ಬೆಂಗಳೂರು ಗ್ರಾಮಾಂತರ

ಮಹಿಳೆಯರು ಎಲ್ಲಾ ರಂಗದಲ್ಲೂ ಅಭಿವೃದ್ಧಿ ಹೊಂದಲಿ: ಮಹಾಲಿಂಗಪ್ಪ

Published On :

ಕ.ಪ. ವಾರ್ತೆ ತುಮಕೂರು ಮಾ 14
ಮಹಿಳೆಯರು ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿ.ಪಂ. ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ ತಿಳಿಸಿದ್ದಾರೆ.
ನಗರದ ಹೊರಪೇಟೆ ಲೂರ್ದು ಮಾತಾ ದೇವಾಲಯದ ಆವರಣದಲ್ಲಿ ಬೆಂಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಮತ್ತು ಪುರುಷರು ಈ ಸಮಾಜದ ಎರಡು ಕಣ್ಣುಗಳಿದ್ದಂತೆ. ಸಂಸಾರ ಮತ್ತು ಸಮಾಜ ಸರಿದಾರಿಯಲ್ಲಿ ಹೋಗಬೇಕಾದರೆ ಇಬ್ಬರ ನಡುವೆ ಹೊಂದಾಣಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಪುರುಷರು ಮಹಿಳೆಯರ ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ ನೀಡಬೇಕೆಂದರು.
ಮಹಿಳೆಯರಿಗೂ ಪುರುಷರಿಗೆ ಸಮಾನವಾದ ಅವಕಾಶಗಳು ಲಭ್ಯವಾಗಬೇಕೆಂಬುದು ನಮ್ಮ ಹೆಣ್ಣು ಮಕ್ಕಳ ಬಹುದಿನದ ಬೇಡಿಕೆಯಾಗಿದೆ. ಹೆಂಡತಿಯಾಗಿ, ತಾಯಿಯಾಗಿ, ತಂಗಿಯಾಗಿ ಸಂಸಾರ ಮತ್ತು ಸಮಾಜದ ಬೆಳವಣಿಗೆಗೆ ಸಹಕಾರಿಯಾಗುವ ಹೆಣ್ಣು ಮಕ್ಕಳ ಬಗ್ಗೆ ಒಳ್ಳೆಯ ಭಾವನೆಯನ್ನು ಸಮಾಜ ಹೊಂದಬೇಕಾಗಿದೆ. ಸಣ್ಣ ಪುಟ್ಟ ಅವಮಾನಗಳನ್ನೇ ಸಹಿಸಲಾಗದೆ ಆತ್ಮಹತ್ಯೆ ದಾರಿ ತುಳಿಯುವಂತಹ ಮಹಿಳೆಯರಿಗೆ ಅವರಲ್ಲಿ ಇರುವ ಕೀಳರಿಮೆಯನ್ನು ತೊಡೆದುಹಾಕಿ ಅವರಲ್ಲಿ ಮತ್ತೆ ಜೀವನೋತ್ಸಾಹ ತುಂಬುವ ಕೆಲಸವನ್ನು ಸಾಂತ್ವನ ಕೇಂದ್ರಗಳು ಮತ್ತಷ್ಟು ಕ್ರಿಯಾಶೀಲವಾಗಿ ಮಾಡಬೇಕಾಗಿದೆ ಎಂದು ಪ್ರೇಮ ಮಹಾಲಿಂಗಪ್ಪ ನುಡಿದರು.
ಸರಕಾರದ ಸವಲತ್ತುಗಳ ಬಳಕೆಯಾಗಲಿ: ಅವಕಾಶಗಳು ದೊರೆತರೆ ತಾನು ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡಿ ತೋರಿಸಬಲ್ಲೇ ಎಂಬುದನ್ನು ಆಟೋ ಡ್ರೈವರ್‌ನಿಂದ ಪೈಲಟ್‌ವರೆಗೆ ವೃತ್ತಿಯಲ್ಲಿ ತೊಡಗಿ ತೊಟ್ಟಿಲು ತೂಗುವ ಕೈ ಜಗವ ಆಳಿತು ಎಂಬುದನ್ನು ಸಾಬೀತು ಪಡಿಸಿದ್ದಾಳೆ. ಆರ್ಥಿಕ ಸ್ವಾವಲಂಬನೆ ಮಹಿಳೆಯ ದೌರ್ಜನ್ಯ ರಹಿತ ಬದುಕಿಗೆ ಆಸರೆಯಾಗಿದ್ದು, ನಮ್ಮ ಹೆಣ್ಣು ಮಕ್ಕಳು ಸರಕಾರಿ ಕೆಲಸಗಳೇ ಬೇಕೆಂಬ ಧೋರಣೆಯಿಂದ ಹೊರಬಂದ ಸರಕಾರದ ಸವಲತ್ತುಗಳ ಬಳಕೆಯ ಮೂಲಕ ಸ್ವಯಂ ಉದ್ಯೋಗಿಗಳಾಗಿ ಬದುಕು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುಜಾತ ಮಾತನಾಡಿ, ಮಹಿಳೆಯರಿಗೆ ಶಿಕ್ಷಕ ದೊರೆತ ನಂತರ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿದೆ. ಹಾಗೆಯೇ ಸಮಾಜವು ಅವರ ಬಗ್ಗೆ ಇದ್ದ ತಾತ್ಸಾರ ಮನೋಭಾವನೆಯು ಇಳಿಮುಖವಾಗುತ್ತಿದೆ. ಸರಕಾರ ಮಹಿಳೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದು ಅರ್ಥಿಕವಾಗಿ ಸಬಲರಾಗಬೇಕು. ಈ ಬಗ್ಗೆ ತಿಳಿವಳಿಕೆ ಹೊಂದಿರುವಂತಹವರು ಕಿರಿಯರಿಗೆ ಮಾರ್ಗದರ್ಶನ ಮಾಡಿ ಅವರ ಬೆಳವಣಿಗೆಗೂ ಸಹಕಾರ ನೀಡಬೇಕೆಂದರು.
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕಿ ಡಾ. ಎಂ. ರಜನಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ನಾಗರಿಕ ಸಮಾಜದ ಒಂದು ದೊಡ್ಡ ಪಿಡುಗಾಗಿದ್ದು, ಮಹಿಳೆಯರ ಅಸ್ಥಿತ್ವಕ್ಕೆ ದೊಡ್ಡ ಸವಾಲಾಗಿ ನಿಂತಿದೆ. ಇದು ನಿಲ್ಲಬೇಕಾದರೆ ಪೋಷಕರು ಹೆಣ್ಣು ಮಕ್ಕಳ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವನೆಯನ್ನು ಕೈಬಿಡಬೇಕು. ಗಂಡು ಮಗು ಮಾತ್ರ ನಮ್ಮನ್ನು ಸಾಕುತ್ತಾನೆ ಎಂಬ ಭ್ರಮೆಯಿಂದ ಹೊರಬಂದು ಗಂಡು ಹೆಣ್ಣು ಒಂದೇ ಎಂಬಂತೆ ನೋಡಬೇಕು. ಅತಿ ಕಡಿಮೆ ವಯಸ್ಸಿನ ಮದುವೆ, ಹೆರಿಗೆ ಬಗ್ಗೆ ಜಾಗೃತಿ ಮೂಡಿಸಿ ಅಕಾಲಿಕ ಮರಣ ಹೊಂದುವುದನ್ನು ತಡೆಗಟ್ಟಬೇಕು ಎಂದರು.
ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಜೆಸಿಂತ್ ಡಿಸೋಜ, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್. ಕೃಷ್ಣಪ್ಪ, ನಗರಸಭಾ ಸದಸ್ಯ ಟಿ.ಎಚ್. ಬಾಲಕೃಷ್ಣ, ಕಾಂಗ್ರೆಸ್ ಮುಖಂಡ ಡಾ.ರಫೀಕ್ ಅಹಮದ್ ಉಪಸ್ಥಿತರಿದ್ದರು.
ಸಂತ ಲೂರ್ದು ಮಾತೆ ದೇವಾಲಯದ ಫಾದರ್ ಬರ್ತ ಲೋಮಿಯೋ,ರೆಕ್ಟರ್ ಡಾನ್ ಬಾಸ್ಕೋದ ಫಾದರ್ ಉದಯಕುಮಾರ್, ತಿಪಟೂರಿನ ಪವಿತ್ರ ಹೃದಯ ದೇವಾಲಯದ ಫಾದರ್ ಬೇನಿಡಿಕ್ಟ್ ಸಾನ್ನಿಧ್ಯ ವಹಿಸಿದ್ದರು. ಪುಷ್ಪಲತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.