ಅಶ್ವತ್ಥ್ ಸಹೋದರರ ಪ್ರವಾಸದಲ್ಲಿ ಜೆಡಿಎಸ್ ಪ್ರಮುಖರ ದಂಡು
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು. 18
ಚನ್ನಪಟ್ಟಣದಲ್ಲಿ ತಮ್ಮ ಪತ್ನಿ ಅನಿತಾ ಸೋಲಿಗೆ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಮತ್ತು ಸಹೋದರರೇ ಕಾರಣವೆಂದು ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಚುನಾವಣೆಯಲ್ಲಾದ ಸೋಲಿನ ಕಹಿ ಮಾಸುವ ಮುನ್ನವೇ ಜೆಡಿಎಸ್ ಪ್ರಮುಖರ ದಂಡು ಅದೇ ಅಶ್ವತ್ಥ್ ಸಹೋದರ ಎಂ.ಸಿ.ಕರಿಯಪ್ಪ ಪ್ರಾಯೋಜಕತ್ವದ ಪ್ರವಾಸದಲ್ಲಿ ಮೋಜು ನಡೆಸಿದೆ.
ಈ ಹಿಂದೆ ಜೆಡಿಎಸ್ನಲ್ಲಿ ಅಲ್ಪಾವಧಿ ಶಾಸಕರಾಗಿದ್ದು, ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾದ ಅಶ್ವತ್ಥ್ ಅಧಿಕಾರಾವಧಿಯಲ್ಲಿ ಅವರ ಸಹೋದರ ಕರಿಯಪ್ಪ ಅವರದ್ದೇ ದರ್ಬಾರ್. ಪಕ್ಷದಲ್ಲಿದ್ದಾಗ ಪ್ರತಿವರ್ಷ ತಮ್ಮ ಹುಟ್ಟುಹಬ್ಬಕ್ಕೆ ಸೀಮಿತ ಸಂಖ್ಯೆಯ ಬೆಂಬಲಿಗರ ಪಡೆ ಕಟ್ಟಿಕೊಂಡು ಪ್ರವಾಸಕ್ಕೆ ಹೋಗುತ್ತಿದ್ದರು. ಈಗ ಜೆಡಿಎಸ್ನಿಂದ ದೂರವಿದ್ದರೂ ಆ ಪಕ್ಷದ ದೊಡ್ಡ ದಂಡು ಕಟ್ಟಿಕೊಂಡು ಪ್ರವಾಸ ನಡೆಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಇಡೀ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಕರಿಯಪ್ಪ ಜತೆ ಜೆಡಿಎಸ್ ದಂಡು ಕರಾವಳಿ ಭಾಗದಲ್ಲಿ ಮೋಜು ಮುಗಿಸಿ ಬಂದಿರುವುದು ಚನ್ನಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರವಾಸಕ್ಕೆ ತೆರಳಿದ್ದವರಲ್ಲಿ ಪಕ್ಷದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪ್ರಮುಖ ಪದಾಧಿಕಾರಿಗಳೇ ಇದ್ದಾರೆ. ಈ ಕುರಿತ ಫೋಟೋಗಳು ಕೆಲ ಫೇಸ್ಬುಕ್ಗಳಲ್ಲೂ ಹರಿದಾಡುತ್ತಿವೆ.
ಅಶ್ವತ್ಥ್ ತಿರುಗೇಟು: ಆಪರೇಷನ್ ಕಮಲಕ್ಕೆ ಒಳಗಾದ ಅಪಖ್ಯಾತಿ ನಡುವೆಯೂ ಚನ್ನಪಟ್ಟಣದಲ್ಲಿ ಅಶ್ವತ್ಥ್ ತಮ್ಮದೇ ಆದ ತಂಡ ಕಟ್ಟಿಕೊಂಡು, ತೆರೆಮರೆಯ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ. ಚನ್ನಪಟ್ಟಣ ನಗರ ಪ್ರದೇಶದಲ್ಲಿ ಮತ ಸೆಳೆಯುವ ತಂತ್ರಗಾರಿಕೆ ಹೆಣೆಯುವಲ್ಲಿ ಅಶ್ವತ್ಥ್ ಮತ್ತು ಸಹೋದರರು ನಿಪುಣರಾಗಿದ್ದಾರೆ.
ಅಶ್ವತ್ಥ್ ರಾಜಿನಾಮೆಯಿಂದ ತೆರವಾದ ವಿಧಾನಸಭೆ ಚುನಾವಣೆ, ಬಳಿಕ ನಡೆದ ನಗರಸಭೆ ಚುನಾವಣೆಯಲ್ಲೂ ಜೆಡಿಎಸ್ಗೆ ನೆರವಾಗಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಮರಳಲು ತುದಿಗಾಲಲ್ಲಿದ್ದರು. ತಮಗೆ ಮನ್ನಣೆ ನೀಡಿಲ್ಲವೆಂದು ಅಶ್ವತ್ಥ್ ಮತ್ತು ಕರಿಯಪ್ಪ ಜತೆಗೂಡಿಯೇ ತಿರುಗೇಟು ನೀಡಿದ್ದಾರೆನ್ನುವುದು ಈಗ ಇತಿಹಾಸ.
ನಿಯಂತ್ರಣಕ್ಕೆ ಪ್ರಯತ್ನ: ಜೆಡಿಎಸ್ನಿಂದ ಆರಿಸಿ ಬಂದಿರುವ 5ಕ್ಕೂ ಹೆಚ್ಚು ಪುರಪಿತೃಗಳು ಅಶ್ವತ್ಥ್ ಮತ್ತು ಕರಿಯಪ್ಪ ಸಂಪರ್ಕದಲ್ಲಿ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕರಿಯಪ್ಪ ಪ್ರಾಯೋಜಕತ್ವದ ಪ್ರವಾಸದಲ್ಲಿ ಪುರಪಿತೃಗಳೂ ಭಾಗಿಯಾಗಿರುವುದನ್ನು ಗಮನಿಸಿದರೆ, ನಗರಸಭೆ ಚುಕ್ಕಾಣಿ ಹಿಡಿಯಲು ಜೆಡಿಎಸ್ಗೆ ಅಶ್ವತ್ಥ್ ಸಹೋದರರ ಸಹಕಾರ ಅಗತ್ಯವಿದ್ದಂತೆ ಕಾಣುತ್ತಿದೆ.
ಈಚೆಗೆ ನಡೆದ ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗಾದ ಸೋಲಿನಿಂದ ಹತಾಶೆಗೊಂಡವರಂತೆ ಕುರ್ಚಿ ಎಸೆದವರು, ಅವರಿವರ ಮೇಲೆ ದೂರಿ ಹಾರಾಡಿದವರೂ ಕರಿಯಪ್ಪ ಕರೆದೊಯ್ದಿದ್ದ ದಂಡಿನಲ್ಲಿ ಪ್ರವಾಸ ಮುಗಿಸಿ ಬಂದಿದ್ದಾರೆ. ಹೀಗಾಗಿ ಅವರ ಪಕ್ಷ ನಿಷ್ಠೆಯ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ಪರ್ಯಾಯ ರಾಜಕಾರಣ
ವಿಧಾನಸಭೆ ಚುನಾವಣೆ ಪ್ರಚಾರದುದ್ದಕ್ಕೂ ಅಭ್ಯರ್ಥಿ ಹಾಗೂ ವರಿಷ್ಠರ ಸುತ್ತ ಅಡ್ಡಾಡಿಕೊಂಡು ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದವರೆ ಈಗ ಕರಿಯಪ್ಪ ಬೆನ್ನಿಗೆ ನಿಂತಿರುವ ಮಾಹಿತಿಯಿಂದ ಅನಿತಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಈ ಕುರಿತು ಕೆಲ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಒಂದೆಡೆ ದೇವೇಗೌಡರ ಇಡೀ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಅಶ್ವತ್ಥ್ ಮತ್ತು ಕರಿಯಪ್ಪ ಸಹೋದರರು ಮತ್ತೊಂದೆಡೆ ಶಾಸಕ ಸಿ.ಪಿ.ಯೋಗೇಶ್ವರ್ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಇದೀಗ ಅವರು ಚನ್ನಪಟ್ಟಣದಲ್ಲಿ ಪರ್ಯಾಯ ರಾಜಕಾರಣಕ್ಕೆ ಕೈ ಹಾಕಿರುವ ಸುಳಿವು ಈ ಪ್ರವಾಸದಿಂದ ಸ್ಪಷ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

