ಕುಮಾರಸ್ವಾಮಿ ದಂಪತಿ, ಡಿಕೆಶಿ, ಯೋಗೇಶ್ವರ್ರಿಂದ ಮತದಾನ
ಕ.ಪ್ರ.ವಾರ್ತೆ ರಾಮನಗರ ಮೇ 5-
ಅವಳಿ ಕ್ಷೇತ್ರಗಳಾದ ರಾಮನಗರ ಮತ್ತು ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಗಳಾಗಿರುವ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ದಂಪತಿ, ಪುತ್ರ ನಿಖಿಲ್ಗೌಡ ಸಮೇತ ಮಾಗಡಿ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕುಮಾರಸ್ವಾಮಿ ದಂಪತಿ ರಾಮನಗರ ರಾಜಕಾರಣ ಪ್ರಾರಂಭಿಸಿದಾಗಿನಿಂದಲೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದಾರೆ.
ಇಬ್ಬರೂ ಮತ ಚಲಾವಣೆ ಬಳಿಕ ತಮ್ಮ ಸ್ಪರ್ಧೆಯ ಕ್ಷೇತ್ರಗಳಿಗೆ ತೆರಳಿ ಸಂಜೆವರೆಗೂ ಮತಗಟ್ಟೆಗಳ ಭೇಟಿ ಕಾರ್ಯಕ್ರಮ ಮುಂದುವರೆಸಿದರು.
ಡಿಕೆಶಿ ದಂಪತಿ ಮತ ಚಲಾವಣೆ: ಕನಕಪುರ ಕ್ಷೇತ್ರದ ದೊಡ್ಡಾಲಹಳ್ಳಿ ಮತಗಟ್ಟೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಜತೆಗೂಡಿ ಮತ ಹಾಕಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ರಾಮನಗರ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ ಮತಗಟ್ಟೆಯಲ್ಲಿ, ಶಾಸಕರಾದ ಕೆ.ರಾಜು ಮತ್ತು ಅಪ್ಸರ್ ಆಗಾ ರಾಮನಗರದಲ್ಲಿ ಮತದಾನ ಮಾಡಿದ್ದಾರೆ.
ಹಕ್ಕು ಚಲಾಯಿಸಿದ ಯೋಗೇಶ್ವರ್: ಚನ್ನಪಟ್ಟಣದ ಸಮಾಜವಾದಿ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆಯಲ್ಲಿ, ರಾಮನಗರದ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಹುಟ್ಟೂರು ಕೆಂಪೇಗೌಡನದೊಡ್ಡಿಯಲ್ಲಿ, ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಾದತ್ ಆಲಿಖಾನ್ ಚನ್ನಪಟ್ಟಣ ನಗರದಲ್ಲಿ ಮತ ಚಲಾಯಿಸಿದರು.
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ ಬಿಡದಿಯಲ್ಲಿ, ಅದೇ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಎಂ.ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ) ಹುಚ್ಚಹನುಮೇಗೌಡನ ದೊಡ್ಡಿ ಗ್ರಾಮದಲ್ಲಿ ಮತ ಚಲಾವಣೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರು ಹುಲಿಕಟ್ಟೆ ಮತಗಟ್ಟೆಯಲ್ಲಿ ಮತ ಹಾಕಿದರು.
ನಿಖಿಲ್ ಇದೇ ಮೊದಲು
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಇದೇ ಮೊದಲ ಬಾರಿಗೆ ಮತ ಚಲಾಯಿಸಿ, ಮತದಾನ ಪವಿತ್ರವಾಗಿದ್ದು, ಮತ ಚಲಾಯಿಸದವರಿಗೆ ಪ್ರಶ್ನಿಸುವ ಹಕ್ಕಿರದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ನಾನಿನ್ನೂ ತುಂಬಾ ಚಿಕ್ಕವನು, ರಾಜಕಾರಣಕ್ಕೆ ಬರುತ್ತೇನೆ. ಆದರೆ, ಈಗ ಸೂಕ್ತ ಸಂದರ್ಭವಲ್ಲ. ನನ್ನ ತಂದೆಯ ಹಾದಿಯಲ್ಲೇ ನಡೆಯುತ್ತೇನೆ. ಅವರಿಗಾಗಿಯಾದರೂ ನಾನು ಖಂಡಿತ ಸಕ್ರಿಯ ರಾಜಕಾರಣ ಪ್ರವೇಶಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

