ದೊಡ್ಡಬಳ್ಳಾಪುರದಲ್ಲಿ 130 ಕೋಟಿ ವೆಚ್ಚದ ಇಎಸ್ಐ ಆಸ್ಪತ್ರೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜೂ.9
ಕೇಂದ್ರ ಕಾರ್ಮಿಕ ಇಲಾಖೆಯ ಮೂಲಕ ಬೆಂಗಳೂರಿನ ಬೊಮ್ಮಸಂದ್ರ ಮತ್ತು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿಸ್ಪೆಷಾಲಿಟಿ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಲು ಯುಪಿಎ-2 ಸರ್ಕಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಈಗ ಸುಮಾರು 130 ಕೋಟಿ ವೆಚ್ಚದಲ್ಲಿ ದೊಡ್ಡಬಳ್ಳಾಪುರ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭಾನುವಾರ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐಸಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಕೇಂದ್ರ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಇಲಾಖೆಯಿಂದ ರಾಜ್ಯಕ್ಕೆ 4500 ಕೋಟಿಗೂ ಅಧಿಕ ಹಣವನ್ನು ವಿವಿಧ ಯೋಜನೆಗಳ ಮೂಲಕ ನೀಡಲಾಗಿದೆ.
ಕಾರ್ಮಿಕ ವಿಮಾ ನಿಗಮದಲ್ಲಿ ಎಲ್ಲ ಪಕ್ಷಗಳಿಗೆ ಸೇರಿದ ಸದಸ್ಯರೂ ಇರುತ್ತಾರೆ. ಎಲ್ಲರನ್ನೂ ಓಲೈಸಿ ಹಣ ತರುವುದು ಕಷ್ಟದ ಕೆಲಸ. ಕಾರ್ಮಿಕರು, ಆಡಳಿತ ಮಂಡಲಿ, ಸಂಘಟನೆಗಳಿಗೆ ಸವಲತ್ತು ಮತ್ತು ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಬೆಂಬಲವೂ ಬೇಕಾಗುತ್ತದೆ. ಸರ್ಕಾರ ಬೆಂಬಲಿಸದಿದ್ರೆ ಈ ಯೋಜನೆಗಳು ಜನರಿಗೆ ತಲುಪುವುದು ಕಷ್ಟ ಎಂದರು.
ಹೇಳಿದ್ದೊಂದು ಮಾಡಿದ್ದೊಂದು: ಹಿಂದಿನ ಅವಧಿಯ ರಾಜ್ಯ ಸರ್ಕಾರ ಇಎಸ್ಐಸಿ ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ ಹೇಳಿದ್ದೊಂದು, ಮಾಡಿದ್ದೊಂದು.
ಬೊಮ್ಮಸಂದ್ರದಲ್ಲಿ ನಿರ್ಮಿಸಲು ಉದ್ದೇಶಿದ್ದ 200 ಹಾಸಿಗೆಗಳ ಆಸ್ಪತ್ರೆಗೆ ನಮಗೆ ತೋರಿಸಿದ್ದೇ ಒಂದು ಜಾಗ, ಆದ್ರೆ ಮಂಜೂರು ಮಾಡಿದ್ದೇ ಇನ್ನೊಂದು ಜಾಗ. ಈ ಗೊಂದಲದಲ್ಲಿ ಯೋಜನೆಗಳು ನೆನೆಗುದಿಗೆ ಬಿದ್ದವು ಎಂದು ಆರೋಪಿಸಿದರು. ಈಗಿನ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಜಾಗ ಕೊಟ್ರೆ ಕೇಂದ್ರದಿಂದ ತಕ್ಷಣ 200 ಕೋಟಿ ನೀಡುವುದಾಗಿ ಹೇಳಿದರು.
ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ಬಡವರಿಗೆ 30 ಸಾವಿರದವರೆಗಿನ ಆರೋಗ್ಯ ನಿಧಿ ದೊರೆಯಲಿದೆ. ವರ್ಷದಲ್ಲಿ ಕುಟುಂಬದ ಗರಿಷ್ಠ 5 ಜನಕ್ಕೆ ಇದು ಅನ್ವಯವಾಗಲಿದೆ. ಪಶ್ಚಿಮ ಬಂಗಾಳ, ಕೇರಳ ಮುಂತಾದ ರಾಜ್ಯಗಳು ಯೋಜನೆಯನ್ನು ಸಮರ್ಪಕ ಬಳಸಿಕೊಳ್ಳುತ್ತಿವೆ. ಈ ಯೋಜನೆಯಲ್ಲಿ ಕಳೆದ ಮೂರುವರೆ ವರ್ಷದಲ್ಲಿ ರಾಜ್ಯಕ್ಕೆ 2500 ಕೋಟಿ ನೀಡಿದ್ದೇವೆ.
ಕಳೆದ 10 ದಿನಗಳ ಹಿಂದೆ ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಯೋಜನೆ ವ್ಯಾಪ್ತಿಯನ್ನು ಆಟೋ ಚಾಲಕರು, ಬಿಪಿಎಲ್ ಕುಟುಂಬಗಳು, ಗೃಹೋದ್ಯೋಗಿಗಳಿಗೂ ವಿಸ್ತರಿಸಲು ಅನುಮೋದನೆ ನೀಡಲಾಗಿದೆ. ನಮ್ಮಲ್ಲಿ ಸವಲತ್ತುಗಳಿಗೆ ಕೊರತೆ ಇಲ್ಲ. ಜನಕ್ಕೆ ತಲುಪಿಸುವವರ ಕೊರತೆ ಎದ್ದುಕಾಣುತ್ತಿದೆ ಎಂದರು.
ರಾಜ್ಯದಲ್ಲಿ ಕಟ್ಟಡ ಕೂಲಿ ಕಾರ್ಮಿಕರ ಕಲ್ಯಾಣ ನಿಧಿಗೆ ಕೇಂದ್ರ ಸರ್ಕಾರ ನೀಡಿರುವ 1200 ಕೋಟಿ ಮೀಸಲು ನಿಧಿಯಲ್ಲಿ ಕೇವಲ 80 ಕೋಟಿಯನ್ನಷ್ಟೇ ಬಳಸಿಕೊಳ್ಳಲಾಗಿದೆ. ಇರುವ ಹಣವನ್ನೇ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಜನಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಅಧಿಕಾರಿಗಳು ಮತ್ತು ಸರ್ಕಾರ ಶ್ರಮಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

