ಆಡಂಬರದ ಮದುವೆ ಸಂಪತ್ತು ತೋರಿಸಲು ಮಾತ್ರ: ಹಂಚಿನಮಠ
ಕ.ಪ್ರ. ವಾರ್ತೆ ರಾಮನಗರ ಜೂ. 2
ತಮ್ಮಲ್ಲಿರುವ ಸಂಪತ್ತನ್ನು ಇತರರಿಗೆ ತೋರ್ಪಡಿಸುವ ಸಲುವಾಗಿ ಲಕ್ಷಾಂತರ ರು. ಖರ್ಚು ಮಾಡಿ ಆಡಂಬರದಿಂದ ಮದುವೆ ಮಾಡಿಕೊಳ್ಳಲಾಗುತ್ತಿದೆ. ಇದು ಸಮಾಜದ ಆರ್ಥಿಕ ಅಸಮಾನತೆಯ ಸಂಕೇತವಾಗಿದೆ ಎಂದು ಕನ್ನಡ ಪ್ರಾಧ್ಯಾಪಕ ಪ್ರೊ.ವೀರಭದ್ರಪ್ಪ ಹಂಚಿನ ಮಠ ತಿಳಿಸಿದರು.
ತಾಲೂಕಿನ ಶಿವನಹಳ್ಳಿಯ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಭಾನುವಾರ ನಡೆದ ಸ್ವಾಭಿಮಾನಿ ಸರಳ ವಿವಾಹ ಸಮಾರಂಭ ಮತ್ತು ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿವಾಹ ಬಂಧನಕ್ಕೆ ಒಳಪಡುವ ವಧು-ವರರು ಅರ್ಥ ಮಾಡಿಕೊಂಡು, ಹೊಂದಾಣಿಕೆ ಜೀವನ ನಡೆಸಬೇಕು. ಅದ್ಧೂರಿ ಮದುವೆ ಮಾಡಿಕೊಳ್ಳುವ ಸಲುವಾಗಿ ಸಾಲ ಮಾಡಿ, ನಂತರ ಅದನ್ನು ತೀರಿಸಲಾಗದೆ ವಿಚ್ಛೇದನ ನೀಡುವಂತಾಗಬಾರದು ಎಂದು ಎಚ್ಚರಿಸಿದರು.
ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ನದಿ, ಕೆರೆಗಳು ಬತ್ತಿದ್ದು, ಅಂತರ್ಜಲ ಪಾತಾಳ ಸೇರಿದೆ. ಕುಡಿಯುವ ನೀರು, ಮೇವು, ಬೆಳೆ ನಷ್ಟ ಪರಿಹಾರ, ಬೆಳೆದ ಬೆಳೆಗೆ ವೈಜ್ಞಾನಿಕ ದರ ನಿಗದಿ ಸೇರಿದಂತೆ ಇನ್ನಿತರೆ ವಿಷಯಗಳಿಗೆ ನಿತ್ಯ ರೈತ ಸರ್ಕಾರದ ಜತೆಗೆ ಸಂಘರ್ಷಕ್ಕೆ ಇಳಿಯಬೇಕಾದ ದುಃಸ್ಥಿತಿ ಬಂದೆರಗಿದೆ ಎಂದು ರೈತ ಮುಖಂಡ ಸಿ.ಪುಟ್ಟಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹೇಶ್ ಮತ್ತು ರಾಜಲಕ್ಷ್ಮಿ ಸರಳ ವಿವಾಹವಾದರು. ಮಂಡ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ಸೇಕ್ರೆಡ್ ಸಂಸ್ಥೆಯ ನಿರ್ದೇಶಕಿ ಮೇರಿ ಫಿಲೋಮಿನಾ, ಗಾಯಕ ಸಿ.ಎ.ಶಾಂತಕುಮಾರ್, ರೈತ ಮುಖಂಡರಾದ ಕೃಷ್ಣಪ್ಪ, ವಿ.ಬಾಬು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

