ಬೆಂಗಳೂರು ಗ್ರಾಮಾಂತರ

ಸಮಾನತೆಯಿಂದಷ್ಟೇ ಅಭಿವೃದ್ಧಿ: ಮುದ್ದು ಮೋಹನ್

Published On :

ಬೆಂಗಳೂರು: ಸಮಾನತೆ ತತ್ವದ ಮೇಲೆ ನಂಬಿಕೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಮುದ್ದು ಮೋಹನ್ ತಿಳಿಸಿದ್ದಾರೆ.
ಆದರ್ಶ ಸಮೂಹ ಸಂಸ್ಥೆ, ಆದರ್ಶ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸುಸ್ಥಿರ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಮಹಿಳೆಯರ ಸಾಧನೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಾಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ.
ಸರ್ಕಾರ ವೃದ್ಧ ದೇವದಾಸಿ ಮಹಿಳೆಯರಿಗೆ ಪಿಂಚಣಿ, ಗರ್ಭಿಣಿಯರ ಆರೋಗ್ಯ ಕುರಿತು ಕಾಳಜಿಯಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಯೋಜನವನ್ನು ಮಹಿಳೆಯರು ಪಡೆಯುವಂತಾಗಬೇಕು ಎಂದು ತಿಳಿಸಿದರು.
ಮಹಿಳೆಯರ ಸಾಧನೆ ಕುರಿತು ವಿವರಿಸಿದ ಅವರು, ಗಂಗೂಬಾಯಿ ಹಾನಗಲ್ ಅವರಂತಹ ಮಹಿಳೆಯರು ತಮ್ಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಅವರ ಉದಾತ್ತ ಗುಣಗಳು ಇತರರಿಗೆ ಮಾದರಿಯಾಗಬೇಕು. ನಮ್ಮ ಸಂಸ್ಕೃತಿ ಅತ್ಯಂತ ಪುರಾತನ ಮತ್ತು ಅರ್ಥಪೂರ್ಣವಾಗಿದ್ದು, ಇಲ್ಲಿನ ಮಹಿಳೆಯರು ಅತ್ಯಂತ ಪ್ರತಿಭಾವಂತರು. ಇವರನ್ನು ಆರ್ಥಿಕವಾಗಿ ಸಬಲರಾಗಿಸಿದರೆ ಅಭಿವೃದ್ಧಿ ತ್ವರಿತವಾಗುತ್ತದೆ. ಇದು ತಮ್ಮ ಅನುಭವಕ್ಕೂ ಬಂದಿದೆ ಎಂದು ಹೇಳಿದರು.
ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್‌ನ ಡಾ.ಎಂ.ವಿ.ರಾಜೀವ್‌ಗೌಡ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ಅವರು ಆರ್ಥಿಕವಾಗಿ ಸಬಲರಾಗುವ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಹೆಚ್ಚುತ್ತಿವೆಯಾದರೂ ಇದರೊಂದಿಗೆ ಉತ್ತಮ ಬೆಳವಣಿಗೆಗಳೂ ಆಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕ ಡಾ.ಧ್ಯಾನ್ ಕುಮಾರ್, ಆದರ್ಶ ಗ್ರೂಪ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ವಿ.ಪ್ರೇಮರಾಜ್ ಜೈನ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸರಸ್ವತಿ ಕುಂಬ್ಳೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.