ಬೆಂಗಳೂರು ಗ್ರಾಮಾಂತರ

ಉಚಿತ ನೋಟ್ ಪುಸ್ತಕಗಳ ವಿತರಣೆ

Published On :

ದೊಡ್ಡಬಳ್ಳಾಪುರ:  ಇಲ್ಲಿನ ಲಯನ್ಸ್ ಕ್ಲಬ್, ಲಯನ್ಸ್ ಚಾರಿಟೀಸ್ ಟ್ರಸ್ಟ್(ರಿ) ಮತ್ತು ಲಯನೆಸ್ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ಲಯನ್ಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಲಯನ್ಸ್ ಉಪ ರಾಜ್ಯಪಾಲ ಕೆ.ರಮೇಶ್ ರಾವ್ ಭಾಗವಹಿಸಿದ್ದರು. ಅವರು ಮಾತನಾಡಿ ಶೈಕ್ಷಣಿಕ ಕ್ಷೇತ್ರದ ಅಭ್ಯುದಯ ದೇಶದ ಮುನ್ನಡೆಗೆ ಸಾಕ್ಷಿಯಾಗುತ್ತದೆ. ಉತ್ತಮ ಶಿಕ್ಷಣ ಮತ್ತು ವ್ಯಕ್ತಿತ್ವವನ್ನು ಬೆಳೆಸುವ ಗುರಿಯನ್ನು ಪ್ರತಿಯೊಂದು ಸಂಘಟನೆಗಳೂ ಹೊಂದಿರಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಬೂದಿಪಲ್ಲಿ ಶ್ರೀನಿವಾಸ್, ಲಯನೆಸ್ ಅಧ್ಯಕ್ಷ ಅನ್ನಪೂರ್ಣಮ್ಮ ನಾಗರಾಜ್, ಕಾರ್ಯದರ್ಸಿ ರೇಣುಕಾನಾಗರಾಜ್, ಖಜಾಂಚಿ ಮಂಗಳಗೌರಿ, ಕಾರ್ಯಕ್ರಮ ಸಮಿತಿಯ ಕೃಷ್ಣಮೂರ್ತಿ, ಶೈಕ್ಷಣಿಕ ಸಮಿತಿಯ ಮುನಿರಾಜು ಮತ್ತಿತರರು ಭಾಗವಹಿಸಿದ್ದರು.

ಅನ್ನಭಾಗ್ಯ ಸೌಲಭ್ಯಕ್ಕಾಗಿ ಪರದಾಟ
ಕನಕಪುರ: ರಾಜ್ಯಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಸೌಲಭ್ಯ ಪಡೆಯಲು ನೂರಾರು ಮಂದಿ ಕನಕಪುರದ ತಾಲೂಕು ಕಚೇರಿಯಲ್ಲಿನ ಆಹಾರ ನಿರೀಕ್ಷಕರ ಕಚೇರಿ ಮುಂದೆ ಜಮಾಯಿಸಿ ಪರದಾಡುತ್ತಿದ್ದ ಘಟನೆ ನಡೆದಿದೆ. ಸರ್ಕಾರವು ಬಿಪಿಎಲ್‌ಕಾರ್ಡ್‌ಗಳಿಗೆ ಒಂದು ರು.ಗೆ ಅಕ್ಕಿನೀಡಲು ಕಡ್ಡಾಯವಾಗಿ ಬಯೋವ್ಯಾಟ್ರಿಕ್ ವಿಧಾನವನ್ನು ಜಾರಿಗೊಳಿಸಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.
 ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಬಡಕುಟುಂಬಗಳು ಹೋರಾಟ ನಡೆಸಿ ದರೂ ಪಡಿತರ ಪಡೆಯಲು ವಿಫಲವಾಗಿವೆ.  ಅಕ್ಕಿ ಪಡೆಯುವ ಸಲುವಾಗಿ ನೂರಾರು ಸಂಖ್ಯೆಯಲ್ಲಿ ಜನರು ಆಹಾರ ನಿರೀಕ್ಷಕರ ಕಚೇರಿಗೆ ತೆರಳಿ ಬಯೋ ಮ್ಯಾಟ್ರಿಕ್ಸ್ ವಿಧಾನಕ್ಕೆ ಸೇರಲು ಹೆಬ್ಬೆಟ್ಟಿನ ಗುರುತು ಹಚ್ಚಲು ಸಾಲುಗಟ್ಟಿ ನಿಂತಿದ್ದರು. ಜನದಟ್ಟಣೆ ಹೆಚ್ಚಾದಾಗ ಪೊಲೀಸರು ಬಂದೋಬಸ್ತ್ ಏರ್ಪಡಿಸಿ ಸುಗಮವಾಗಿ ಕಾರ್ಯನಡೆಯಲು ಸಹಕರಿಸಿದರು. 

ಕಾಡಿಗೆ ಮರಳಿದ ಸಲಗ
ಆನೇಕಲ್: ಇಪ್ಪತ್ತು ದಿನಗಳಿಂದ ತಮಿಳುನಾಡಿನ ಹೊಸೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ ಒಂಟಿ ಸಲಗಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಮೂರು ಸಾಕಾನೆಗಳ ಸಹಾಯದಿಂದ ಅದನ್ನು ಲಾರಿಗೆ ಸಾಗಿಸಿ, ಜವಳಗೆರೆ ಅರಣ್ಯಕ್ಕೆ ಬಿಡಲಾಯಿತು.
ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ಹರಸಾಹಸ ಮಾಡಿ ಕಾಡಿಗಟ್ಟುವ ಪ್ರಯತ್ನ ನಡೆಸಿದರೂ ಆನೆ ಕಾಡಿನತ್ತ ತೆರಳದೇ ಹೊಸೂರು ಸಮೀಪದ ವೆಂಕಟೇಶಪುರಂ, ಲೈಲ್ಯಾಂಡ್ ಕಂಪನಿ ಸಮೀಪದ ಬೆಟ್ಟಗುಡ್ಡಗಳ ನಡುವೆ ಸುತ್ತುತ್ತಿತ್ತು.
 ಅರಣ್ಯಾಧಿಕಾರಿಗಳಿಗೆ ಸಲಗವನ್ನು ಅರಣ್ಯಕ್ಕೆ ಕಳುಹಿಸುವುದೇ ತಲೆನೋವಾಗಿತ್ತು. ಅರಣ್ಯಾಧಿಕಾರಿಗಳು ಸಿತ್ತೂರಿನಿಂದ ಸಾಕಾನೆಗಳನ್ನು ತರಿಸಿ, ತಜ್ಙರಿಂದ ಅರಿವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಕಾಡಿಗೆ ಸಾಗಿಸುವಲ್ಲಿ ಯಶಸ್ವಿಯಾದರು.

ಪ್ರಶ್ನೆ ಪತ್ರಿಕೆ ಮಾರಾಟ: ಪರಿಶೀಲನೆ
ಕನಕಪುರ:  ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ತಲಾ 2500 ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಪೋಷಕರ ದೂರಿನ ಆಧಾರದ ಮೇಲೆ ತಹಸೀಲ್ದಾರ್ ಡಾ.ದಾಕ್ಷಾಯಣಿ ಇಲ್ಲಿನ ಐಟಿಐ ಕಾಲೇಜಿಗೆ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
ಹಲವಾರು ಗಂಟೆಗಳ ಕಾಲ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಪ್ರಶ್ನೆಪತ್ರಿಕೆ ಲಕೋಟೆಗಳ ಮೊಹರನ್ನು ಮುಂದೆಯೇ ತೆಗೆಸಿ ಪರೀಕ್ಷಾ ಕೊಠಡಿಗಳಿಗೆ ಸರಬರಾಜು ಮಾಡುವಂತೆ ಸೂಚಿಸಿದರು. ಎಲ್ಲಾ ಘಟನಾವಳಿಗಳನ್ನು ಚಿತ್ರೀಕರಿಸಿದರು.
ಪೋಷಕರು ನೀಡಿದ ಮಾಹಿತಿಯ ಮೇರೆಗೆ ಪರಿಶೀಲನೆ ನಡೆಸಿ ಯಾವುದೇ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇನೆ. ಪರೀಕ್ಷೆಗಳು ಮುಗಿಯುವವರೆಗೆ ಐಟಿಐ ಕಾಲೇಜಿಗೆ ಭೇಟಿ ನೀಡಿ ಸುಗಮವಾಗಿ ಪರೀಕ್ಷೆಗಳು ನಡೆಯುವಂತೆ ಜಾಗೃತಿ ವಹಿಸಲಿದ್ದೇನೆ ಎಂದು ಹೇಳಿದ್ದಾರೆ.

ಆಫೀಸರ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕು ಆಫೀಸರ್ಸ್ ಅಸೋಸಿಯೇಷನ್(ರಿ) ಮತ್ತು ಟೆನ್ನಿಸ್ ಕ್ಲಬ್(ರಿ)ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಂ.ಪುಟ್ಟಲಿಂಗಪ್ಪ (ಅಧ್ಯಕ್ಷ), ಜೆ.ಎಸ್. ಉಮಾಶಂಕರ್ (ಉಪಾಧ್ಯಕ್ಷ), ಪ್ರೊ. ಎನ್.ಮುನಿರಾಜು (ಕಾರ್ಯದರ್ಶಿ), ಡಿ.ಎನ್.ರಾಮಮೂರ್ತಿ (ಖಜಾಂಚಿ), ಎನ್. ವಾಸುದೇವ್, ಎಂ.ಕೃಷ್ಣಪ್ಪ, ಕೆ.ಜಿ. ಮಂಜುನಾಥ್, ಎಂ.ಭರತ್ ಕುಮಾರ್, ರವಿ (ನಿರ್ದೇಶಕರು) ಆಯ್ಕೆಯಾಗಿದ್ದಾರೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ಜನಸಂಪರ್ಕ ಸಭೆ ಇಂದು
ದೊಡ್ಡಬಳ್ಳಾಪುರ: ಕರ್ನಾಟಕ ಲೋಕಾಯುಕ್ತದ ಬೆಂ.ಗ್ರಾ. ಜಿಲ್ಲಾ ಪೊಲೀಸರು ಜು.31ರ ಬುಧವಾರ ಬೆಳಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರದ ಪರಿವೀಕ್ಷಣಾ ಮಂದಿರ(ಪ್ರವಾಸಿ ಮಂದಿರ)ದಲ್ಲಿ ಸಾರ್ವಜನಿಕರ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದು-ಕೊರತೆ ಲೋಕಾಯುಕ್ತಕ್ಕೆ ವಿವರಿಸಬಹುದು. ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಖುದ್ದು ಹಾಜರಾಗಲು ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರ ತಿಳಿಸಿದ್ದಾರೆ.

ಶಾಸಕ ನಾಗರಾಜ್ ಹುಟ್ಟು ಹಬ್ಬ: ಸೀರೆ ವಿತರಣೆ
ಸೂಲಿಬೆಲೆ: ಹೊಸಕೋಟೆ ಶಾಸಕ ಎನ್.ನಾಗರಾಜ್ ಹುಟ್ಟುಹಬ್ಬದ ಪ್ರಯುಕ್ತ  ಸೂಲಿಬೆಲೆ ಹೋಬಳಿಯ ಇ.ಮುತ್ಸಂದ್ರ ಸೇರಿದಂತೆ ಹಲವಡೆ ಬಡವರಿಗೆ ಉಚಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ಸೀರೆ ಹಂಚಿ ಸಿಹಿ ವಿತರಣಿ ಮಾಡಿದರು. ಬಡವರಿಗೆ ಸವಲತ್ತು ವಿತರಣಿ ಮಾಡಿ ಮಾತನಾಡಿದ, ಜಿಲ್ಲಾ ಕಿಸಾನ್ ಖೇತ್ ಮಜ್ದೂರ್ ಘಟಕ ಉಪಾಧ್ಯಕ್ಷ ಮುನಿವೆಂಕಟಪ್ಪ  ಶಾಸಕ ಎನ್.ನಾಗರಾಜ್ ಬಡವರ ಪರವಾದ ಕಾಳಜಿಯನ್ನು ಹೊಂದಿದ್ದು ಇವರ ಜನಪರವಾದ ಸೇವೆಯನ್ನು ಮನಗಂಡ ಕಾರ್ಯಕರ್ತರು ಬಡ ಮಹಿಳೆಯರಿಗೆ ಸೀರೆ, ಪುರುಷರಿಗೆ ಪ್ಯಾಂಟು ಶರ್ಟ್‌ಗಳನ್ನು ವಿತರಣೆ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ರಾಜಣ್ಣ, ತಾಪಂ ಮಾಜಿ ಸದಸ್ಯ ಯರೇಗೌಡ, ಸಾದಿಕ್ ಪಾಷ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು. ಇಪ್ತಿಯಾರ್ ಕೂಟ: ಇದೇ ವೇಳೆ ಗ್ರಾಮದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಇಪ್ತಿಯಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಅನೇಕ ಮುಖಂಡರು ಇದರಲ್ಲಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.