ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಪ್ರಾಪ್ತಿ ಇಲ್ಲ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜೂ.10
ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಮೂರು ತಿಂಗಳಾದ್ರೂ ಪುರಪಿತೃಗಳಿಗೆ ಇನ್ನೂ ಅಧಿಕಾರ ಪ್ರಾಪ್ತಿಯಾಗಿಲ್ಲ. ಅಧಿಕಾರ ರಹಿತ ಸದಸ್ಯರಾದ ಅವರು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗದೆ, ಅಂದುಕೊಂಡ ಅಭಿವೃದ್ಧಿ ಕೆಲಸಗಳಿಗೆ ಚಾಲನೆಯನ್ನೂ ನೀಡಲಾಗದೆ ಪರಿತಪಿಸುತ್ತಿದ್ದಾರೆ.
ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಚುನಾವಣೆ ಮಾ.7ರಂದು ನಡೆದಿತ್ತು. ಮಾ.11ರಂದು ಫಲಿತಾಂಶ ಪ್ರಕಟವಾಗಿತ್ತು. ಚುನಾವಣೆ ನಡೆದ ಸಂಸ್ಥೆಗಳಲ್ಲಿ ಇಲ್ಲಿವರೆಗೆ ಚುನಾಯಿತ ಆಡಳಿತ ವ್ಯವಸ್ಥೆಯೇ ಅಸ್ತಿತ್ವಕ್ಕೆ ಬಂದಿಲ್ಲ.
ಪೌರ ಸಂಸ್ಥೆಗಳ ಫಲಿತಾಂಶದ ನಂತರ ವಿಧಾನಸಭೆ ಚುನಾವಣೆಯ ಅಧಿಸೂಚನೆ ಹೊರಬಿದ್ದಿತ್ತು. ಆ ಚುನಾವಣೆ ಮುಗಿದು, ಸರ್ಕಾರವೂ ರಚನೆಯಾಗಿದೆ. ಇಷ್ಟಾಗಿಯೂ ಪೌರ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳ ದರ್ಬಾರ್ ಅಂತ್ಯವಾಗಿಲ್ಲ.
ಜಾತಕ ಪಕ್ಷಿಗಳು: ಸ್ಥಳೀಯ ಸಂಸ್ಥೆಗಳ ಚುನಾಯಿತ ಆಡಳಿತ ವ್ಯವಸ್ಥೆಯ ಅಸ್ತಿತ್ವವು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯೊಂದಿಗೆ ಪ್ರಾರಂಭಗೊಳ್ಳುತ್ತದೆ. ಆದರೆ, ಉಭಯ ಸ್ಥಾನಗಳಿಗೆ ಇದುವರೆಗೆ ಮೀಸಲು ಕೂಡ ನಿಗದಿಯಾಗಿಲ್ಲ. ಹೀಗಾಗಿ ಚುನಾಯಿತ ಸದಸ್ಯರು ಅಧಿಕಾರಕ್ಕಾಗಿ ಚಾತಕಪಕ್ಷಿಯಂತೆ ಕಾಯುವಂತಾಗಿದೆ.
ಕಳೆದ ಬಾರಿಯೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಮೀಸಲು ನಿಗದಿ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಾಜ್ಯದಿಂದಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸುಮಾರು 5 ತಿಂಗಳು ವಿಳಂಬವಾಗಿತ್ತು. ಈಗಲೂ ಸರ್ಕಾರದ ಅನಾದರಣೆ ಮುಂದುವರೆದಿದೆ.
208 ಪೌರ ಸಂಸ್ಥೆಗಳು: 7 ಮಹಾನಗರ ಪಾಲಿಕೆಗಳು, 43 ನಗರಸಭೆ, 64 ಪುರಸಭೆಗಳು ಮತ್ತು 92 ಪೌರ ಸಂಸ್ಥೆಗಳ 4952 ವಾರ್ಡ್ಗಳ ಸದಸ್ಯರು ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ತೇರದಾಳ ಪುರಸಭೆಯ ಎಲ್ಲ 23 ವಾರ್ಡ್ಗಳು ಮತ್ತು ಚಿಕ್ಕಬಳ್ಳಾಪುರ ನಗರಸಭೆಯ 1 ವಾರ್ಡ್ಗೆ ಚುನಾವಣೆ ನಡೆದಿರಲಿಲ್ಲ. ಆ ಸ್ಥಾನಗಳಿಗೂ ಇಲ್ಲಿವರೆಗೆ ಮರು ಚುನಾವಣೆ ಘೋಷಣೆಯಾಗಿಲ್ಲ.
ಸಮಸ್ಯೆಗಳ ಆಗರ: ರಾಜ್ಯಾದ್ಯಂತ ಮಾರಕ ಡೆಂಘೀ ಸಹಿತ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹತೋಟಿ ಕಾರ್ಯಾಚರಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಅಲ್ಲೀಗ ಚುನಾಯಿತ ವ್ಯವಸ್ಥೆ ಇಲ್ಲದ ಕಾರಣ ಸಿಬ್ಬಂದಿಗೆ ಲಗಾಮಿಲ್ಲದಂತಾಗಿದೆ.
ಮುಂಗಾರು ಪ್ರಾರಂಭವಾಗಿದ್ದರೂ ಸಾಕಷ್ಟು ಕಡೆ ಕುಡಿಯುವ ನೀರಿನ ಬವಣೆ ನೀಗಿಲ್ಲ. ಎಲ್ಲೆಡೆ ಅನೈರ್ಮಲ್ಯ ಸಮಸ್ಯೆ ಹೆಚ್ಚಿದೆ. ಕರ ವಸೂಲಿ, ಅಭಿವೃದ್ಧಿ ಕೆಲಸಗಳ ಅನುಷ್ಠಾನಕ್ಕೆ ಅಧಿಕಾರ ಶಾಹಿ ಒತ್ತು ನೀಡದ ಕಾರಣ ಚುನಾಯಿತ ಆಡಳಿತ ಪ್ರತಿಷ್ಠಾಪನೆಯ ಅನಿವಾರ್ಯತೆ ಎದ್ದು ಕಾಣುತ್ತಿದೆ.
ಮೀಸಲಿಗೆ ಒತ್ತಡ: 2011ರ ಜನಗಣತಿ ಆಧರಿಸಿ ಪೌರ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಏತನ್ಮಧ್ಯೆ, ನಿರ್ದಿಷ್ಟ ಮೀಸಲು ನಿಗದಿಗಾಗಿ ಲಾಬಿ ಹೆಚ್ಚಿರುವುದು ಆಡಳಿತಾರೂಢ ಕಾಂಗ್ರೆಸಿಗರಿಗೆ ತಲೆನೋವು ತಂದಿದೆ.
ಬಹುಮತ ಇಲ್ಲದ ಕಡೆ ಮೀಸಲು ಮಹಿಮೆಯಿಂದ ಅಧಿಕಾರ ಗಿಟ್ಟಿಸುವ ಷಡ್ಯಂತ್ರವೂ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವ ಕ್ಷೇತ್ರಗಳಿಂದಲೇ ಮೀಸಲು ಸಂಬಂಧ ಲಾಬಿ ಹೆಚ್ಚಾಗಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

