'ಯಾಂತ್ರೀಕೃತ ಕಸಾಯಿಖಾನೆ ಬಿಜೆಪಿ ಪಾಪದ ಕೂಸು'
ಕ.ಪ್ರ. ವಾರ್ತೆ , ಕನಕಪುರ , ಜೂ. 5
ಕನಕಪುರ ತಾಲೂಕು ಹಾರೋಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಯಾಂತ್ರೀಕೃತ ಕಸಾಯಿಖಾನೆ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಪಾಪದ ಕೂಸಾಗಿದ್ದು ಯೋಜನೆ ಪ್ರಾರಂಭದಿಂದಲೇ ಜಾತ್ಯತೀತ ಜನತಾದಳ ಕಸಾಯಿಖಾನೆಯನ್ನು ವಿರೋಧಿಸುತ್ತಾ ಬಂದಿದೆ. ಅಲ್ಲದೆ ವಿಧಾನಸಭೆಯಲ್ಲಿಯೂ ವಿಚಾರ ಪ್ರಸ್ತಾಪಿಸಿ ವಿರೋಧ ವ್ಯಕ್ತಪಡಿಸಿದೆ ಎಂದು ಮಾಜಿ ಶಾಸಕ ಕೆ.ರಾಜು ಹೇಳಿದ್ದಾರೆ.
ಅವರು ಕನಕಪುರದ ತಾಪಂ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಕನಕಪುರ ಕ್ಷೇತ್ರದ ಅಭಿವೃದ್ಧಿಗಾಗಿ ಹಾರೋಹಳ್ಳಿಯಲ್ಲಿ ನಾಲ್ಕುಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಿ ಸ್ಥಳೀಯ ಯುವಜನರ ನಿರುದ್ಯೋಗ ಸಮಸ್ಯೆ ನೀಗಿಸಲು ಯತ್ನಿಸಿದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ಅಂದಿನ ದಿನಗಳಲ್ಲೇ ಯಾಂತ್ರೀಕೃತ ಕಸಾಯಿಖಾನೆ ಬೇಡವೆಂದು ಹಾಗೂ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಸಾಯಿಖಾನೆ ವಿಚಾರವನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಪ್ರತಿಭಟನೆ ಬಂದ್ಗಳನ್ನು ನಡೆಸಿ ಮುಗ್ಧಜನರ ದಾರಿತಪ್ಪಿಸುತ್ತಿರುವುದಲ್ಲದೆ ಪ್ರತಿಭಟನಾ ಸಮಯದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿಯವರ ವಿರುದ್ಧ ಧಿಕ್ಕಾರ ಕೂಗಿರುವುದು ಖಂಡನೀಯ. ಜನತಾದಳದ ಹೆಸರನ್ನು ಕೆಡಿಸಲು ಯತ್ನಿಸುತ್ತಿರುವ ಸ್ಪಷ್ಟ ಉದಾಹರಣೆಯಾಗಿದೆ ಎಂದು ರಾಜು ಟೀಕಿಸಿದರು.
ಯೋಜನೆ ರದ್ದುಗೊಳಿಸಲಿ : ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು ನಿಜವಾಗಿಯೂ ಜನಪರ ಕಾಳಜಿಯಿದ್ದರೆ, ಜಿಲ್ಲಾ ಉಸ್ತುವಾರಿ ಹೊತ್ತಿರುವ ಗೃಹಸಚಿವರು ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಯೋಜನೆಯನ್ನು ರದ್ದುಗೊಳಿಸಲಿ, ಅದನ್ನು ಬಿಟ್ಟು ರಾಜಕೀಯ ನಿರುದ್ಯೋಗಿಗಳಾಗಿರುವ ಕೆಲವರು ಅಲ್ಪತನದಿಂದ ವರ್ತಿಸುತ್ತಾ ಜೆಡಿಎಸ್ನ ಮೇಲೆ ಗೂಬೆ ಕೂರಿಸುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ರಾಜು ವಿಷಾದ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್ ಮಾತನಾಡಿ, ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಜನರು ಚುನಾವಣೆಯಲ್ಲಿ ಕಾಂಗ್ರೆಸ್ನ ಡೋಂಗಿತನಕ್ಕೆ ತಕ್ಕ ಉತ್ತರ ನೀಡಿದ್ದರೂ ಅವರ ವರ್ತನೆಗಳು ಬದಲಾಗಿಲ್ಲ. ಕೆಲವರು ಕಸಾಯಿಖಾನೆ ವಿಚಾರವನ್ನೇ ಮುಂದಿವರಿಸಿಕೊಂಡು ರೋಲ್ಕಾಲ್ಗೆ ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು. ಜೆಡಿಎಸ್ ಮುಖಂಡರಾದ ಬಿ.ನಾಗರಾಜು, ಸಿದ್ಧಮರಿಗೌಡ, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ತುಂಗಣಿ ಪುಟ್ಟಸ್ವಾಮಿ, ರಾಮಕೃಷ್ಣ, ಕೋಡಿಹಳ್ಳಿ ಗಣೇಶ್, ಸ್ಟುಡಿಯೋ ಚಂದ್ರು, ಶಿವರಾಜು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

