ಬೆಂಗಳೂರು ಗ್ರಾಮಾಂತರ

10ರಂದು ವಸತಿ ಶಾಲೆ ಪ್ರವೇಶಕ್ಕೆ ಕೌನ್ಸೆಲಿಂಗ್

Published On :

ಸೂಲಿಬೆಲೆ: ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಮೇ 10ರಂದು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಹೆಚ್. ನಟರಾಜ್ ತಿಳಿಸಿದ್ದಾರೆ. 2013-14 ಸಾಲಿಗೆ ಈ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಾತಿ ಬಯಸಿದ ವಿದ್ಯಾರ್ಥಿಗಳಿಗೆ ಏ.24 ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯಲ್ಲಿ ವರ್ಗವಾರು ಮತ್ತು ಮೆರಿಟ್  ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಜಿಲ್ಲೆಯ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಕಳುಹಿಸಿಕೊಟ್ಟಿದ್ದು, ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಗಾಗಿ ಮೇ 10ರಂದು ದೇವನಹಳ್ಳಿಯ ಗಿರಿಯಮ್ಮ ಸರ್ಕಲ್ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ  ಆವರಣದಲ್ಲಿ ಕೌನ್ಸೆಲಿಂಗ್ ಏರ್ಪಡಿಸಲಾಗಿದೆ. ಆಯ್ಕೆಯಾಗಿರುವ ಹಾಗೂ ಹೆಚ್ಚುವರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಸೂಚಿತ ದಾಖಲಾತಿಗಳೊಂದಿಗೆ ಕೌನ್ಸೆಲಿಂಗ್ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಭೇಟಿ ಮಾಡುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ನೇಣು ಬಿಗಿದುಮಹಿಳೆ ಆತ್ಮಹತ್ಯೆ
ನೆಲಮಂಗಲ: ಮರವೊಂದಕ್ಕೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಪಟ್ಟಣ ಠಾಣೆಯ ವಾಜರಹಳ್ಳಿ ಮಾರುತಿ ಬಡಾವಣೆಯಲ್ಲಿ ನಡೆದಿದೆ.ಜ್ಯೋತಿ ನಗರದ ಭಾಗ್ಯಮ್ಮ (45) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಮಹಿಳೆಯು ಪತಿಯನ್ನು ಕಳೆದುಕೊಂಡು 4 ವರ್ಷಗಳಾಗಿದ್ದು ಜೀವನ ಸಾಗಿಸಲು ಕಷ್ಟಸಾಧ್ಯವಾದ್ದರಿಂದ ನೊಂದು ತಾನು ಉಟ್ಟಿದ್ದ ಸೀರೆಯಿಂದ ಸಂಪಿಗೆ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಂತ ಮತದಾನ:  ಅಭಿನಂದನೆ
ಕನಕಪುರ: ಕನಕಪುರ ವಿಧಾನಸಭಾ ಚುನಾವಣೆ ಯಾವುದೇ ಗಲಭೆ, ಗೊಂದಲಗಳಿಲ್ಲದೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು ಅತಿಹೆಚ್ಚು ಶೇ.90 ರಷ್ಟು ದಾಖಲೆಯ ಮತದಾನವಾಗಿದೆ. ಸಂಪೂರ್ಣ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲಾ ನಾಗರಿಕರಿಗೆ ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಳೆದ ರಾತ್ರಿ ಜೆಡಿಎಸ್ ಮುಖಂಡರು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ನೇತೃತ್ವದಲ್ಲಿ ಧರಣಿ ನಡೆಸಿದ್ದಾರೆ, ಮತಪೆಟ್ಟಿಗೆಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಂನಲ್ಲಿ ಒಂದುಗಂಟೆ ವಿದ್ಯುತ್ ವೈಫಲ್ಯವಾದ ಸಣ್ಣ ವಿಚಾರವನ್ನೇ ದೊಡ್ಡದು ಮಾಡಿ ರಂಪಾಟವಾಡಿದ್ದಾರೆ. ಇವಿಎಂ ಮತದಾನ ಯಂತ್ರಗಳನ್ನು ವ್ಯತ್ಯಯ ಮಾಡಲು ಸಾಧ್ಯವೇಇಲ್ಲ ಎಂಬುದು ಸ್ವಂತಃ ಎಂಜಿನಿಯರ್ ಆಗಿರುವ ಸಿಂಧ್ಯಾರಿಗೆ ತಿಳಿದಿದ್ದರೂ, ಟ್ಯಾಂಪರಿಂಗ್‌ನಡೆದಿರಬಹುದು ಎಂದು ಮನವಿ ನೀಡಿ ಮರುಮತದಾನಕ್ಕೆ ಆಗ್ರಹಿಸಿರುವುದು ನಗೆಪಾಟಲಿನ ಸಂಗತಿಯಾಗಿದೆ ಎಂದು ಡಿ.ಕೆ.ಸುರೇಶ್ ನುಡಿದರು. ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ವಿಜಯದೇವ್, ವಿ. ಶ್ರೀನಿವಾಸ್, ವಿ.ಆರ್. ಗಣೇಶ್, ವಿಶ್ವನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.