ಗನ್ ಹಿಡಿದು ಪಿಎಸ್ಐ ವಿರುದ್ಧ ಎಗರಾಡಿದ ಪೇದೆ!
ಕ.ಪ್ರ. ವಾರ್ತೆ , ರಾಮನಗರ , ಮೇ 28
ಮಾಗಡಿ ಪೊಲೀಸ್ ಠಾಣೆ ಎದುರು ಬಂದೂಕು ಹೆಗಲಿಗೇರಿಸಿಕೊಂಡ ಪೇದೆಯೊಬ್ಬ ಪ್ರಭಾರ ಸಬ್ ಇನ್ಸ್ಪೆಕ್ಟರ್ ಅವರನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಠಾಣೆಯಲ್ಲಿ ಪೇದೆಯು ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಕೊಂದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಪೊಲೀಸ್ ವ್ಯವಸ್ಥೆಯ ನ್ಯೂನತೆಗಳನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ಏಕೆ ಹೀಗಾಯ್ತು?: ಪೇದೆ ನವೀನ್ ಮಾಗಡಿಯಲ್ಲಿ 4 ವರ್ಷದಿಂದ ಕರ್ತವ್ಯದಲ್ಲಿದ್ದು ಕುಂಬಳಗೂಡು ಠಾಣೆ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಅವರು ವಾರದಿಂದಷ್ಟೇ ಮಾಗಡಿ ಠಾಣೆಯಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾಸ್ಕರ್ ಅವರು ಬಂದ ನಂತರ ನವೀನ್ ಮೇ 24 ಮತ್ತು 25ರಂದು ಕರ್ತವ್ಯಕ್ಕೆ ಗೈರಾಗಿದ್ದರು ಎನ್ನಲಾಗಿದೆ. ಭಾನುವಾರ ಕರ್ತವ್ಯಕ್ಕೆ ಆಗಮಿಸಿದ್ದ ನವೀನ್ ಮಾಗಡಿ ಪಟ್ಟಣದ ತಿರುಮಲೆ ರಂಗನಾಥಸ್ವಾಮಿ ದೇವರ ವಜ್ರ ಕಿರೀಟ ಧಾರಣಾ ಮಹೋತ್ಸವದ ಭದ್ರತಾ ಕೆಲಸದಲ್ಲಿ ಭಾಗವಹಿಸಿದ್ದರು. ಬಳಿಕ ಸೋಮವಾರ ರಾತ್ರಿ ಪಾಳಿಗೆ ಬಂದ ನವೀನ್ ಅವರನ್ನು ಅನಧಿಕೃತ ಗೈರು ಹಾಜರಿ ಬಗ್ಗೆ ಭಾಸ್ಕರ್ ಅವರು ವಿಚಾರಣೆಗೊಳಪಡಿಸಿದ್ದಾರೆ.
ಆಗ ಪರಸ್ಪರ ಮಾತಿನ ಚಕಮಕಿ ನಡೆದಿದ್ದು ತಾಳ್ಮೆ ಕಳೆದುಕೊಂಡ ಭಾಸ್ಕರ್ ಪಿಸ್ತೂಲ್ನಿಂದ ನಿನ್ನನ್ನು ಸುಟ್ಟು ಹಾಕ್ತೀನಿ ಎಂದು ಬೆದರಿಸಿದ್ದಾರೆ. ನಿನ್ನ ಮೇಲೆ ಸಾರ್ವಜನಿಕರಿಂದ ದೂರುಗಳಿವೆ, ಮನೆಗೆ ಕಳಿಸ್ಬಿಡ್ತೀನಿ ಎಂದೆಲ್ಲಾ ಹೇಳುತ್ತಾ ವಾಚಾಮಗೋಚರ ನಿಂದಿಸಿದ್ದಾರೆ. ವಿಚಾರಣೆ ಮುಗಿಸಿ ಭಾಸ್ಕರ್ ನಿರ್ಗಮಿಸಿದ ಮರುಕ್ಷಣವೇ ಉದ್ರಿಕ್ತಗೊಂಡ ಪೇದೆ ನವೀನ್ ಬಂದೂಕು ಹೆಗಲಿಗೇರಿಸಿಕೊಂಡು ಅಬ್ಬರಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಪಿಸ್ತೂಲು ತೋರಿಸಿ ನನ್ನನ್ನೇ ಸುಟ್ಟು ಹಾಕ್ತೀನಿ ಎನ್ನುತ್ತಾನೆ. ನಾನೂ ಖಾಕಿ ತೊಟ್ಟ ಪೊಲೀಸ್, ನನ್ನ ಬಳಿಯೂ ಈಗ ಬಂದೂಕು ಇದೆ. ಆತ ಬರಲಿ ನಾನೇ ಸಾಯಿಸ್ತೇನೆ ಎಂದು ಆವೇಶಭರಿತವಾಗಿ ಮಾತನಾಡಿದ್ದಾರೆ. ಠಾಣೆಯಲ್ಲಿದ್ದ ಪೇದೆಗಳು ಉದ್ರಿಕ್ತ ನವೀನ್ ಅವರನ್ನು ಸಮಾಧಾನಪಡಿಸಿ ಬಂದೂಕು ಕಸಿದುಕೊಂಡಿದ್ದಾರೆ. ಇದೇ ವೇಳೆ ನವೀನ್ 'ನನಗೆ ಭಾಸ್ಕರ್ ಕಿರುಕುಳ ನೀಡಿದರಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ' ಎಂದು ಮೊಬೈಲ್ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

