ಬೆಂಗಳೂರು ಗ್ರಾಮಾಂತರ

ಕೊಳಚೆ ನೀರಿನಿಂದ ಗ್ರಾಮಗಳ ಪರಿಸರ ಕಲುಷಿತ

Published On :

ಕ.ಪ್ರ.ವಾರ್ತೆ ,   ರಾಮನಗರ ,   ಜೂ.5
ಬೆಂಗಳೂರಿನಿಂದ ಹರಿದು ಬರುವ ಕೊಳಚೆ ನೀರು ಹಾಗೂ ಕಾರ್ಖಾನೆಗಳು ಹೊರಬಿಡುವ ರಾಸಾಯನಿಕ ಕಲ್ಮಶಯುಕ್ತ ನೀರಿನಿಂದಾಗಿ ಬಿಡದಿ ಹೋಬಳಿಯ ಬೈರಮಂಗಲದ ಸುತ್ತಮುತ್ತಲಿನ ಗ್ರಾಮಗಳ ಪರಿಸರ ಕಲುಶಿತಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಬೈರಮಂಗಲದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿ ನೆಟ್ಟ ಬಳಿಕ ಮಾತನಾಡಿದ ಅವರು, ಪರಿಸರ ನೈರ್ಮಲ್ಯದಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವಿಷಾದಿಸಿದರು.
ಕೊಳಚೆ ನೀರನ್ನು ಶುದ್ಧೀಕರಿಸಿ ಕೃಷಿ ಚಟುವಟಿಕೆಯನ್ನು ಪುನರಾರಂಭಗೊಳಿಸಲು ಬೈರಮಂಗಲದಲ್ಲಿ ನೀರು ಶುದ್ಧೀಕರಣ ಘಟಕದ ಸ್ಥಾಪನೆಗೆ ಯೋಜಿಸಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಜಿಲ್ಲಾಧಿಕಾರಿ ಹಾಗೂ ಸಿಇಓಗಳ ಸಭೆಯಲ್ಲಿ ಶುದ್ಧೀಕರಣ ಘಟಕ ಸ್ಥಾಪನೆ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ಬೇಡಿಕೆ ಇಲ್ಲವಾಗಿದೆ: ಬೈರಮಂಗಲ ಕೆರೆ ಸೊಳ್ಳೆ ಉತ್ಪಾದನೆ ತಾಣವಾಗಿದೆ. ಕಲ್ಮಶಗೊಂಡ ಪರಿಸರದಿಂದ ಮನುಷ್ಯನ ಜೀವನ ದುಸ್ಥರವಾಗಿದೆ, ಮನುಷ್ಯನ ಆಯಸ್ಸು ಕ್ಷೀಣಿಸಿದೆ. ಇಲ್ಲಿ ಬೆಳೆಯುವ ಹುಲ್ಲು, ತರಕಾರಿಗಳು ಕಲ್ಮಶಗೊಂಡು, ಬೆಳೆಯುವ ಬೆಳೆಗೆ ಬೇಡಿಕೆ ಇಲ್ಲವಾಗಿದೆ. ನೀರು ಶುದ್ಧೀಕರಣ ಘಟಕವನ್ನು ತ್ವರಿತವಾಗಿ ಸ್ಥಾಪಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಫಲ ಹಾಗೂ ನೆರಳು ನೀಡುವ 6000 ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಕಾಂಪೌಂಡ್ ಹೊಂದಿರುವ 1300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಆವರಣಗಳಲ್ಲಿ, ರಸ್ತೆ ಬದಿಗಳಲ್ಲಿ, ಕಾರ್ಖಾನೆ ಪ್ರದೇಶಗಳಲ್ಲಿ 10 ಲಕ್ಷ ಸಸಿಗಳನ್ನು ನೆಡಲು ವ್ಯವಸ್ಥಿತ ಯೋಜನೆಯನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ರೂಪಿಸಿದೆ ಎಂದರು.
ನುಗ್ಗೆ, ಕರಿಬೇವು, ಪಪ್ಪಾಯಿ, ಬೇವು, ನೆಲ್ಲಿಕಾಯಿ, ಮುಂತಾದ ಪೋಷಕಾಂಶ ಹಾಗೂ ಪೌಷ್ಟಿಕಾಂಶ ಭರಿತ ಗಿಡಗಳನ್ನು ಶಾಲೆಗಳ ಆವರಣದಲ್ಲಿ ಬೆಳೆಸಿ, ಬೆಳೆಯನ್ನು ಸ್ಥಳೀಯ ಶಾಲೆಗಳೇ ಅಕ್ಷರ ದಾಸೋಹಕ್ಕೆ ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಮಕ್ಕಳ ಭೌತಿಕ ಹಾಗೂ ಮಾನಸಿಕ ಮಟ್ಟ ಹೆಚ್ಚಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ ಮಾತನಾಡಿದರು. ಜಿ.ಪಂ. ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್, ಪ್ರಾಂಶುಪಾಲ ಕೆ.ಎಂ.ಪುಟ್ಟಮಾದಯ್ಯ, ವಲಯ ಅರಣ್ಯಾಧಿಕಾರಿ ಪುಟ್ಟಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.