ಬೆಂಗಳೂರು ಗ್ರಾಮಾಂತರ

ಶಿವಕುಮಾರ್‌ಗೆ ಸಚಿವ ಸ್ಥಾನ ತಪ್ಪಲು ಕುಮಾರಸ್ವಾಮಿಯೇ ಕಾರಣ: ಆರೋಪ

Published On :

ಮಾಗಡಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಿತೂರಿಯಿಂದ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ತಪ್ಪಿದೆ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಎ.ಮಂಜು ಆರೋಪಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಕುತಂತ್ರ ಹಾಗೂ ಒಳಸಂಚು ಮಾಡಿ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾರಣದಿಂದಾಗಿ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಆಗಿದೆ. ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಹುನ್ನಾರ ನಡೆದಿದೆ ಎಂದು ಎಚ್‌ಡಿಕೆ ವಿರುದ್ದ ಆರೋಪ ಮಾಡಿದರು.
ಕೂಡಲೆ ಡಿಕೆಶಿಗೆ ಸಚಿವ ಸ್ಥಾನ ನೀಡದಿದ್ದರೆ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಸಮಿತಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲು ಸಮಿತಿ ಒಕ್ಕೊರಲಿನ ನಿರ್ಣಯ ಕೈಗೊಂಡಿದೆ ಎಂದರು. ಚ್‌ಡಿಕೆ ಪಾರುಪತ್ಯೆಯಿಂದ ಜಿಲ್ಲಾಭಿವೃದ್ಧಿ ಕುಂಠಿತಗೊಂಡಿದೆ, ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ರಾಮನಗರ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜೆಡಿಎಸ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಕೆಲ ಜೆಡಿಎಸ್ ಮುಖಂಡರು ಡಿಕೆಶಿಗೆ ಸಚಿವ ಸ್ಥಾನ ನೀಡುವಂತೆ ಪತ್ರಿಕಾ ಹೇಳಿಕೆ ನೀಡುವ ಮೂಲಕ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಎ.ಮಂಜು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಡಿ.ಕೆ.ಶಿವಕುಮಾರ್ ಅವರು ಪ್ರಬುದ್ಧ ರಾಜಕಾರಣಿ, ಉತ್ತಮ ಆಡಳಿತ ಸುಧಾರಕ, ಹೋರಾಟಗಾರ, ಹಿಡಿದ ಕೆಲಸ ಸಾಧಿಸುವ ಛಲಗಾರ. ಯಾವುದೇ ಅಡ್ಡಿ ಆತಂಕಗಳು ಬಂದರೂ ಎದೆಗುಂದಿಲ್ಲ. 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿ ಸೋಲಿಲ್ಲದ ಸರದಾರರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ದಿ. ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಡಿಕೆಶಿ ಉತ್ತಮ ಆಡಳಿತ ನೀಡಿದ್ದಾರೆ.
ಈ ಎಲ್ಲಾ ಅಂಶವನ್ನು ಪಕ್ಷದ ವರಿಷ್ಠರಿಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಮನವರಿಕೆ ಮಾಡಿಕೊಡಬೇಕು. ಕ್ಷೇತ್ರದ ಶಾಸಕರ  ದುರಾಡಳಿತ, ಸವಲತ್ತು ದುರುಪಯೋಗವಾಗಿರುವ ಅರಿವಿದೆ.  ಈಗ ಕಾಂಗ್ರೆಸ್ ಆಡಳಿತ. ನಾವು ಸಹ ಅಧಿಕಾರ ಚಲಾವಣೆ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪಟ್ಟಿಯನ್ನೇ ನೀಡಿ ಮನವರಿಕೆ ಮಾಡಿಕೊಡಲಾಗುವುದು. ಕಚೇರಿಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತೇವೆ ಎಂದರಲ್ಲದೆ.  ಕ್ಷೇತ್ರದಲ್ಲಿನ ಲೋಕೋಪಯೋಗಿ ಹಗರಣದ ವಿರುದ್ಧವೂ ಹೋರಾಟ ನಿಲ್ಲದು, ಖರೀದಿ ಮಾಡಿದವರು ಈಗ ಹೋರಾಟ ನಿಲ್ಲಿಸಿದ್ದಾರೆ ಎಂದು ಶಾಸಕರ ವಿರುದ್ಧ ಎ.ಮಂಜು ಟೀಕಾ ಪ್ರಹಾರ ನಡೆಸಿದರು. ಕ್ಷೇತ್ರದ ಬಹುತೇಕ ಶಿಕ್ಷಕರು, ಪಂಚಾಯ್ತಿ ಪಿಡಿಓಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು ಸಹ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ. ಇಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸಂಬಂಧಪಟ್ಟ ಸಚಿವರಿಗೆ ಶಿಪಾರಸು ಮಾಡುವುದಾಗಿ ಎಚ್ಚರಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಮಹೇಶ್, ಶಿವಕುಮಾರ್, ಎಸ್.ಮಹದೇವ್, ಮಾಜಿ ಅಧ್ಯಕ್ಷರಾದ ರಂಗಹನುಮಯ್ಯ, ಟಿ.ಭೋಗೇಶ್, ಕೆ.ಎಚ್.ಕೃಷ್ಣಮೂರ್ತಿ, ನಯಾಜ್, ನರಸಿಂಹಯ್ಯ ಮುತ್ತುರಾಜು,ಕಂಚೇಗೌಡ,ಕೆ.ವಿ. ಬಾಲು, ತಾ.ಪಂ. ಸದಸ್ಯೆ ತೇಜಸ್ವಿನಿ ಮುದ್ದಹನುಮೇಗೌಡ, ದೊಡ್ಡಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.