ಶಾಸಕರಿಂದ ರಸ್ತೆ ಕಾಮಗಾರಿ ವೀಕ್ಷಣೆ; ಅಧಿಕಾರಿಗಳಿಗೆ ತರಾಟೆ
ಕ.ಪ್ರ. ವಾರ್ತೆ ಸೂಲಿಬೆಲೆ ಜೂ.21
ಸಮೀಪದ ಗಿಡ್ಡಪ್ಪನಹಳ್ಳಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಹೊಸಕೋಟೆ ಕ್ಷೇತ್ರದ ಶಾಸಕ ಎನ್.ನಾಗರಾಜ್, ಈ ಹಿಂದಿನ ಸರ್ಕಾರದಲ್ಲಿ ನಿರ್ವಹಿಸಿರುವ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಕಳಪೆಯಾಗಿರುವುದನ್ನು ಕಂಡು ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದವರು ಜಿಪಂನಿಂದ ಸುಮಾರು 31 ಲಕ್ಷ ವೆಚ್ಚದಲ್ಲಿ ಗ್ರಾಮದ ನಾನಾ ಕಡೆ ಕಾಂಕ್ರಿಟ್ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೇ ಲೆಕ್ಕದಲ್ಲಿ ಇರುವ ಕೆಲಸ ಆಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕರು ಜನರ ಎದುರೆ ರಸ್ತೆಗಳನ್ನು ಅಗೆಸಿ ಪರಿಶೀಲನೆ ಮಾಡಿದರು. ಕಳಪೆ ಮಾಡಿರುವುದನ್ನು ಅರಿತು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.
ಒಟ್ಟು 31 ಕಡೆ ರಸ್ತೆಗಳನ್ನು ಮಾಡಿರುವ ಲೆಕ್ಕವಿದ್ದು, ವಾಸ್ತವದಲ್ಲಿ ಅಷ್ಟು ರಸ್ತೆಗಳಾಗಿಲ್ಲ. ಡಾಂಬರೀಕರಣದ ಗುಣಮಟ್ಟ ಸರಿಯಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪ್ರಸಾದ್ ಆರೋಪಿಸಿದರು.
ಮಾಡಿಸುವ ಭರವಸೆ: ಯಾವ ಕಡೆ ಕಡಿಮೆ ಅಳತೆಯಲ್ಲಿ ಕಾಮಗಾರಿ ಹಾಗೂ ಕಳಪೆಯಾಗಿದೆಯೋ ಅಂಥ ಕಡೆ ಮತ್ತೇ ಅಧಿಕಾರಿಗಳಿಂದ ಪರಿಶೀಲನೆ ಮಾಡಿ ಸಂಬಂಧಿತ ಗುತ್ತಿಗೆದಾರರಿಂದ ಕೆಸ ಮಾಡಿಸುವ ಭರವಸೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದರು.
ಮಾತಿನ ಚಕಮಕಿ: ಇದಕ್ಕೂ ಮುನ್ನ ಕಾಂಕ್ರಿಟ್ ರಸ್ತೆಯನ್ನು ಅಗೆದು ಪರಿಶೀಲನೆ ಮಾಡುವ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಳತೆ ವಿಷಯದಲ್ಲಿ ಶಾಸಕರ ಮುಂದೆಯೇ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ತಳ್ಳಾಟ ನಡೆಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು ಎಲ್ಲರನ್ನು ಸಮಧಾನಪಡಿಸಿದರು.
ದೂರು: ಕಾಮಗಾರಿಗಳ ಪರಿಶೀಲನೆ ನಂತರ ಗ್ರಾಪಂಗೆ ಭೇಟಿ ನೀಡಿದ ಶಾಸಕರಿಗೆ ಗ್ರಾಪಂದ ಬಗ್ಗೆ ದೂರುಗಳನ್ನು ಹೇಳಿದರು. ಯನಗುಂಟೆ, ಗಿಡ್ಡಪ್ಪನಹಳ್ಳಿ ಹಾಗೂ ಬೆಟ್ಟಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ ಎಂಬ ದೂರಿಗೆ ಸ್ಪಂದಿಸಿದ ಶಾಸಕರು, ನಂಜುಂಡಪ್ಪ ವರದಿಯಂತೆ ಹೊಸಕೋಟೆ ತಾಲೂಕು ಹಿಂದುಳಿದ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದು, ವಿಶೇಷ ಅನುದಾನವಾಗಿ ನೀಡುವ 33 ಲಕ್ಷ ಹಣವನ್ನು ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಬಳಿಸಿಕೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್, ಕಲ್ಲಪ್ಪ, ಮುನಿಶಾಮಣ್ಣ, ಸೀತೆಗೌಡ, ಗೋಪಾಲಪ್ಪ, ಎಇಇ ಕೃಷ್ಣಮೂರ್ತಿ,ಪರಮೇಶ್ವರ್, ಯರ್ರೇಗೌಡ ಸೇರಿದಂತೆ ಹಲವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

