ಬೆಂಗಳೂರು ಗ್ರಾಮಾಂತರ

ಇಂದು ಕ್ಷೀರಭಾಗ್ಯ ಉದ್ಘಾಟನೆ

Published On :

ರಾಮನಗರ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ವಿತರಣೆ ಮಾಡುವ ಕಾರ್ಯಕ್ರಮದ ಉದ್ಘಾಟನೆಯು ಆ.1ರ ಬೆಳಗ್ಗೆ 9.45ಕ್ಕೆ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಹಾಗೂ ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಭಾಗವಹಿಸುವರು. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿವರೆಗಿನ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಕೆನರಾ ಬ್ಯಾಂಕ್ ಶಾಖೆ ಉದ್ಘಾಟನೆ
ದೊಡ್ಡಬಳ್ಳಾಪುರ:  ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಆಲಹಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್‌ನ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಬುಧವಾರ ಬೆಳಗ್ಗೆ ನಡೆಯಿತು. ಶಾಖೆಯನ್ನು ಬೆಂಗಳೂರು ವೃತ್ತ ಕೆನರಾ ಬ್ಯಾಂಕ್‌ನ ವಿಭಾಗೀಯ ಸಹಾಯಕ ವ್ಯವಸ್ಥಾಪಕ ರೆಡ್ಡಯ್ಯ ಉದ್ಘಾಟಿಸಿದರು. ಅವರು ಮಾತನಾಡಿ ಕೆನರಾ ಬ್ಯಾಂಕ್ ಅನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಣೆ ಮಾಡುತ್ತಿರುವುದು ಸಂತಸದ ವಿಚಾರ. ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಗುರ್ತಿಸಿಕೊಳ್ಳುತ್ತಿರುವುದು, ನಗರ ಮತ್ತು ಗ್ರಾಮಾಂತರ ಪ್ರದೇಶದ ಜನರ ಜೊತೆ ಆರ್ಥಿಕ ಸೇತುವೆಯಾಗಿದೆ. ಕೆನರಾ ಬ್ಯಾಂಕ್ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಇಂದು ಬ್ಯಾಂಕ್‌ನ ವಹಿವಾಟು ಮತ್ತು ಪಾರದರ್ಶಕ ಆಡಳಿತ ಇತರ ಬ್ಯಾಂಕುಗಳಿಗೆ ಮಾದರಿ ಎನಿಸಿದೆ ಎಂದರು. ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಮಾಜಿ ಸದಸ್ಯ ಎಸ್.ದಯಾನಂದ್, ಗ್ರಾ.ಪಂ ಸದಸ್ಯ ಮಲ್ಲೇಶ್, ಕೃಷ್ಣಪ್ಪ, ಶಾಖಾ ವ್ಯವಸ್ಥಾಪಕಿ ಆರತಿ ಜೋಷಿ, ಎಸ್.ಜಿ. ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

ಪುಟ್ಟಮಾದಯ್ಯ
ಕನಕಪುರ: ಕನಕಪುರ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಕುರೂಪೇಟೆ ಪುಟ್ಟಮಾದಯ್ಯನವರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.  ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೂರು ಬಾರಿ ಪುರಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಸ್ಥಳೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರು. ನಿಧನದ ವಾರ್ತೆ ತಿಳಿಯುತ್ತಿದ್ದಂತೆ ನೂರಾರು ಮಂದಿ ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.   ಶಾಸಕ ಡಿ.ಕೆ.ಶಿವಕುಮಾರ್, ಉಷಾ ಶಿವಕುಮಾರ್, ಡಿ.ಕೆ.ಸುರೇಶ್, ವಿಪ ಮಾಜಿ ಸದಸ್ಯ ಎಸ್.ರವಿ, ವಿಜಯದೇವ್, ಕೆ.ಎನ್. ದಿಲೀಪ್, ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಮಾಜಿ ಪುರಸಭಾಧ್ಯಕ್ಷ ಎಂ.ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಇಂದು ಉಚಿತ ಆರೋಗ್ಯ ತಪಾಸಣೆ
ನೆಲಮಂಗಲ: ತಾಲೂಕಿನ ದಾಬಸ್‌ಪೇಟೆಯ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಎಲ್.ಎಂ.ಪವರ್‌ಬ್ಲೇಡ್ಸ್ (ಇಂಡಿಯ) ಪ್ರೈವೇಟ್ ಲಿಮಿಟೆಡ್ ಮತ್ತು ದೃಷ್ಟಿ ಕಣ್ಣಿನ ಆಸ್ಪತ್ರೆ, ಸೋಂಪುರ ಗ್ರಾಮ ಪಂಚಾಯ್ತಿ  ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಆ.1ರಂದು ನಡೆಸಲಾಗುತ್ತಿದೆ.

ರಾಘವೇಂದ್ರ ಸ್ವಾಮಿಗಳ  ಆರಾಧನಾ ಮಹೋತ್ಸವ
ಕನಕಪುರ: ಕನಕಪುರದ ಕೆಂಗಲ್‌ಹನುಮಂತಯ್ಯ ವೃತ್ತದಲ್ಲಿರುವ ಪೇಜಾವರ ಮಠದ ಶ್ರೀಕೃಷ್ಣರಾಘವೇಂದ್ರ ಮಂದಿರದಲ್ಲಿ ಶ್ರೀ ರಾಘವೇಂದ್ರಸ್ವಾಮೀಗಳ 342ನೇ ಆರಾಧನಾ ಮಹೋತ್ಸವ ಆಗಸ್ಟ್ 21 ರಿಂದ 23ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪ್ರತಿದಿನವೂ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಪ್ರಸಾದ ವಿನಿಯೋಗಗಳು ನಡೆಯಲಿವೆ.

ಹಲವೆಡೆ ಡೆಂಘೀ ಜ್ವರ
ಕನಕಪುರ ತಾಲೂಕಿನ ಅಣೇದೊಡ್ಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಡೆಂಘೀ ಜ್ವರವು ಸಮೀಪದ ತುಂಗಣಿ ಗ್ರಾಮಕ್ಕೆ ಹಬ್ಬಿದ್ದು ಅನೇಕ ಮಂದಿ ಜ್ವರದಿಂದ ಬಳಲುತ್ತಿರುವ ಪ್ರಕರಣಗಳು ವರದಿಯಾಗಿವೆ. ಎಚ್ಚೆತ್ತ ಆಡಳಿತ ಗ್ರಾಮದಲ್ಲಿ ಸೊಳ್ಳೆನಿವಾರಕ ಹೊಗೆಯನ್ನು ಹರಡಲು (ಫಾಗಿಂಗ್) ಕೈಗೊಂಡಿದೆ. ತಹಸೀಲ್ದಾರ್ ಡಾ.ದಾಕ್ಷಾಯಣಿ, ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಹಾಗೂ ಸಿಬ್ಬಂದಿಯವರು ಡೆಂಘೀ ಹರಡದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದಾರೆ.  ತಾಪಂ ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ ನೇತೃತ್ವದಲ್ಲಿ ತುಂಗಣಿ ಗ್ರಾಮದಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸುವ, ಶುಚಿತ್ವ ಕಾಪಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. 

ಪಕ್ಷೇತರ ಅಭ್ಯರ್ಥಿಯಾಗಿ ಎ.ಚೌರಪ್ಪ ನಾಮಪತ್ರ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಎ.ಚೌರಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕ್ಷೇತ್ರದಲ್ಲಿ 3 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದಂತಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.