ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರ ಬಂಧನ, ಬಿಡುಗಡೆ
ಕ.ಪ್ರ.ವಾರ್ತೆ ರಾಮನಗರ ಮಾ.10
ಬಿಡದಿ ಧ್ಯಾನಪೀಠಾಶ್ರಮದಲ್ಲಿ ವಿವಾದಿತ ಸ್ವಾಮಿ ನಿತ್ಯಾನಂದ ನೇತೃತ್ವದಲ್ಲಿ ನಡೆಯುತ್ತಿದ್ದ ಕುಂಡಲಿನಿ ಧ್ಯಾನ ವಿರೋಧಿಸಿ ಪ್ರತಿಭಟಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ 45ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ಗೌಡ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದ ಪೊಲೀಸರು ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಗೊಡಳಿಸಿದರು.
ಧ್ಯಾನಪೀಠ ಆಶ್ರಮದ ಮುಖ್ಯದ್ವಾರದ ಬಳಿ ಜಮಾಯಿಸಿದ ಕಾರ್ಯಕರ್ತರು ನಿತ್ಯಾನಂದ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ನಿತ್ಯಾನಂದನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಅನೇಕರನ್ನು ಪ್ರತಿಭಟನಾಕಾರರು ತಡೆದು, ವಾಪಸ್ ಕಳುಹಿಸಿದರು.
ಶಿವನಿಗೆ ಅಪಮಾನ: ನಿತ್ಯಾನಂದ ಧ್ಯಾನ, ಧರ್ಮದ ಹೆಸರಿನಲ್ಲಿ ಅಮಾಯಕರಿಗೆ ಮಂಕುಬೂದಿ ಎರಚಿ ಅನ್ಯಾಯ ಎಸಗುತ್ತಿದ್ದಾನೆ. ಭಕ್ತರ ಭಾವನೆಗಳಿಗೆ ಕುಂದುಂಟು ಮಾಡುತ್ತಿದ್ದಾನೆ. ಸತ್ಸಂಗ, ಹೀಲಿಂಗ್, ಕುಂಡಲಿನಿ ಯಾಗ ಸೇರಿದಂತೆ ಭಕ್ತರನ್ನು ವಶೀಕರಣ ಮಾಡಿಕೊಂಡು, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಇಂತಹ ಕಪಟಿ ಸನ್ಯಾಸಿ ಶಿವನನ್ನು ಪೂಜಿಸುವುದು ಶಿವನಿಗೆ ಅಪಮಾನ ಮಾಡಿದಂತೆ ಎಂದು ಕಿಡಿ ಕಾರಿದರು.
ಧ್ಯಾನಪೀಠದಲ್ಲಿ ಶಿವರಾತ್ರಿ ಆಚರಿಸಲಾಗುವುದು ಎಂದು ಹಾಕಿರುವ ಭಿತ್ತಿಪತ್ರಗಳಲ್ಲಿ ಶಿವನಿಗಿಂತ ತನ್ನ ಚಿತ್ರವನ್ನೇ ದೊಡ್ಡದಾಗಿ ಕಾಣುವಂತೆ ಹಾಕಿಕೊಂಡಿದ್ದಾನೆ. ತಾನೇ ಶಿವ ಎಂದು ಹೇಳಿಕೊಳ್ಳುವ ನಿತ್ಯಾನಂದ ಶಿವನ ಪೂಜೆ ಮಾಡುವುದಾದರೂ ಏತಕ್ಕೆ ಎಂದು ಪ್ರಶ್ನಿಸಿದರು.
ತಮಿಳುಮಯ ಮಾಡಲು ಸಂಚು: ಮಧುರೈ ಆಧೀನಂನಿಂದ ಹೊರದೂಡಲ್ಪಟ್ಟ ನಿತ್ಯಾನಂದ ತಮಿಳುನಾಡಿನಿಂದ ಬಾಡಿಗೆ ಭಕ್ತರನ್ನು ಕರೆತಂದು ಶಿವರಾತ್ರಿ ಆಚರಣೆ ಮಾಡುತ್ತಿದ್ದಾನೆ. ಆ ಮೂಲಕ ತನ್ನ ಭಕ್ತರ ಸಂಖ್ಯಾಬಲ ಪ್ರದರ್ಶಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ. ಶಿವ ಪೂಜೆ ನೆಪದಲ್ಲಿ ಜನಬೆಂಬಲ ಗಳಿಸಲು ಹೊರಟಿದ್ದಾನೆ. ಕನ್ನಡದ ನೆಲವನ್ನು ತಮಿಳುಮಯ ಮಾಡಲು ಸಂಚು ರೂಪಿಸಿದ್ದಾನೆ ಎಂದು ದೂರಿದರು.
ಭಕ್ತರನ್ನು ವಶೀಕರಣ ಮಾಡಿಕೊಂಡು ದಾನದ ಹೆಸರಿನಲ್ಲಿ ಅವರ ಆಸ್ತಿಯನ್ನು ಕಬಳಿಸಿರುವ ಅನೇಕ ಉದಾಹರಣೆಗಳಿವೆ. ಈ ಸಂಬಂಧ ಅಮೆರಿಕಾ ಕೋರ್ಟ್ನಲ್ಲಿ ಮೊಕದ್ದಮೆ ದಾಖಲಾಗಿದೆ. ಧ್ಯಾನ ಪೀಠ ಆಶ್ರಮವು ಒಂದು ಹೈಟೆಕ್ ಲಾಡ್ಜ್ ಆಗಿದೆಯೇ ಹೊರತು ಧ್ಯಾನ ಕೇಂದ್ರವಲ್ಲ. ಒಂದು ವರ್ಷ ಕಾಲ ಆಶ್ರಮದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ ಕೂಡ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂತಹ ಲಂಪಟಿ ಸ್ವಾಮಿಗೆ ಪೊಲೀಸರೇ ರಕ್ಷಣೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಮುರಿದು ಬಿದ್ದ ಸಂದಾನ : ಪ್ರತಿಭಟನಾನಿರತರನ್ನು ಆರ್ಎಸ್ಎಸ್ ಮೂಲದ ಮಾತೃಭೂಮಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಭಟ್ ಸಂತೈಸಲು ಮುಂದಾದರು. ಹಿಂದೂಗಳಿಗೆ ಶಿವರಾತ್ರಿ ಪವಿತ್ರ ದಿನವಾಗಿದೆ. ಹೀಗಾಗಿ ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಭಕ್ತರನ್ನು ಆಶ್ರಮ ಪ್ರವೇಶಿಸದಂತೆ ತಡೆಯಬಾರದು, ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಆದರೆ ಇವರ ಮನವಿಗೆ ಪ್ರತಿಭಟನಾನಿರತರು ಸೊಪ್ಪು ಹಾಕಲಿಲ್ಲ. ಆಶ್ರಮದಲ್ಲೇ ಕುಳಿತು ಕುತಂತ್ರಗಳನ್ನು ಮಾಡಿ ನೂರಾರು ವರ್ಷ ಇತಿಹಾಸವಿರುವ ಮಠಗಳನ್ನು ಕಬಳಿಸಲು ಸಂಚು ರೂಪಿಸುತ್ತಿದ್ದಾನೆ. ಆಯಾ ಮಠಗಳಿಗೆ ಸಂಬಂಧಪಟ್ಟ ಜಾತಿಗೆ ಸೇರಿದವನು ಎಂದು ಹೇಳಿಕೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ಇಂತಹ ಕಪಟಿ ಶಿವ ಪೂಜೆ ಮಾಡಬಾರದು ಎಂದು ರಮೇಶ್ ಗೌಡ ವಿರೋಧ ವ್ಯಕ್ತಪಡಿಸಿದರು. ಮಂಜುನಾಥ್ ಭಟ್ ಬರಿಗೈಲಿ ವಾಪಸಾದರು.
ಬಂಧನ: ನಂತರ ಪ್ರತಿಭನಟನಾಕಾರರು ಆಶ್ರಮಕ್ಕೆ ನುಗ್ಗಲು ಯತ್ನಿಸಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ವಾಹನದೊಳಕ್ಕೆ ಎತ್ತಿಹಾಕಲು ಪೊಲೀಸರು ಹರ ಸಾಹಸಪಡಬೇಕಾಯಿತು.
ಪ್ರತಿಭಟನೆಯಲ್ಲಿ ಮಂಗಳಮ್ಮ, ಲಕ್ಷ್ಮಮ್ಮ, ನಾಗರತ್ನ, ನಾಗಲಕ್ಷ್ಮಿ, ರೂಪಾ, ಗೀತಾ ರವೀಂದ್ರ, ಯೋಗೇಶ್ ಗೌಡ, ವೀರೇಶ್ ಗೌಡ, ರಂಜಿತ್ಗೌಡ, ಮಲ್ಲೇಶ್ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

