ಎಸ್ಸೆಸ್ಸೆಲ್ಸಿ: ದೊಡ್ಡಬಳ್ಳಾಪುರದಲ್ಲಿ ಹೆಚ್ಚು ವಿದ್ಯಾರ್ಥಿಗಳು

Updated on: 

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ  ಮಾ.29
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.1ರಿಂದ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಖಾಸಗಿ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ 19, ನೆಲಮಂಗಲದಲ್ಲಿ 13, ದೇವನಹಳ್ಳಿಯಲ್ಲಿ 11, ಹೊಸಕೋಟೆಯಲ್ಲಿ 11, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಪಿ ಇಂಡಿಯನ್ ಪ್ರೌಢಶಾಲೆಯಲ್ಲಿ 1 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ 4 ತಾಲೂಕುಗಳ ಖಾಸಗಿ ವಿದ್ಯಾರ್ಥಿಗಳು ಬೆಂಗಳೂರಿನ ಬಿಪಿ ಇಂಡಿಯನ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಬೇಕಿದೆ. ಒಟ್ಟು 13, 460 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅತಿಹೆಚ್ಚು 3992, ಹೊಸಕೋಟೆಯಲ್ಲಿ 3765, ದೇವನಹಳ್ಳಿ ತಾಲೂಕಿನಲ್ಲಿ 3028 ಮತ್ತು ನೆಲಮಂಗಲ ತಾಲೂಕಿನಲ್ಲಿ 2675 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳು ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪತ್ರ ರವಾನಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದ್ದು, ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಜಿಲ್ಲೆಯಲ್ಲಿ ಅತಿದೊಡ್ಡ ಪರೀಕ್ಷಾ ಕೇಂದ್ರವಾಗಿದೆ.
ಕಟ್ಟುನಿಟ್ಟಿನ ಕ್ರಮ: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ಬರಲಿದ್ದು, ಸಾರ್ವಜನಿಕ ಪ್ರವೇಶ ನಿಷೇಧಿಸಲಾಗುವುದು. ಸಾರ್ವಜನಿಕ ಸಭೆ, ಧ್ವನಿವರ್ಧಕಗಳ ಬಳಕೆಗೆ ನಿಷೇಧ ಅನ್ವಯವಾಗಲಿದೆ. ಅಲ್ಲದೆ ಜೆರಾಕ್ಸ್ ಕೇಂದ್ರಗಳನ್ನು ಸಹ ಪರೀಕ್ಷಾ ಸಮಯದಲ್ಲಿ ಮುಚ್ಚಲು ಆದೇಶಿಸಲಾಗುವುದು.
ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೇಂದ್ರಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು. ನಿಯೋಜಿತ ಪರೀಕ್ಷಾ ಸಿಬ್ಬಂದಿ ಹೊರತು ಪಡಿಸಿ ಉಳಿದವರಿಗೆ ಪ್ರವೇಶ ನಿಷೇಧಿಸಲಾಗುತ್ತದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಪರಿಶೀಲನಾ ದಳಗಳು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಿದ್ದಾರೆ. ಕ್ಲಸ್ಟರ್ ಹಂತಗಳಲ್ಲಿ ಪರಿವೀಕ್ಷಣಾ ದಳಗಳನ್ನು ರಚಿಸಲಾಗುವುದು ಎಂದು ಬೆಂ.ಗ್ರಾ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com