ಪೌರ ಸಂಸ್ಥೆಗಳ ಮೀಸಲು ನಿಗದಿ ಪ್ರಕ್ರಿಯೆಗೆ ಚಾಲನೆ
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಜೂ.15
ಪೌರ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿರುವ ಬೆನ್ನಲ್ಲೇ ಸ್ಥಾನಾಕಾಂಕ್ಷಿಗಳು ಲಾಬಿಗೆ ಇಳಿದಿದ್ದಾರೆ. ಕನಕಪುರ ಹೊರತುಪಡಿಸಿ ಜಿಲ್ಲೆಯ 3 ಪೌರ ಸಂಸ್ಥೆಗಳಲ್ಲಿ ಹಗ್ಗ ಜಗ್ಗಾಟ ಪ್ರಾರಂಭಗೊಂಡಿದೆ.
ಕನಕಪುರದಲ್ಲಿ ಪೌರ ಸಂಸ್ಥೆಗಳ ಫಲಿತಾಂಶವೇ ವಿಧಾನಸಭೆ ಚುನಾವಣೆಯಲ್ಲೂ ಪುನರಾವರ್ತನೆ ಆಗಿದೆ. ಆದರೆ, ಉಳಿದ 3 ಕಡೆ ವ್ಯತಿರಿಕ್ತ ಫಲಿತಾಂಶ ಹೊರ ಬಿದ್ದಿದೆ. ಶಾಸಕರು ತಮ್ಮದೇ ಪಕ್ಷದ ಆಡಳಿತವನ್ನು ಪ್ರತಿಷ್ಠಾಪಿಸಲು ತೆರೆಮರೆಯ ಕಸರತ್ತಿಗೆ ಇಳಿದಿದ್ದಾರೆ.
ಈ ಮಧ್ಯೆ, ಕೆಲ ಸದಸ್ಯರು ತಮಗೆ ಅನುಕೂಲ ಆಗುವ ರೀತಿಯಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಮೀಸಲು ಮಾಡಿಸಿಕೊಳ್ಳಲು ಲಾಬಿಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮುಖಂಡರು ಮೀಸಲು ನಿಗದಿಯಲ್ಲಿ ಕೈಯಾಡಿಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.
ಸಚಿವ ಸ್ಥಾನ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಜಿಲ್ಲೆಯ ಕಾಂಗ್ರೆಸ್ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ಯಾವ ಶಿಫಾರಸಿಗೂ ಮುಂದಾಗಿಲ್ಲ. ಇದು, ಸಹಜವಾಗಿಯೇ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಸ್ಥಾನಾಕಾಂಕ್ಷಿಗಳಿಗೆ ಹಿನ್ನಡೆ ಉಂಟು ಮಾಡಿದೆ.
ಸಂಸದ ಸ್ಥಾನ ಖಾಲಿ: ಲೋಕಸಭಾ ಸದಸ್ಯರು ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಪೌರ ಸಂಸ್ಥೆಗಳಲ್ಲಿ ಮತದಾನದ ಹಕ್ಕು ಹೊಂದಿರುತ್ತಾರೆ. ವಿಧಾನಸಭೆ ಚುನಾವಣೆಗೂ ಮುನ್ನವೇ ಪೌರ ಸಂಸ್ಥೆಗಳ ವರಿಷ್ಠರ ಚುನಾವಣೆ ನಡೆದಿದ್ದರೆ ಜಿಲ್ಲೆಯ ಎಲ್ಲ 4 ಸಂಸ್ಥೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ 1 ಮತ ಹೆಚ್ಚುವರಿಯಾಗಿ ಸಿಗುತ್ತಿತ್ತು.
ಆದರೆ, ಲೋಕಸಭಾ ಸದಸ್ಯರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ರಾಮನಗರದಿಂದ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಈಗಾಗಲೇ ಅವರು ಲೋಕಸಭೆ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಲೋಕಸಭೆ ಸದಸ್ಯರ ಮತ ಇಲ್ಲ. ಇದರಿಂದ ರಾಮನಗರದಲ್ಲಿ ಜೆಡಿಎಸ್ ಪಕ್ಷಕ್ಕೆ 1 ಮತ ಕಡಿಮೆಯಾಗಿದೆ.
ಕನಕಪುರ ಸುಭದ್ರ: 27 ಸದಸ್ಯ ಬಲದ ಕನಕಪುರ ಪುರಸಭೆಯಲ್ಲಿ 22 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಕಾಂಗ್ರೆಸ್ ಸುಭದ್ರವಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಯಾವುದೇ ಮೀಸಲು ನಿಗದಿಯಾದರೂ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳು ಇದ್ದಾರೆ.
ಕೇವಲ 4 ಸದಸ್ಯರನ್ನು ಹೊಂದಿರುವ ಜೆಡಿಎಸ್ ಆಡಳಿತ ರಚಿಸುವುದು ಅಸಂಭವ. ಇಲ್ಲಿ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸಿಗರೇ ಆದ ಡಿ.ಕೆ.ಶಿವಕುಮಾರ್ ಶಾಸಕರಾಗಿ ಪುನರಾಯ್ಕೆ ಆಗಿರುವುದರಿಂದ ಪಕ್ಷದ ಹಾದಿ ಸುಗಮವಾಗಿದೆ.
ರಾಮನಗರ ಅತಂತ್ರ: 31 ಸದಸ್ಯರ ಬಲದ ಈ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ 16 ಸದಸ್ಯರು ಚುನಾಯಿತರಾಗಿದ್ದರೂ ಅಧಿಕಾರ ಗಿಟ್ಟಿಸಲು ಇನ್ನೂ ಒಬ್ಬರು ಸದಸ್ಯರನ್ನು ಸೆಳೆಯಬೇಕಿದೆ. ಕಾಂಗ್ರೆಸ್ ಬೆಂಬಲದಿಂದ ಗೆಲವು ಸಾಧಿಸಿದ್ದ ಏಕೈಕ ಪಕ್ಷೇತರ ರಫೀಕ್ ಮಹಮದ್ ಈಗಾಗಲೇ ಜೆಡಿಎಸ್ ಪಾಳಯಕ್ಕೆ ಜಿಗಿದಿದ್ದಾರೆ.
ಜೆಡಿಎಸ್ ಪಕ್ಷದಿಂದ 12 ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷೇತರ ರಫೀಕ್ ಮಹಮದ್, ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಅಪ್ಸರ್ ಆಗಾ ಅವರ ಮತಗಳು ಸೇರಿದಂತೆ ಈ ಪಕ್ಷದ ಬಲ 15ಕ್ಕೆ ಏರುತ್ತದೆ. ಈ ಪಕ್ಷಕ್ಕೆ ಅಧಿಕಾರ ಹಿಡಿಯಲು ಇನ್ನಿಬ್ಬರು ಸದಸ್ಯರು ಬೇಕು.
ಕಳೆದ ಬಾರಿ ಇಡೀ ಜಿಲ್ಲೆಯಲ್ಲಿ 1 ಸ್ಥಾನಗಳಿಸಿದ್ದ ಬಿಜೆಪಿ ಈ ಬಾರಿ 2 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಇಬ್ಬರೂ ಸದಸ್ಯರು ರಾಮನಗರ ನಗರಸಭೆಗೆ ಆಯ್ಕೆಯಾದವರು. ಅವರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೋ ಆ ಪಕ್ಷಕ್ಕೆ ಅಧಿಕಾರ ಚುಕ್ಕಾಣಿ ಸಿಗಲಿದೆ.
ಚನ್ನಪಟ್ಟಣ ಫೈಟ್: ಈ ನಗರಸಭೆಯ ಒಟ್ಟು ಸದಸ್ಯ ಬಲ 31. ಈ ಪೈಕಿ ಜೆಡಿಎಸ್ 16ರಲ್ಲಿ ಗೆದ್ದಿದ್ದು, ಒಬ್ಬ ಪಕ್ಷೇತರ ಕೂಡ ಬೆಂಬಲಕ್ಕಿದ್ದಾರೆ. ಇದರೊಂದಿಗೆ ಪಕ್ಷದ ಬಲ 17ಕ್ಕೇರಲಿದೆ. ಕಾಂಗ್ರೆಸ್ ಚಿಹ್ನೆಯಡಿ ಗೆದ್ದಿರುವ 13 ಸದಸ್ಯರು ಏನು ಮಾಡುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.
ನಗರಸಭೆ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರಿ, ಆ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಹೋರಾಟ ನಡೆಸಿದ್ದರು. ಗೆದ್ದ 13 ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಯೋಗೇಶ್ವರ್ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಪುರಪಿತೃಗಳ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಒಟ್ಟಾರೆ, ಚನ್ನಪಟ್ಟಣ ನಗರಸಭೆಯಲ್ಲಿ ಜೆಡಿಎಸ್ ಮತ್ತು ಯೋಗೇಶ್ವರ್ ಬಣದ ನಡುವೆಯೇ ಹೋರಾಟ. ಯೋಗೇಶ್ವರ್ ಅವರ ಮತ ಸೇರಿದರೆ ಬಣದ ಸಂಖ್ಯೆ 14ಕ್ಕೇರುತ್ತದೆ. ಬಿಎಸ್ಸಾರ್ ಸದಸ್ಯನ ನಡೆ ನಿಗೂಢ. ಹಿಂದಿನ ಅನುಭವದ ಮಾತುಗಳಿಂದ ಹೇಳುವುದಾದರೆ, ಜೆಡಿಎಸ್ ಸದಸ್ಯರ ಖರೀದಿ ಯತ್ನ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಾಗಡಿ ಹಣಾಹಣಿ: 23 ಸದಸ್ಯ ಬಲದ ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಅಧಿಪತ್ಯ ಸ್ಥಾಪನೆ ಕಬ್ಬಿಣದ ಕಡಲೆಯೇ ಸರಿ. ಇಲ್ಲಿ ಕಾಂಗ್ರೆಸ್ 14 ಮತ್ತು ಜೆಡಿಎಸ್ 8 ಸ್ಥಾನ ಹೊಂದಿದೆ. ಏಕೈಕ ಪಕ್ಷೇತರ ಕೂಡ ಕಾಂಗ್ರೆಸ್ ಕಡೆ ವಾಲಿದ್ದಾರೆ. ಇದರೊಂದಿಗೆ ಆ ಪಕ್ಷದ ಬಲ 15ಕ್ಕೇರಲಿದೆ.
ಹ್ಯಾಟ್ರಿಕ್ ಶಾಸಕ ಎಚ್.ಸಿ.ಬಾಲಕೃಷ್ಣ ಸಹಿತ ಜೆಡಿಎಸ್ ಬಲ 9 ಕ್ಕೇರಲಿದೆ. ಶಾಸಕರು ತಮ್ಮದೇ ಪಕ್ಷದ ಆಡಳಿತ ಸ್ಥಾಪಿಸಬೇಕೆಂದರೆ ಕನಿಷ್ಠ 4 ಕಾಂಗ್ರೆಸ್ ಸದಸ್ಯರನ್ನು ಆಪರೇಷನ್ ಖೆಡ್ಡಕ್ಕೆ ಕೆಡವಬೇಕಿದೆ. ಆಪರೇಷನ್ ಜೆಡಿಎಸ್ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆಯಾದರೂ ಅಂತಹ ಪ್ರಯತ್ನವನ್ನು ಬಾಲಕೃಷ್ಣ ನಿರಾಕರಿಸಿದ್ದಾರೆ.
ಈ ಹಿಂದೆ ತಮ್ಮದೇ ಪಕ್ಷದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ಬೆಂಬಲಿತ ಗುತ್ತಿಗೆದಾರರು ಗುಡಿಸಿ ಗಂಡಾಂತರ ಮಾಡಿದ್ದರಿಂದ ಬಾಲಕೃಷ್ಣ ಭ್ರಷ್ಟಾಚಾರಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಯಿತು. ಹೀಗಾಗಿ ಅವರು ಮತ್ತೊಂದು ತಪ್ಪು ಹೆಜ್ಜೆ ಇಡಲಾರರು ಎಂದು ಹೇಳಲಾಗುತ್ತಿದೆ. ಇದು, ಕಾಂಗ್ರೆಸ್ಸಿಗರನ್ನು ನಿರಾಳವಾಗುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

