ದೊಡ್ಡಬಳ್ಳಾಪುರ ತಾ. ಅಭಿವೃದ್ಧಿ ಪ್ರಣಾಳಿಕೆಗೆ ಆದ್ಯತೆ ನೀಡಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 2
ನಮ್ಮ ಊರು ಹೇಗಿರಬೇಕು. ಇಲ್ಲಿ ಗೆಲ್ಲುವ ಶಾಸಕ ಮಾಡಬೇಕಾದ್ದೇನು, ಕ್ಷೇತ್ರದಲ್ಲಿ ಆಗಲೇಬೇಕಿರುವ ಗಣನೀಯ ಬದಲಾವಣೆಗಳೇನು, ಇಲ್ಲಿಯವರೆಗೆ ಯಾವ ಹಂತದಲ್ಲಿ ಅಭಿವೃದ್ಧಿಯ ನಿರ್ಲಕ್ಷ್ಯ ಅವ್ಯಾಹತ ನಡೆದಿದೆ, ಮುಂದೆ ಅದನ್ನು ತಪ್ಪಿಸಿ ಊರಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಹೊಣೆಯಾಧಾರಿತ ಜನಪ್ರತಿನಿಧಿ ಮಾಡಬೇಕಾದ್ದೇನು ಎಂಬ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳಿಗೊಂದು ಅಭಿವೃದ್ಧಿ ಪ್ರಣಾಳಿಕೆ ಸಿದ್ಧವಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಅಭಿವೃದ್ಧಿ ಕ್ರಾಂತಿ ವೇದಿಕೆ ಹೆಸರಿನಲ್ಲಿ ಒಟ್ಟುಗೂಡಿರುವ ಹಲವಾರು ಯುವಕರು ಊರಿನ ಬಗ್ಗೆ ಗಂಭೀರ ಕಾಳಜಿ ಹೊಂದಬೇಕಾದ ಅನಿವಾರ್ಯತೆಯನ್ನು ದೊಡ್ಡಬಳ್ಳಾಪುರ ತಾಲೂಕು ಅಭಿವೃದ್ಧಿ ಪ್ರಣಾಳಿಕೆ ಮೂಲಕ ವ್ಯಕ್ತಪಡಿಸಿದ್ದಾರೆ. ಮಾದರಿ ತಾಲೂಕಾಗಿ ದೊಡ್ಡಬಳ್ಳಾಪುರವನ್ನು ಕಾಣುವ ಮಹತ್ವಾಕಾಂಕ್ಷೆ ಈ ಯುವಕರದ್ದು. ಹೀಗಾಗಿ 20 ಅಂಶದ ಕಾರ್ಯಯೋಜನೆಯನ್ನು ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ತಲುಪಿಸಿದ್ದಾರೆ. ಇದಕ್ಕಾಗಿ 4 ಪುಟದ ಮುದ್ರಿತ ಪ್ರಣಾಳಿಕೆ ಸಿದ್ಧಗೊಂಡಿದ್ದು ಈಗಾಗಲೇ ಅಭ್ಯರ್ಥಿಗಳ ಕೈಸೇರಿದೆ. ಯಾರೇ ಗೆಲ್ಲಬಹುದು, ಆದರೆ ಗೆಲ್ಲುವ ವ್ಯಕ್ತಿ ಈ ಅಂಶಗಳತ್ತ ಗಮನ ಹರಿಸಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಪ್ರಜ್ಞಾಪೂರ್ವಕ ಒತ್ತಾಯ.
ಎಲ್ಲರಿಗೂ ರವಾನೆ: ಈಗಾಗಲೇ ಮುದ್ರಿತ ಅಭಿವೃದ್ಧಿ ಪ್ರಣಾಳಿಕೆಗಳನ್ನು ವೇದಿಕೆಯ ಸದಸ್ಯರು, ಈ ಬಾರಿ ಚುನಾವಣಾ ಕಣದಲ್ಲಿರುವ ಬಿಜೆಪಿಯ ಜೆ.ನರಸಿಂಹಸ್ವಾಮಿ, ಜೆಡಿಎಸ್ನ ಸಿ.ಚನ್ನಿಗಪ್ಪ, ಕಾಂಗ್ರೆಸ್ನ ಟಿ.ವೆಂಕಟರಮಣಯ್ಯ, ಬಿಎಸ್ಪಿಯ ಪುರುಷೋತ್ತಮ್, ಸಿಪಿಐ(ಎಂ)ನ ಚಂದ್ರತೇಜಸ್ವಿ, ಬಿಎಸ್ಆರ್ ಕಾಂಗ್ರೆಸ್ನ ಕುಮಾರ್, ಕೆಜೆಪಿಯ ವಿ.ನಾಗೇಂದ್ರಪ್ರಸಾದ್, ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡ ಅವರಿಗೆ ಸಲ್ಲಿಸಿ, ಪ್ರಣಾಳಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸುವ ವೇದಿಕೆಯ ಸದಸ್ಯರು ಇದೊಂದು ಹೊಸ ಪ್ರಯತ್ನ. ಸಾಮಾನ್ಯವಾಗಿ ಚುನಾವಣೆಗೆ ನಿಂತ ಅಭ್ಯರ್ಥಿಗಳು ಅವರವರ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಾರೆ, ಆದರೆ ಜನರು ತಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಮಾಡಬೇಕಾದ ಕೆಲಸಗಳ ಬಗ್ಗೆ ಒಂದು ನೀತಿ ಸಂಹಿತೆಯನ್ನು ಅಭ್ಯರ್ಥಿಗಳಿಗೆ ಕೊಡುವುದು ಹೊಸ ಪ್ರಯತ್ನ. ಇಲ್ಲಿ ಕ್ಷೇತ್ರದ ಅಭಿವೃದ್ಧಿಪರ ನಿಸ್ವಾರ್ಥ ಆಲೋಚನೆಗಳಿವೆ.ಇದಕ್ಕೆ ಎಲ್ಲರ ಬೆಂಬಲ ಮತ್ತು ಅನುಷ್ಠಾನದ ಇಚ್ಛಾಶಕ್ತಿ ಮುಖ್ಯ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

