ಜೈನ ಸಂಸ್ಥೆಗೆ ನೀಡಿರುವ ಜಮೀನು ವಾಪಸ್ ಪಡೆಯಲು ಒತ್ತಾಯ
ಕ.ಪ್ರ. ವಾರ್ತೆ ದೇವನಹಳ್ಳಿ ಜೂ. 2
ದೇವನಹಳ್ಳಿ ಹೊರಭಾಗದಲ್ಲಿರುವ ಪರ್ವತಗುಡ್ಡದಲ್ಲಿ ಶ್ರೀ ಸಿದ್ದಾಚಲ ಸ್ಥೂಲಭದ್ರಧಾಮ ಶಾಸನ ಪ್ರಭಾವಕ ಟ್ರಸ್ಟ್ನವರ ಮನವಿಯ ಮೇರೆಗೆ ರಾಜ್ಯ ಸರ್ಕಾರ ಷರತ್ತುಗಳನ್ನು ವಿಧಿಸಿ 30.09 ಎಕರೆ ಜಾಗ ಮಂಜೂರು ಮಾಡಿರುವುದನ್ನು ಸಂಸ್ಥೆಯವರು ಪಾಲಿಸದೇ ಇರುವುದರಿಂದ ಆ ಜಮೀನನ್ನು ವಾಪಸ್ ಪಡೆಯಬೇಕೆಂದು ದೇವನಹಳ್ಳಿಯ ನಾಗರಿಕರು ಹಾಗೂ ಆಂಜನೇಯಸ್ವಾಮಿ ಭಕ್ತ ಮಂಡಳಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸರ್ವೆ ನಂ 157 ರಲ್ಲಿ 30.09 ಎಕರೆ ಜಮೀನನ್ನು 1999 ರಲ್ಲಿ ಸರ್ಕಾರ ಮಂಜೂರಾತಿ ಮಾಡಿದ್ದು ಇದರಲ್ಲಿ ಸಂಸ್ಥೆಯವರು ಅಂಧರಿಗೆ ಆಸ್ಪತ್ರೆ, ಧರ್ಮಸ್ಥಳ, ದೇವಸ್ಥಾನ ಮತ್ತು ಶಾಲೆಗಳನ್ನು ಎರಡು ವರ್ಷದೊಳಗೆ ನಿರ್ಮಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಈ ಸಂಸ್ಥೆಗೆ ಷರತ್ತಿನೊಂದಿಗೆ ಮಂಜೂರು ಮಾಡಿದ್ದರು. ಖರಾಬು ಗುಡ್ಡವನ್ನು ಪ್ರವಾಸಿ ಧಾಮವಾಗಿ ಅಭಿವೃದ್ಧಿ ಮಾಡುವುದರ ಜೊತೆಯಲ್ಲಿ ಪಕ್ಕದಲ್ಲೆ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಲು ಸೂಚಿಸಿದ್ದರು.
ಈ ಜೈನ ಸಂಸ್ಥೆಯವರು ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಗಾಳಿಗೆ ತೂರಿದ್ದಲ್ಲದೆ ಇವರಿಗೆ ಮಂಜೂರಿಯಾಗದ ಸರ್ಕಾರಿ ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಒಪ್ಪಿಗೆ ಇಲ್ಲದೆ ಇತ್ತೀಚೆಗೆ ಜೆಸಿಬಿ ಮೂಲಕ ಬಂಡೆಗಳನ್ನು ಪಕ್ಕಕ್ಕೆ ಸರಿಸಿ ಅನಧಿಕೃತವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ. ತಾಲೂಕು ಆಡಳಿತ ಕಂಡೂ ಕಾಣದಂತೆ ವರ್ತಿಸುತ್ತಿದೆ. ಹಲವಾರು ಬಾರಿ ತಹಸೀಲ್ದಾರರಲ್ಲಿ ಮನವಿ ಮಾಡಿದ್ದರೂ ಜೈನ ಸಂಸ್ಥೆಯವರ ಮೇಲೆ ಕ್ರಮ ಜರುಗಿಸಿಲ್ಲ. ದೇವನಹಳ್ಳಿ ಹಾಗೂ ಸುತ್ತ ಮುತ್ತ ಗ್ರಾಮಗಳ ಭಕ್ತರ ಭಾವನೆಗಳಿಗೆ ನೋವುಂಟಾಗಿದೆ ಎಂದು ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ತಿಳಿಸಿದರು.
ಸರ್ಕಾರ ಈಗಲಾದರೂ ಎಚ್ಚೆತ್ತು ಜೈನ ಸಂಸ್ತೆಯವರಿಗೆ ನೀಡಿರುವ ಜಮೀನನ್ನು ವಾಪಸ್ ಪಡೆಯಬೇಕು ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ಮುಖಂಡರಾದ ಮುನಿರಾಜು, ಭಾಸ್ಕರ್ ಹಾಗೂ ದೇವಾಲಯದ ಭಕ್ತಮಂಡಳಿಯವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

