ಎಚ್ಡಿಕೆ ಇಂದು ನಗರಕ್ಕೆ, ತೆರೆದ ವಾಹನದಲ್ಲಿ ಮೆರವಣಿಗೆ: ಕೆ.ರಾಜು
ಕ.ಪ್ರ.ವಾರ್ತೆ, ರಾಮನಗರ , ಮೇ 15
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ವಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ರಾಮನಗರಕ್ಕೆ ಮೇ16ರಂದು ಆಗಮಿಸಲಿದ್ದಾರೆ.
ನಗರದ ಕಂದಾಯ ಇಲಾಖೆ ವೃತ್ತದಲ್ಲಿ ಬೆಳಗ್ಗೆ 11ಕ್ಕೆ ಕುಮಾರಸ್ವಾಮಿ ಅವರನ್ನು ಭವ್ಯ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೆರೆದ ವಾಹನದಲ್ಲಿ ಕುಮಾರಸ್ವಾಮಿ ಅವರನ್ನು ನಗರಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಶ್ರೀ ಚಾಮುಂಡೇಶ್ವರಿ, ಶ್ರೀ ಬಂಡಿ ಮಹಾಂಕಾಳಿ ನಗರ ದೇವರ ದೇಗುಲ, ಗಣಪತಿ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಕುಮಾರಸ್ವಾಮಿ ಪ್ರಾರ್ಥನೆ ಸಲ್ಲಿಸುವರು.
ಇದೆಲ್ಲದರ ಬಳಿಕ ನಗರದ ಹಳೆಯ ಬಸ್ ನಿಲ್ದಾಣ ಆವರಣದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಕುಮಾರಸ್ವಾಮಿ ಭಾಷಣ ಮಾಡುವರು. ಅವರೊಂದಿಗೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ರಾಜು ಹೇಳಿದರು.
ಪ್ರಚಾರವಿಲ್ಲದೆ ಗೆದ್ದರು: ಬಿಡುವಿಲ್ಲದ ರಾಜ್ಯ ಪ್ರವಾಸದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಪ್ರಚಾರ ನಡೆಸಿರಲಿಲ್ಲ. ಇಷ್ಟಾಗಿಯೂ ಕ್ಷೇತ್ರದ ಜನತೆ25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮತದಾರರ ನಿರೀಕ್ಷೆಗೂ ಮೀರಿ ಕುಮಾರಸ್ವಾಮಿ ಕೆಲಸ ಮಾಡಲಿದ್ದಾರೆ ಎಂದರು.
ವಿಪ ಸದಸ್ಯ ಅಪ್ಸರ್ ಆಗಾ, ಡಿ.ಗಿರೀಗೌಡ, ಕೆ.ದೇವೇಗೌಡ, ರಾಜಶೇಖರ್, ಎಚ್.ಸಿ.ರಾಜು, ಎಚ್.ಎಲ್.ಚಂದ್ರ, ಬಿ.ಉಮೇಶ್,ರಫೀಕ್ ಮೊಹಮದ್, ರಾ.ಶಿ.ದೇವರಾಜು, ದೊರೆಸ್ವಾಮಿ ಹಾಜರಿದ್ದರು.
ದಳದಲ್ಲಿ ಸ್ತ್ರೀ ಜಗಳ
ಕನ್ನಡಪರ ಹೋರಾಟಗಾರ್ತಿ ಉಮಾ ಮಂಜಪ್ಪ ಅವರನ್ನು ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಪ್ರಕಟಿಸುತ್ತಿದ್ದಂತೆಯೇ ಹಾಜರಿದ್ದ ಪಕ್ಷದ ಮಹಿಳಾ ಕಾರ್ಯಕರ್ತೆಯರು ಜಟಾಪಟಿಗೆ ಇಳಿದರು.
ಹತ್ತಾರು ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ನಿನ್ನೆ ಮೊನ್ನೆಯಷ್ಟೇ ಬಂದವರಿಗೆ ಪ್ರಮುಖ ಹುದ್ದೆ ನೀಡುವುದು ಯಾವ ನ್ಯಾಯ ಎಂದು ಪ್ರೇಮ, ಗಾಯಿತ್ರಿಬಾಯಿ ಮತ್ತಿಬ್ಬರು ಅಸಮಾಧಾನ ಹೊರಗೆಡವಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

