ಬೆಂಗಳೂರು ಗ್ರಾಮಾಂತರ

'ಜೆಡಿಎಸ್ಗೆ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ'

Published On :

ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳುವುದು ನನ್ನ ಗುರಿಯಾಗಿದ್ದು,  ಈ ಕ್ಷೇತ್ರದಿಂದಲೇ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗುವುದಾಗಿ  ವಿಧಾನಸಭಾ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.
ಪಟ್ಟಣದ ಕೆಂಗಲ್ ದೇವಾಲಯದ ಆವರಣದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಪರಾಜಿತವಾದ ಹಿನ್ನೆಲೆಯಲ್ಲಿ ಹಮ್ಮಿ ಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಸದ್ಯದಲ್ಲೇ ಆರಂಭ ಗೊಳ್ಳಲಿರುವ ಬಜೆಟ್ ಅಧಿವೇಶನ ಮುಗಿದ ನಂತರ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ತಿಳಿಸಿದರು.
ಸೋಲಿಗೆ ನಾವೇ ಹೊಣೆ: ಈಕ್ಷೇತ್ರದ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ನನ್ನ ಪತ್ನಿಯನ್ನು ನಾನು ಕಣಕ್ಕಿಳಿಸಿದೆ, ಕ್ಷೇತ್ರದ ಮತದಾರರು ನಮ್ಮ ಪಕ್ಷಕ್ಕೆ ಆಶೀರ್ವದಿಸಿ 73ಸಾವಿರ ಮತಗಳನ್ನು ನೀಡಿದ್ದಾರೆ. ಕೆಲ ಕಾರಣಗಳಿಂದ ನಮ್ಮ ಪಕ್ಷ ಸೋಲಪ್ಪಿದ್ದು ಈ ಸೋಲಿಗೆ ನಾನು ಅವರಿವರನ್ನು ದೂಷಿಸುವುದಿಲ್ಲ. ಎಲ್ಲವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವೆ ಎಂದರು.
ಯಾರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತು, ಈ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ, ಪಕ್ಷ ದ್ರೋಹಿಗಳು ನಮಗೆ ಬೇಕಿಲ್ಲ. ಅವರು ಹೊರಗೆ ಹೋಗಬೇಕು ಎಂದ ಅವರು ಪ್ರಮಾಣಿಕರು ಯಾರು, ಪಕ್ಷದ್ರೋಹಿಗಳು ಯಾರು ಎಂಬುದು ನನಗೆ ಗೊತ್ತಿದೆ. ನಮ್ಮ ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಎದೆಗುಂದ ಬೇಕಿಲ್ಲ ನಿಮ್ಮ ರಕ್ಷಣೆ ನನ್ನ ಹೊಣೆ ಎಂದರು.
ಸೋಲಿಗೆ ಅಶ್ವತ್ಥ್ ಕಾರಣ: ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮವಹಿಸಿ ಗೆಲ್ಲಿಸಿದ್ದ ಅಶ್ವತ್ಥ್ ತಮ್ಮ ಶಾಸಕ ಸ್ಥಾನವನ್ನು ಮಾರಿಕೊಳ್ಳುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದರು. ಈ ಚುನಾವಣೆಯಲ್ಲಿ ಅವರು ಮತ್ತವರ ಸೋದರ ಕರಿಯಪ್ಪ ಏನೇನು ಮಾಡಿದರು ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಗೆಲ್ಲಿಸಿದ್ದೇ ತಪ್ಪೆ: ಕಳೆದ ನಗರ ಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದು ಜಿಲ್ಲೆಯಲ್ಲಿ ಜೆಡಿಎಸ್ ಗೌರವ ಕಾಪಾಡಿತ್ತು, ನಗರಸಭಾ ಚುನಾವಣೆಯ ಸಮಯದಲ್ಲಿ ಅನಿತಾ ಕುಮಾರಸ್ವಾಮಿ ಎಲ್ಲಾ ವಾರ್ಡ್ ಗಳಲ್ಲಿ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಿದ್ದು ತಪ್ಪೆ, ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಹಣ ನೀಡಿದ್ದು ತಪ್ಪೆ ಎಂದು ಪ್ರಶ್ನಿಸಿದರು. ಈ ಕ್ಷೇತ್ರಕ್ಕೆ ನನ್ನ ಪತ್ನಿ ಖರ್ಚು ಮಾಡಿರುವ ಹಣವನ್ನು ಲೆಕ್ಕಹಾಕಿದರೆ ನಮ್ಮ ಪಕ್ಷ 20 ಕ್ಷೇತ್ರದಲ್ಲಿ ಗೆಲವು ಸಾಧಿಸುತ್ತಿತ್ತು.  ಗ್ರಾಮೀಣ ಪ್ರದೇಶದ ಜನತೆ ಇನ್ನು ಸ್ವಲ್ಪ ಶ್ರಮವಹಿಸಿದ್ದರೆ ಗೆಲ್ಲಬಹುದಿತ್ತು ಎಂದರು.
ಮುಂದಿನ ತಿಂಗಳು ನಾನು ಮತ್ತು ನನ್ನ ಪತ್ನಿ ಖುದ್ದಾಗಿ ಪ್ರತಿ ಹಳ್ಳಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತೇವೆ. ವಾರದಲ್ಲಿ ಒಂದು ದಿನ ಇಲ್ಲೇ ಇದ್ದು ಅನಿತಾಕುಮಾರಸ್ವಾಮಿ ಜನತೆಯ ಸುಖ ದುಃಖಗಳಿಗೆ ಸ್ಪಂದಿಸುತ್ತಾರೆ ಎಂದು ತಿಳಿಸಿದರು.
ಹಣಕ್ಕಾಗಿ ಯೋಗಿ ಸಮಾವೇಶ: ಈ ಕ್ಷೇತ್ರ ಜನತೆಯಿಂದ ಆಯ್ಕೆಯಾದ ಬಳಿಕ ಒಂದು ದಿನವೂ ವಿಧಾನ ಸೌಧಕ್ಕೆ ಆಗಮಿಸದ ಯೋಗೇಶ್ವರ್ ಇದೀಗ ದಾರಿಯುದ್ದಕ್ಕೂ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಹಾಕಿಸಿಕೊಂಡು  ಸಮಾಜವಾದಿ ಪಕ್ಷದಿಂದ ಹಣ ವಸೂಲಿ ಮಾಡಲು ನಿಂತಿದ್ದಾರೆ. ಹಿಂದೆ ಬಿಜೆಪಿಯಲ್ಲೂ ಇವರು ಇದನ್ನೇ ಮಾಡಿದ್ದು ಅಲ್ಲಿನ ಮುಖಂಡರಿಗೆ ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದರು. ಇದೀಗ ಸಮಾಜವಾದಿ ಪಕ್ಷದ ಮುಖಂಡರ ಮುಂದೆ ಕೈಚಾಚಿದ್ದಾರೆ. ನಾನಾಗಲಿ ನಮ್ಮ ಕುಟುಂಬವಾಗಲಿ ಎಂದೂ ಈ ರೀತಿಯ ಕೀಳು ರಾಜಕಾರಣ ಮಾಡಿಲ್ಲ ಎಂದರು.
ಸೋಲು ಪಾಠಕಲಿಸಿದೆ: ಸಭೆಯಲ್ಲಿ ಮಾತನಾಡಿದ ಅನಿತಾಕುಮಾರಸ್ವಾಮಿ ಈ ಬಾರಿಯ ಚುನಾವಣೆಯ ಸೋಲು ನನಗೆ ರಾಜಕೀಯವಾಗಿ ಪಾಠ ಕಲಿಸಿದ್ದು ನಾನು ಎಲ್ಲರನ್ನು ನಂಬುತ್ತಿದ್ದೆ. ಇದೀಗ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಅರಿವಾಗಿದೆ ಎಂದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮುಖಂಡ ದುಂತೂರು ವಿಶ್ವನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಉಪಸ್ಥಿತರಿದ್ದ ರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.