ವಿದ್ಯುತ್ ಕಣ್ಣಾ ಮುಚ್ಚಾಲೆ ಬೆಸ್ಕಾಂ ಕಚೇರಿ ಮುತ್ತಿಗೆ (ಸುದ್ದಿ ಸಂಕ್ಷೇಪ)
ದೊಡ್ಡಬಳ್ಳಾಪುರ: ಒಂದೆಡೆ ಅಸಮರ್ಪಕ ವಿದ್ಯುತ್ ಪೂರೈಕೆ, ಮತ್ತೊಂದೆಡೆ ದಿಢೀರನೆ ಬರುವ ಹೈವೋಲ್ಟೇಜ್ನಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಉಂಟಾಗಿರುವ ನಷ್ಟ ತುಂಬಿಕೊಂಡುವಂತೆ ಒತ್ತಾಯಿಸಿ ದೊಡ್ಡಬೆಳವಂಗಲದ ಬೆಸ್ಕಾಂ ಕಚೇರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡ ಆರ್.ಚಂದ್ರತೇಜಸ್ವಿ, ಗ್ರಾಮೀಣ ಪ್ರದೇಶದಲ್ಲಿ 6 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವವಾಗಿ 2 ಗಂಟೆಯ ಕಾಲವೂ ಸಮರ್ಪಕವಾಗಿ ಕೊಡುತ್ತಿಲ್ಲ. ಈಗ ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಓದಲೂ ತೊಂದರೆಯಾಗುತ್ತಿದೆ. ಕೆರೆ-ಕುಂಟೆಗಳು ಒಣಗಿದ್ದು, ಬೆಳೆಗಳಿಗೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಕೊಳವೆ ಬಾವಿಯಿಂದ ನೀರೆತ್ತಲು ಪಂಪ್ಸೆಟ್ಗಳಿಗೆ ಕೂಡ ಸಮರ್ಪಕ ವಿದ್ಯುತ್ ಸರಬರಾಜಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜನರ ಅಹವಾಲು ಕೇಳುವವರೇ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಹಾದ್ರಿಪುರ, ಹುಸ್ಕೂರು, ಬೋಕಿಪುರ, ಚಿಕ್ಕಬೆಳವಂಗಲ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಅನಿಯಮಿತ ಮತ್ತು ಅಸಮರ್ಪಕ ಸರಬರಾಜಿನ ಪರಿಣಾಮ, ಹೈವೋಲ್ಟೇಜ್ಗೆ ಟಿವಿ, ಫ್ರಿಡ್ಜ್, ಫ್ಯಾನ್ಗಳು ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳು ಹಲವು ಮನೆಗಳಲ್ಲಿ ಸುಟ್ಟುಹೋಗಿದೆ. ಈ ನಷ್ಟವನ್ನು ವಿದ್ಯುತ್ ಇಲಾಖೆಯೇ ಭರಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ, ಮುಖಂಡರಾದ ರಾಮಕೃಷ್ಣ, ವಿಜಯಕುಮಾರ್, ದೇವರಾಜ್, ಮಂಜುನಾಥ್, ತಿಮ್ಮೇಶ್ಪ್ರಭು, ಬಸವರಾಜ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ವರ್ತೂರ್ ಏನೂ ಮಾಡಿಲ್ಲ
ಕೋಲಾರ: ಸಚಿವ ವರ್ತೂರು ಪ್ರಕಾಶ್ ಅವರು ಕುರುಬ ಸಮಾಜಕ್ಕೆ ಸೇರಿದವರಾದರೂ ಸಮಾಜದ ಏಳಿಗೆಗೆ ಏನನ್ನು ಮಾಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಜನತೆಯ ನಡುವೆ ಇದ್ದ ಸೌಹಾರ್ದತೆ ಹಾಳು ಮಾಡಿರುವುದೇ ಅವರ ಐದು ವರ್ಷಗಳ ಸಾಧನೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ನಾಗಭೂಷಣ್ ಟೀಕಿಸಿದರು. ಅವರು ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರ ಪರವಾಗಿ ನರಸಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿ, ಸಚಿವರು ಸುರಿಸುವ ಮೊಸಳೆ ಕಣ್ಣೀರಿಗೆ ಕುರುಬ ಜನಾಂಗ ಕರಗದೆ, ಸಚಿವರ ದೌರ್ಜನ್ಯಕ್ಕೆ ಹೆದರದೆ ಧೈರ್ಯವಾಗಿ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರನ್ನು ಬೆಂಬಲಿಸಬೇಕೆಂದು ತಿಳಿಸಿದರು. ಕುರುಬ ಜನಾಂಗದ ಯುವ ಮುಖಂಡ ಜಯಪ್ರಕಾಶ್ ನಾರಾಯಣ ಮಾತನಾಡಿ, ಕನಿಷ್ಠ ಕೋಲಾರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಕುರುಬರ ಹಾಸ್ಟೆಲ್ನ್ನು ಪೂರ್ಣಗೊಳಿಸಲಾಗದ ಸಚಿವರು ಇತರೆ ಸಮಾಜಕ್ಕೆ ಏನು ತಾನೇ ಮಾಡಿಯಾರು ಎಂದು ಪ್ರಶ್ನಿಸಿದರಲ್ಲದೆ, ಸಚಿವರ ಆಶ್ವಾಸನೆಗಳೆಲ್ಲಾ ಪೊಳ್ಳಾಗಿದ್ದು, ಇದನ್ನು ಮತದಾರರು ಅರಿತು ಜನಪರ ಕಾಳಜಿ ಇರುವ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕೋರಿದರು.
ಸಿಲಿಂಡರ್ ಸ್ಫೋಟ ಮಕ್ಕಳಿಗೆ ಗಾಯ
ಶಿಡ್ಲಘಟ್ಟ: ಅಡುಗೆ ಅನಿಲದ ಸೋರಿಕೆಯಿಂದ ಸಿಲಿಂಡರ್ ಸ್ಫೋಟಿಸಿ ಐವರು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಅನಿಲ್(11), ಆಶಾ (7), ಭಾನುಪ್ರಸಾದ್(7), ನೂತನ್(5), ಶಿಲ್ಪ(4) ಗಾಯಾಳುಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ರಂಗನಾಥ್ ಬಿನ್ ನರಸಿಂಹಾಚಾರಿ ಎಂಬುವವರ ಮನೆಯಲ್ಲಿ ಅವರ ಪತ್ನಿ ಪುಷ್ಪಾ ಎಂಬುವವರು ಅಡುಗೆ ಮಾಡಲು ಭರ್ತಿಯಾಗಿದ್ದ ಅನಿಲ ಸಿಲಿಂಡರ್ ಅಳವಡಿಕೆ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿದೆ. ಆ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸಿಡಿದಿದ್ದರಿಂದ ಮನೆಯ ಚಾವಣಿ ಕುಸಿದು ಬಿದ್ದಿದೆ. ಮನೆ ಸಂಪೂರ್ಣವಾಗಿ ಜಖಂಗೊಂಡು ನೆಲಕಚ್ಚಿದೆ. ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದ ಮಕ್ಕಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

