ಬೆಂಗಳೂರು ಗ್ರಾಮಾಂತರ

ಗುಟ್ಕಾ ನಿಷೇಧ ಹಿನ್ನೆಲೆ: ಡಿಸಿಯಿಂದ ಅಧಿಕಾರಗಳ ಸಭೆ

Published On :

ಕ.ಪ್ರ.ವಾರ್ತೆ  ರಾಮನಗರ   ಜೂ.7
ರಾಜ್ಯ ಸರ್ಕಾರವು ಗುಟ್ಕಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಗುಟ್ಕಾ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತಂಬಾಕು ಮತ್ತು ನಿಕೊಟಿನ್ ಘಟಕಾಂಶಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳನ್ನು ಯಾವುದೇ ಹೆಸರಿನಲ್ಲಿ ತಯಾರಿಸುವುದು, ಸಂಗ್ರಹಣೆ, ಮಾರಾಟ ಹಾಗೂ ವಿತರಣೆ ತಡೆಯಲು ತಂಡಗಳನ್ನು ರಚಿಸುವ ನಿರ್ಧಾರ ಕೈಗೊಂಡರು.  ನಗರ ವ್ಯಾಪ್ತಿಯಲ್ಲಿ ನಗರಸಭೆ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕರು, ಕರ ವಸೂಲಿಗಾರರು, ಆಹಾರ ಸುರಕ್ಷಾ ಅಧಿಕಾರಿ, ಹಿರಿಯ ಆರೋಗ್ಯ ನೀರಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡಂತೆ ತಂಡಗಳನ್ನು ರಚಿಸಿದೆ.
ಅಂತೆಯೇ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸಹಯೋಗದೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಕಾರ್ಯದರ್ಶಿ, ಆಹಾರ ನಿರೀಕ್ಷಕರು, ಪಂಚಾಯಿತಿ ಕರ ವಸೂಲಿಗಾರರು ಒಳಗೊಂಡಿರುವ ತಂಡಗಳನ್ನು ರಚಿಸಿ, ಗುಟ್ಕಾ ಮಾರಾಟ ಮಾಡುವವರ ಮೇಲೆ  ದಾಳಿ ನಡೆಸುವಂತೆ ಸೂಚಿಸಿದರು.
ವರಿದಿ ಸಲ್ಲಿಸಿ: ಅಂಗಡಿಗಳು ಮತ್ತು ಗೋದಾಮಿನ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸುವುದು. ದಾಳಿಯಲ್ಲಿ ವಶಪಡಿಸಿಕೊಂಡ ತಂಬಾಕು ಮತ್ತು ನಿಕೋಟಿನ್ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಿಕೊಂಡು, ನಾಶಪಡಿಸುವುದು ಹಾಗೂ ಪ್ರತಿ 3 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿದರು. ದಾಳಿ ಸಂದರ್ಭದಲ್ಲಿ ಸಂಬಂಧಿತ ಅಂಗಡಿ ಅಥವಾ ದಾಸ್ತಾನುದಾರರಿಗೆ ನೊಟೀಸ್ ನೀಡಬೇಕು. ಮುಂದಿನ ಬಾರಿ ದಾಳಿಯಲ್ಲಿ ನಿಷೇಧಿತ ತಂಬಾಕು ಹಾಗೂ ನಿಕೋಟಿನ್ ಯುಕ್ತ ಆಹಾರ ಪದಾರ್ಥಗಳ ಮಾರಾಟ ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಪ್ರಭಾರ ಜಿಲ್ಲಾ ಯೋಜನಾ ನಿರ್ದೇಶಕ ಜಯಮಾಧವ್, ಅಂಕಿತ ಅಧಿಕಾರಿ ಡಾ.ಕೆ.ಎಂ.ಶ್ರೀನಿವಾಸನ್, ಯಶವಂತ್ ಕುಮಾರ್, ಪದ್ಮನಾಭ್, ಬಸವರಾಜಯ್ಯ, ಡಾ.ಆರ್. ರಘುನಾಥ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.