'ಎಚ್ಡಿಕೆ ಮೀಸಲಿಟ್ಟ ಎತ್ತಿನಹೊಳೆ ಯೋಜನೆ 5000 ಕೋಟಿ ಎಲ್ಲಿ'
ಮಾಲೂರು: ಎರಡು ರಾಷ್ಟ್ರೀಯ ಪಕ್ಷಗಳು ತೊಲಗುವ ತನಕ ದೇಶದಲ್ಲಿ ಪ್ರಾದೇಶಿಕ ಸಮತೋಲನ ಸಾಧಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಮಂತ್ರಿ ಎಚ್.ಡಿ.ರೇವಣ್ಣ ಹೇಳಿದರು.
ಅವರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಶ್ರಯದಲ್ಲಿ ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಬಿರ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ರೈತರಿಗೆ ಮಾರಕವಾಗುವ ಕಾವೇರಿ ಐ ತೀರ್ಪನ್ನು ಒಪ್ಪಿಕೊಳ್ಳದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ನಾವೆಲ್ಲರು ಒಕ್ಕೊರಲಿನಿಂದ ಅಧಿವೇಶನದಲ್ಲಿ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವುದರೊಂದಿಗೆ ವಿಧಾನಸಭೆಯಲ್ಲೂ ಅಂಗೀಕಾರಗೊಳ್ಳುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ.
ದೇವೇಗೌಡರು ಲೋಕಸಭೆಯಲ್ಲಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದರೆ, ಕೇಂದ್ರ ಹಾಗೂ ರಾಜ್ಯಗಳೆರಡಲ್ಲೂ ಇರುವ ಕಾಂಗ್ರೆಸ್, ರಾಜ್ಯ ರೈತರ ಹಿತ ಮರೆತು ಕೇಂದ್ರ ಸರ್ಕಾರದ ಉಳಿವಿಗಾಗಿ ಐ ತೀರ್ಪನ್ನು ಒಪ್ಪಿಕೊಳ್ಳುವಂತಹ ಕಾರ್ಯ ಮಾಡಿದೆ ಎಂದು ಟೀಕಿಸಿದರು.
ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎತ್ತಿನ ಹೊಳೆಗಾಗಿ ತೆಗೆದಿಟ್ಟಿದ 5 ಸಾವಿರ ಕೋಟಿ ಏನಾಯಿತು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಬೇಕು. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆಗಾಗಿ 8 ಸಾವಿರ ಕೋಟಿ ಎತ್ತಿಡಲಾಗಿದೆ ಎಂಬ ಹೇಳಿಕೆ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ. ಆದರೆ ಅದು ಲೋಕಸಭೆ ಚುನಾವಣೆ ತನಕ ಇದ್ದು ನಂತರ ಮಾಯವಾಗಲಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಶ್ರೀನಿವಾಸ ಗೌಡ ಮಾತನಾಡಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಬದುಕಲು ಅವಕಾಶ ನೀಡುವಂತಹ ಹೈನುಗಾರಿಕೆಯನ್ನು ಸರ್ಕಾರ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಬೇಕಾಗಿದೆ. ಹಣಗಳಿಕೆಯ ಕಾರಣಕ್ಕಾಗಿ ಕಲಬೆರೆಕೆ ಹಾಲು ಮಾರಾಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಹಕಾರಿ ಸಂಘಗಳ ಕಾರ್ಯದರ್ಶಿಗಳ ಮೇಲೆ ಇದೆ ಎಂದರು.
ಇಂದಿನ ರಾಜಕೀಯ ಕಲುಷಿತಗೊಂಡಿದ್ದು, ನನ್ನಂತಹ ಹಿರಿಯ ರಾಜಕಾರಣಿಗಳು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗುತ್ತಿದೆ ಎಂದರು.
ಸ್ಥಳೀಯ ಶಾಸಕ ಮಂಜುನಾಥ್ ಗೌಡ, ಒಕ್ಕೂಟದ ನಿರ್ದೇಶಕ ಡಾ.ಪ್ರಸನ್ನ ಮಾತನಾಡಿದರು. ಜಿಪಂ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಯಶೋಧ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಚಂದ್ರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ, ಕೃಷ್ಣಾ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ನಂಜೇಗೌಡ, ಹನುಮಂತಪ್ಪ, ಪಾಪಣ್ಣ, ಪುರಸಭೆ ಸದಸ್ಯ ಜಾಕೀರ್ ಖಾನ್, ಮಂಜುನಾಥ್ ಗೌಡ, ಎಪಿಎಂಸಿ ಅಧ್ಯಕ್ಷ ಮಹೇಶ್ ಬಾಬು ಸೇಸರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

