ಬೆಂಗಳೂರು ಗ್ರಾಮಾಂತರ

ಅವೈಜ್ಞಾನಿಕ ಜೀವನಶೈಲಿಯಿಂದ ಪರಿಸರದ ವಿನಾಶ

Published On :

ಕ.ಪ್ರ.ವಾರ್ತೆ ,   ದೊಡ್ಡಬಳ್ಳಾಪುರ ,   ಜೂ.5
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದ ವಿವಿಧೆಡೆ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಶಾಲಾ ಕಾಲೇಜುಗಳು, ವಿವಿಧ ಸಂಘಟನೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲೂ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿವಿಧ ಕಾರ್ಯಕ್ರಮಗಳಲ್ಲಿ ಮಾತನಾಡಿದ ಗಣ್ಯರು, ಮುಂಬರುವ ದಿನಗಳು ಪರಿಸರದ ವಿಚಾರದಲ್ಲಿ ಅತ್ಯಂತ ಕರಾಳವಾಗಿರಲಿವೆ. ಜಾಗತಿಕವಾಗಿ ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾನವ ಜನಾಂಗ ಪರಿಸರವನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದ ಕೆಲವೇ ವರ್ಷಗಳಲ್ಲಿ ವಿನಾಶವನ್ನು ಹೊಂದಲಿದೆ  ಅದನ್ನು ತಪ್ಪಿಸಬೇಕಾದರೆ, ಯುವಜನತೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಪರಿಸರ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ಪರಿಸರದ ವಿಚಾರದಲ್ಲಿ ದೊಡ್‌ಡಬಳ್ಳಾಪುರದ ಭವಿಷ್ಯ ಅತ್ಯಂತ ಆತಂಕಕಾರಿಯಾಗಿದೆ.
ಅಂತರ್ಜಲ ಮಟ್ಟ ಕುಸಿತ, ನಿರಂತರವಾಗಿ ನಡೆಯುತ್ತಿರುವ ಪರಿಸರ ವಿರೋಧಿ ಕೃತ್ಯಗಳು, ಕೈಗಾರಿಕೆಗಳ ಬೆಳವಣಿಗೆ ಮತ್ತು ಅವೈಜ್ಞಾನಿಕ ಜೀವನಶೈಲಿಯಿಂದ ಇಲ್ಲಿನ ನಿಸರ್ಗ ಸಂಪೂರ್ಣ ಹದಗೆಡುತ್ತಿದೆ ಎಂದರು.
ಬಿರ್ಲಾ ಕಾರ್ಖಾನೆಯಲ್ಲಿ: ಇಲ್ಲಿನ ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನೂರಾರು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಪುರುಷೋತ್ತಮ್, ಶ್ರೀಶೈಲ್ ಯರಗೋಳ್, ಪಂಕಜ್ ಶರ್ಮ ಭಾಗವಹಿಸಿದ್ದರು. ಅವರು ಮಾತನಾಡಿ, ಪರಿಸರ ಸಂರಕ್ಷಣೆಗೆ ಒತ್ತು ನೀಡದ ಹೊರತು ನಮಗೆ ಭವಿಷ್ಯವಿಲ್ಲ.
ಪರಿಸರ ಮತ್ತು ಆಹಾರದ ಕುರಿತ ಕಾಳಜಿ 21ನೇ ಶತಮಾನದ ಮನುಷ್ಯನಿಗೆ ಅತಿಮುಖ್ಯ. ಪರಿಸರ ಕಾಳಜಿ ಒಂದು ದಿನಕ್ಕೆ ಸೀಮಿತವಾಗದೆ ಎಲ್ಲ ಹಂತಗಳಲ್ಲೂ ಇರಬೇಕು.
ನೈಸರ್ಗಿಕ ಶಕ್ತಿ ಸಂಪನ್ಮೂಲಗಳ ಮಿತ ಬಳಕೆಗೆ ಆದ್ಯತೆ ನೀಡಬೇಕು ಎಂದರು. ಆರ್.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಸಂಪನ್ಮೂಲ ಅಧಿಕಾರಿ ಮಂಜುನಾಥ್, ವಿವೇಕಾನಂದ್, ರಾಮಣ್ಣ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕನಸವಾಡಿ ಕಾಲೇಜು: ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಉಪನ್ಯಾಸಕ ಗೋವಿಂದರಾಜು, ಎಸ್.ಪಿ. ವೃಂದಮ್ಮ, ಎಸ್.ಕೆ.ಹನುಮೇಗೌಡ, ಕೆ.ಪಿ.ಮಂಗಳ, ಕೆ.ಮಂಜುಳಾ, ಕೆ.ಎಲ್.ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.
ಆದಿತ್ಯ ಪಬ್ಲಿಕ್ ಶಾಲೆ: ಇಲ್ಲಿನ ಆದಿತ್ಯ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಕುರಿತ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪರಿಸರದ ಕುರಿತು ಅರಿವು ಮೂಡಿಸುವ ಅನೇಕ ಬರೆಹಗಳೊಂದಿಗೆ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಭಾಗವಹಿಸಿದ್ದರು.
ಇಲ್ಲಿನ ಎಂಎಸ್‌ವಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ನೈಸರ್ಗಿಕ ಅರಿವು ಮೂಡಿಸುವ ಕಾರ್ಯಕ್ರಮನಡೆಯಿತು.
ಪೋಷಕರಿಗೆ ಸಸಿಗಳ ವಿತರಣೆ ಮತ್ತು ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುಳಾ ಸುಬ್ರಹ್ಮಣ್ಯ, ಪ್ರಾಂಶುಪಾಲ ಸುನಿಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸರಸ್ವತಿ ಶಾಲೆ: ಇಲ್ಲಿನ ಸರಸ್ವತಿ ಶಾಲೆಯಲ್ಲೂ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರವಾದಿ ಕೆ.ಗುರುದೇವ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಸಂಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.