಇದನ್ನು ಕೆ.ನಾರಾಯಣಸ್ವಾಮಿ ಎಂಬುವವರ ಜಮೀನಿಗೇ ಸೇರಿಸಿಕೊಳ್ಳಲಾಗಿತ್ತು. ಈಗ ವಶಪಡಿಸಿಕೊಂಡಿರುವ ಭೂಮಿಯ ಪ್ರಸ್ತುತ ಮಾರುಕಟ್ಟೆ ಬೆಲೆ ಸುಮಾರು 7 ಕೋಟಿ ರು. ಎಂದು ಅಂದಾಜಿಸಲಾಗಿದೆ. ಈ ಭೂಮಿಯನ್ನು ಬಿಬಿಎಂಪಿ ಮಾಜಿ ಮೇಯರ್ ಕೆ.ನಾರಾಯಣಸ್ವಾಮಿ ಸುಮಾರು 25 ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಒತ್ತುವರಿ ತೆರವು ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂ.ಗ್ರಾ.ಜಿಲ್ಲಾಧಿಕಾರಿ ಶಂಕರ್, ಜಿಲ್ಲಾವಾರು ಸುಮಾರು 14410 ಎಕರೆ ಸರ್ಕಾರಿ ಒತ್ತುವರಿ ಭೂಮಿ ಗುರುತಿಸಲಾಗಿದೆ. ಪ್ರತಿವಾರ ಹಂತ ಹಂತವಾಗಿ ಅಕ್ರಮ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸುಮಾರು 4 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾದ್ಯಂತ ಗುಂಡುತೋಪು, ಸ್ಮಶಾನ ಮತ್ತು ಕೆರೆ ಅಂಗಳ, ರಾಜಕಾಲುವೆಗಳ ಒತ್ತುವರಿ ಅತಿ ಶೀಘ್ರವಾಗಿ ತೆರವು ಮಾಡಲಾಗುವುದು ಎಂದು ವಿವರಿಸಿದರು.
ಸರ್ಕಾರಿ ಭೂಮಿ ವಶಪಡಿಸಿಕೊಂಡಿರುವವರು ಎಷ್ಟೇ ಪ್ರಭಾವಿಗಳಾದರೂ, ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಅಕ್ರಮ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ರವಾನಿಸಲಾಗಿದೆ. ಅಲ್ಲದೆ ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

