ಕಂದಾಯ ವಸೂಲಿ ಬಗ್ಗೆ ಜಾಗೃತಿ ಮೂಡಿಸಿ: ಇಒ ಅಕ್ಕೋಜಿ
ಕ.ಪ್ರ. ವಾರ್ತೆ , ಮಾಗಡಿ , ಜು.23
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ, ಪಂಚಾಯ್ತಿಗಳ ಪಿಡಿಒಗಳಿಗೆ ಆದೇಶಿಸಿದರು.
ಮಾಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಿಡಿಒ ಮತ್ತು ಬೆಸ್ಕಾಂ ಅಭಿಯಂತರರ ವಿಶೇಷ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಕಂದಾಯ ವಸೂಲಾತಿಯನ್ನು ಕಡ್ಡಾಯವಾಗಿ ಮಾಡಬೇಕು. ಕಂದಾಯ ಕಟ್ಟದಿದ್ದರೆ, ದಂಡ ವಿಧಿಸಲಾಗುತ್ತದೆ. ಹಾಗೊಂದು ವೇಳೆಯೂ ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡರೆ ಸ್ವತ್ತನ್ನು ಪಂಚಾಯಿತಿ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಜನರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾವನ್ನು ಪಂಚಾಯಿತಿಗಳು ನಡೆಸಬೇಕೆಂದು ತಿಳಿಸಿದರು.
ಗ್ರಾಮೀಣ ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಲು ಬಂದರೆ ಸಕಾಲದಲ್ಲಿಯೇ ಕಡ್ಡಾಯವಾಗಿ ಸ್ವೀಕಾರ ಮಾಡಬೇಕು. ಪಂಚಾಯಿತಿಗಳ ಸಮಸ್ಯೆಗಳು ಇದ್ದರೆ ನನ್ನ ಗಮನಕ್ಕೆ ತಂದರೆ ಕಾನೂನುಬದ್ಧವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಪಿಡಿಒಗಳಿಗೆ ಇಒ ಸೂಚಿಸಿದರು.
ಸಕ್ರಮಕ್ಕೆ ಕ್ರಮ: ಗ್ರಾಮ ಪಂಚಾಯಿತಿಗಳು ಆರ್ಆರ್ ನಂಬರ್ ಪಡೆಯದೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಕೂಡಲೆ ಬೆಸ್ಕಾಂ ಎಇಇಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕೂಡಲೆ ಆರ್ಆರ್ ನಂಬರ್ ಪಡೆದು ಅಕ್ರಮ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಿಕೊಳ್ಳಬೇಕು. ಅಕ್ರಮ ವಿದ್ಯುತ್ ಸಂಪರ್ಕಕ್ಕೆ ದಂಡ ವಿಧಿಸುವ ಮುನ್ನಾ ಪಿಡಿಒಗಳು ಜಾಗೃತರಾಗಿ ಬೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಿ ಆರ್ಆರ್ ನಂಬರ್ ಪಡೆಯಿರಿ. ಕುಡಿಯುವ ನೀರಿನ ಕೊಳವೆ ಬಾವಿಗಳು ಅನುಪಯುಕ್ತವಾಗಿದ್ದರೆ ಕೂಡಲೆ ಬೆಸ್ಕಾಂಗೆ ಮನವಿ ಮಾಡಿಕೊಂಡು ಉಪಯುಕ್ತ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ವರ್ಗಾಯಿಸಿಕೊಳ್ಳಬೇಕು. ಈಗಾಗಲೇ ಬಹುತೇಕ ಪಂಚಾಯಿತಿಗಳು ಅಕ್ರಮ ವಿದ್ಯುತ್ ಸಂಪರ್ಕಕ್ಕೆ ದಂಡ ಕಟ್ಟುವ ಮೂಲಕ ಪಂಚಾಯಿತಿಯ ಹಣ ನಷ್ಟವಾಗುತ್ತಿದೆ. ಹಾಗಾಗದಂತೆ ಪಿಡಿಒಗಳು ಎಚ್ಚರ ವಹಿಸಬೇಕು ಎಂದು ಇಒ ಅಕ್ಕೋಜಿ ತಿಳಿಸಿದರು. ಅಲ್ಲದೆ, ಹಳ್ಳಿಗಳಲ್ಲಿನ ಅಕ್ರಮ ವಿದ್ಯುತ್ ಸಂಪರ್ಕಕ್ಕೂ ಪಂಚಾಯ್ತಿಗಳೇ ಹಣ ಭರಿಸಬೇಕಾಗಿರುವುದರಿಂದ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದರೆ ಕೂಡಲೆ ಬೆಸ್ಕಾಂ ಇಲಾಖೆಗೆ ಪಿಡಿಒಗಳು ಮಾಹಿತಿ ನೀಡಬೇಕು. ನಂತರ ಬೆಸ್ಕಾಂ ಇಲಾಖೆ ಅಧಿಕಾರಿಗಳು ಕಾನೂನು ಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಬೆಸ್ಕಾಂ ಅಭಿಯಂತರ ಪ್ರಭಾಕರ್ ಮಾತನಾಡಿ, ಈಗಾಗಲೇ ಬಹುತೇಕ ಪಂಚಾಯಿತಿಗಳು ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ಗಮನಕ್ಕೆ ಬಂದಿದ್ದರಿಂದ ಅಂತಹ ಪಂಚಾಯಿತಿಗಳಿಗೆ ಈಗಾಗಲೇ ದಂಡ ವಿಧಿಸಿದ್ದೇವೆ. ಅಕ್ರಮ ವಿದ್ಯುತ್ ಸಂಪರ್ಕ ಪಡೆಯುವುದು ಕಾನೂನು ಅಪರಾಧ. ಅಕ್ರಮ ಸಂಪರ್ಕ ಪಡೆಯುವುದು ಸರಿಯಲ್ಲ. ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡು ಆರ್ಆರ್ ನಂಬರ್ ಪಡೆಯಬೇಕು ಎಂದು ಸಭೆಯಲ್ಲಿ ಪಿಡಿಓಗಳಿಗೆ ಇಲಾಖೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಭಿಯಂತರ ರವಿ ಎಸ್. ಸೂರನ್, ಪಂಚಾಯಿತಿ ಪಿಡಿಒಗಳು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

