ಪ್ರೌಢಶಾಲಾ ಹಂತದಿಂದ ಆಂಗ್ಲ ಭಾಷೆ ಕಲಿಸಿ: ನಾಡೋಜ ದೇ. ಜವರೇಗೌಡ
ಕ.ಪ್ರ.ವಾರ್ತೆ, ಚನ್ನಪಟ್ಟಣ. ಮಾ.18
ಆಂಗ್ಲಭಾಷೆಯನ್ನು ಪ್ರಾಥಮಿಕ ಹಂತದಿಂದಲೇ ಕಲಿಸದೆ ಪ್ರೌಢಶಾಲಾಹಂತದಿಂದ ಕಲಿಸಬೇಕೆಂದು ನಾಡೋಜ ದೇ.ಜವರೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಕೊಲ್ಲಾಪುರದಮ್ಮನ ದೇವಾಲಯದಲ್ಲಿ ನಡೆದ ತೃತೀಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವ್ಯವಹಾರಿಕ ಉದ್ದೇಶಗಳಿಗೆ ಆಂಗ್ಲಭಾಷೆ ಅಗತ್ಯವೆನಿಸಿದೆ ಆಗೆಂದ ಮಾತ್ರಕ್ಕೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಒಪ್ಪಿ ಕೊಳ್ಳಬೇಕೆ ವಿನಾ ಒಂದು ಮಾಧ್ಯಮವಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಕನ್ನಡ ಭಾಷೆಗಿಂತ ಸಮೃದ್ಧವಾದ ಭಾಷೆ ಇನ್ನೊಂದಿಲ್ಲ, ಕನ್ನಡ ಭಾಷೆಗೆ ತನ್ನದೇ ಆದ ಮಾನ್ಯತೆ ಇದ್ದು ಕನ್ನಡಿಗರೆಲ್ಲರೂ ಕನ್ನಡವನ್ನು ಗೌರವಿಸ ಬೇಕು, ಕನ್ನಡಕ್ಕೆ ಧಕ್ಕೆಯಾದಾಗ ಬೀದಿಗಿಳಿದು ಹೋರಾಡುವ ಬದ್ಧತೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಬೇಕೆಂದು ಅವರು ತಿಳಿಸಿದರು.
ಕನ್ನಡಕಲಿಕೆಗೆ ಸಾಕಷ್ಟು ಪ್ರೋತ್ಸಾಹ ದೊರೆಯಬೇಕಿದ್ದು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗ ಬೇಕಿದ್ದು, ಈ ನಿಟ್ಟಿನಲ್ಲಿ ಸಮ್ಮೇಳನಗಳು ನಿರ್ಣಯ ಕೈಗೊಳ್ಳಬೇಕೆಂದು ಅವರು ಸಲಹೆ ಇತ್ತರು.
ಹೆಮ್ಮೆಯ ಸಂಗತಿ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಈ ನೆಲ ಅಪಾರವಾದ ಕೊಡುಗೆ ನೀಡಿದ್ದು, ಹಲವು ಹಿರಿಯ ಸಾಹಿತಿಗಳು ಹುಟ್ಟಿದ ಈ ತಾಲೂಕಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ, ಭಾಷೆಯನ್ನು ಶ್ರೀಸಾಮಾನ್ಯರ ಬಳಿಗೆ ಕೊಂಡೊಯ್ಯವ ಕಾರ್ಯಮಾಡಬೇಕೆಂದು ಅವರು ತಿಳಿಸಿದರು.
ಮಹಾನ್ ಕವಿಗಳ ಪುಸ್ತಕಗಳು, ಸಾಹಿತ್ಯಗಳನ್ನು ಪ್ರತಿಯೊಬ್ಬರೂ ಓದಬೇಕು, ಆ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಬೇಕೆಂದ ಅವರು, ಯುವ ಸಾಹಿತಿಗಳು ಹಿರಿಯ ಸಾಹಿತಿಗಳ ಪ್ರೇರಣೆ ಪಡೆದು ಉತ್ತಮ ಸಾಹಿತ್ಯ ರೂಪಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಕಾವೇರಿ ರಾಜಕಾರಣ: ಕನ್ನಡಿಗರಿಗೆ ಕಾವೇರಿ ವಿಚಾರದಲ್ಲಿ ಪದೇಪದೆ ವಂಚನೆಯಾಗುತ್ತಲೇ ಇದ್ದು, ಕನ್ನಡನಾಡಿನ ವಾಸ್ತವದ ಸಂಗತಿಗಳನ್ನು ಅರ್ಥಮಾಡಿ ಕೊಳ್ಳದೆ ಕೇಂದ್ರಸರ್ಕಾರ ತಮಿಳರ ಪಕ್ಷಪಾತಿಯಾಗಿದ್ದರೆ ಇತ್ತ ದೆಹಲಿಯಲ್ಲಿ ದನಿ ಎತ್ತಬೇಕಾದ ನಮ್ಮ ನಾಡಿನ ರಾಜಕಾರಣಿಗಳು ಮತಕ್ಕಾಗಿ ಬಣ್ಣ ಬದಲಿಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ ಎಂದು ವಿಷಾದಿಸಿದರು.
ಅನಿವಾರ್ಯತೆ ಬರುವುದಿಲ್ಲ: ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ಡಾ. ಕೋ.ವೆಂ.ರಾಮಕೃಷ್ಣೇಗೌಡ ಮಾತನಾಡಿ, ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕಾರ್ಯ ಮಾಡದೆ, ತಮ್ಮ ಮಕ್ಕಳನ್ನು ಮೊದಲು ಕನ್ನಡ ಶಾಲೆಗೆ ಕಳುಹಿಸಿ ನಂತರ ಕನ್ನಡ ಶಾಲೆಗಳನ್ನು ಉಳಿಸುವ ಮಾತುಗಳನ್ನಾಡಬೇಕು, ತಮ್ಮ ಮಕ್ಕಳು ಕನ್ನಡ ಶಾಲೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಮುಂದಾದರೆ ಕನ್ನಡ ಶಾಲೆ ಮುಚ್ಚುವ ಅನಿವಾರ್ಯತೆಯೇ ಬರುವುದಿಲ್ಲ ಎಂದರು.
ವೇದಿಕೆಯಲ್ಲಿ ಕನ್ನಡ ಶಾಲೆ ಉಳಿಸುವ ಬಗ್ಗೆ, ಇಂಗ್ಲಿಷ್ ವಿರೋಧಿ ಮಾತುಗಳನ್ನಾಡಿ, ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್ ಶಾಲೆಗೆ ದಾಖಲಿಸುವುದು ಸರಿಯಲ್ಲ, ಮೊದಲು ನಾವು ಸರಿಯಿದ್ದೇವೆ ಎಂಬುದನ್ನು ಮನಗಂಡು ನಂತರ ಇನ್ನೊಬ್ಬರಿಗೆ ಸಲಹೆ ನೀಡಬೇಕೆಂದು ಚುಚ್ಚಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಜಿ.ಪಂ.ಸದಸ್ಯ ರಘುಕುಮಾರ್, ಕಸಾಪ ಮಾಜಿ ಅಧ್ಯಕ್ಷ ಸು.ತ.ರಾಮೇಗೌಡ, ತಾ.ಪಂ. ಅಧ್ಯಕ್ಷೆ ಶಾಂತಮ್ಮ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ತಾಲೂಕು ಘಟಕಗಳ ಅಧ್ಯಕ್ಷರುಗಳಾದ ಎಂ.ಶಿವಮಾದು, ಗಂ.ದಯಾನಂದ, ಮಧು, ಶಿವಲಿಂಗಯ್ಯ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್.ಕೆ.ಭೈರಲಿಂಗಯ್ಯ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಶಿವಸ್ವಾಮಿ ನಿರೂಪಿಸಿದರು. ಮಹೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

