ಬೆಂಗಳೂರು ಗ್ರಾಮಾಂತರ

ಪ್ರಗತಿ ಪರಿಶೀಲನಾ ಸಭೆಗೆ ಉಸ್ತುವಾರಿ ಕಾರ್ಯದರ್ಶಿ ಗೈರು

Published On :

ಕ.ಪ್ರ.ವಾರ್ತೆ ರಾಮನಗರ  ಮೇ 23
ಪ್ರಗತಿ ಪರಿಶೀಲನಾ ಸಭೆಗೆ ಉಸ್ತುವಾರಿ ಕಾರ್ಯದರ್ಶಿ ಮಹಮದ್ ಸನಾವುಲ್ಲಾ ಗೈರು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಪರ್ಯಾಯ ಸಭೆ ನಡೆಸುವ ಮೂಲಕ ಅಧಿಕಾರಿಗಳಿಗೆ ನೀತಿಪಾಠ ಹೇಳಿದ್ದಾರೆ.
ಉಸ್ತುವಾರಿ ಕಾರ್ಯದರ್ಶಿಯಿಂದ ಗುರುವಾರ ಬೆಳಗ್ಗೆ 11ಕ್ಕೆ ಪ್ರಗತಿ ಪರಿಶೀಲನಾ ಸಭೆ ನಿಗದಿಯಾಗಿತ್ತು. ಜಿಲ್ಲೆಯ ಸಾಕಷ್ಟು ಅಧಿಕಾರಿಗಳು ಸಭೆಗೆ ಆಗಮಿಸಿದ್ದರು. ಸಭೆಯನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದ್ದರಿಂದ ಅಧಿಕಾರಿಗಳೆಲ್ಲ ಕಾದು ಬಸವಳಿದಿದ್ದರು.
ಕಡೆಗೆ, ಉಸ್ತುವಾರಿ ಕಾರ್ಯದರ್ಶಿ ಆಗಮನವಾಗಲಿಲ್ಲ. ಈ ಪರಿಣಾಮ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರೇ ಅಧ್ಯಕ್ಷಪೀಠ ಅಲಂಕರಿಸಿ, ಸಭೆ ನಡೆಸಿದರಾದರೂ ಅದು ಅಧಿಕೃತ ಪ್ರಗತಿ ಪರಿಶೀಲನಾ ಸಭೆ ಎನಿಸಲಿಲ್ಲ. ಸಭೆಯಲ್ಲಿ ಜಿಲ್ಲಾಧಿಕಾರಿ ಇಲಾಖಾವಾರು ವಿವರಗಳನ್ನು ಪಡೆದರು.
ಅಸಮಾಧಾನ ವ್ಯಕ್ತ : ಜಿಲ್ಲಾಡಳಿತ ಮತ್ತು ಸರ್ಕಾರದಿಂದ ಬಿಡುಗಡೆಗೊಂಡ ಕಳೆದ ಸಾಲಿನ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಜಿಲ್ಲಾ ಪಂಚಾಯಿತಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಶ್ರೀರಾಮರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಜಿ.ಪಂ. ಆಡಳಿತವು ಜಿಲ್ಲಾಡಳಿತದ ಅನುದಾನದಲ್ಲಿ ಶೇಕಡ 13 ಹಾಗೂ ಸರ್ಕಾರದ ಅನುದಾನದಲ್ಲಿ ಶೇಕಡ 77ರಷ್ಟು ಮೊತ್ತವನ್ನು ಬಳಸದ ಮಾಹಿತಿಗೆ ಜಿಲ್ಲಾಧಿಕಾರಿ ಆಕ್ಷೇಪಿಸಿದರು. ಅಂತೆಯೇ ಗುರಿ ಸಾಧಿಸದ ಅಧಿಕಾರಿಗಳನ್ನು ಎಚ್ಚರಿಸಿದರು. ಇಲಾಖಾವಾರು ಅನುದಾನ ಬಳಕೆಯ ಮಾಹಿತಿಯನ್ನು ಶೀಘ್ರವೇ ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು. ಈ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುವ ಅಧಿಕಾರಿಗಳು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಈ ಬಾರಿಯಾದರೂ ಪ್ರತಿಶತ ನೂರರಷ್ಟು ಗುರಿ ಸಾಧನೆಗೆ ಸೂಚಿಸಿದರು.
ವರದಿ ಮಂಡಿಸಿ: ಫಲಾನುಭವಿಗಳಿಗೆ ವಿತರಿಸಲು ಬಿಡುಗಡೆ ಆಗಿರುವ ಸಬ್ಸಿಡಿ ಮೊತ್ತ, ಫಲಾನುಭವಿಗಳ ಸಂಖ್ಯೆ ಮತ್ತು ವಿತರಣೆಯಾದ ಮೊತ್ತದ ವಿವರವನ್ನು ತ್ವರಿತವಾಗಿ ಮಂಡಿಸಬೇಕು. ಮುಂದಿನ 3 ತಿಂಗಳಿಗೆ ಹಾಕಿಕೊಂಡಿರುವ ಯೋಜನೆಯ ವಿವರ ಒದಗಿಸಬೇಕು ಎಂದು ಶ್ರೀರಾಮರೆಡ್ಡಿ ತಾಕೀತು ಮಾಡಿದರು.
ವಿವಿಧ ಇಲಾಖೆಗಳ ಕಳಪೆ ಸಾಧನೆಯಿಂದ ಜಿಲ್ಲೆ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.  ಸೂಕ್ತ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳು, ಕಲ್ಲು ಗಣಿಗಾರಿಕೆ ಸಹಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಅವರು ಸೂಚಿಸಿದರು.  
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.