ಕ.ಪ್ರ.ವಾರ್ತೆ ರಾಮನಗರ ಮಾ.30
ವಕೀಲರು ತಮ್ಮ ವೃತ್ತಿ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾ. ಕೆ.ಎನ್.ಕೇಶವನಾರಾಯಣ ಕರೆ ನೀಡಿದರು.
ರಾಮನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ತಮ್ಮ ಸಂಘಟನೆಯ ಮೂಲಕ ಜನತೆಯಲ್ಲಿ ಕಾನೂನಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು. ನಮ್ಮದು ಹಳ್ಳಿಗಳ ದೇಶವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ, ನಮ್ಮಲ್ಲಿ ಬಹುಸಂಖ್ಯಾತರಿಗೆ ಕಾನೂನಿನ ಅರಿವಿನ ಕೊರತೆ ಕಾಡುತ್ತಿದೆ. ನಿವಾರಿಸುವುದು ಅನಿವಾರ್ಯ ಎಂದರು.
ಯೋಜನೆ ತಲುಪುತ್ತಿಲ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅದೆಷ್ಟೋ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜನತೆಗೆ ಕಾನೂನಿನ ಅರಿವಿದ್ದಾಗ ಅವ್ಯವಹಾರ, ಹಗರಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಕೇಶವನಾರಾಯಣ ಹೇಳಿದರು.
ವ್ಯವಸ್ಥೆಗೆ ಬೇಡಿಕೆ: ರಾಮನಗರದಲ್ಲಿ ವಕೀಲರ ಭವನಕ್ಕೆ ಸರ್ಕಾರದಿಂದ ನಿವೇಶನ ಮಂಜೂರಾಗಿದೆ. ಶೀಘ್ರದಲ್ಲಿಯೆ ಗುದ್ದಲಿ ಪೂಜೆಯನ್ನು ಮಾಡಲಾಗುವುದು. ರಾಮನಗರ ಜಿಲ್ಲಾ ಕೇಂದ್ರ ಆಗಿರುವುದರಿಂದ ಇಲ್ಲಿಗೆ ಕೌಟುಂಬಿಕ ನ್ಯಾಯಾಲಯ ಮತ್ತು ಕಾರ್ಮಿಕ ನ್ಯಾಯಾಲಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಕೀಲ ಎನ್. ಸುಬ್ಬಶಾಸ್ತ್ರಿ ಮನವಿ ಮಾಡಿದರು. ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ. ಪ್ರಹ್ಲಾದ್, ಪೀಠಾಸೀನಾಧಿಕಾರಿ ಕೆ. ಸುರೇಶ್, ಹಿರಿಯ ಸಿವಿಲ್ ನ್ಯಾಯಾಧೀಶೆ ವಿ. ಪುಷ್ಪಾವತಿ ಮಾತನಾಡಿದರು. ನ್ಯಾಯಾಧೀಶ ಕೆ.ನಾರಾಯಣಪ್ರಸಾದ್, ಸಿವಿಲ್ ನ್ಯಾಯಾಧೀಶೆ ಬಿ.ಕೆ.ಕೋಮಲ, ಕೆ.ಎನ್. ರೂಪ, ವಕೀಲರ ಸಂಘದ ಅಧ್ಯಕ್ಷೆ ಟಿ.ಕೆ. ಶಾಂತಪ್ಪ, ಉಪಾಧ್ಯಕ್ಷ ಸಿ.ಚಿಕ್ಕಪ್ಪಾಜಿ, ಕಾರ್ಯದರ್ಶಿ ಎಂ.ಜಿ.ಮಹೇಶ್, ಖಜಾಂಚಿ ಟಿ.ಎಂ. ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.